Advertisement

Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ

02:46 PM Jul 07, 2024 | Team Udayavani |

ಕಲಬುರಗಿ: ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದಾದ ದಾಸ ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣದ ಧ್ಯೇಯವನ್ನು ಹೊಂದಿದೆ ಎಂದು ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಹೇಳಿದರು.

Advertisement

ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕ್ಷೇತ್ರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ರವಿವಾರ ಆಯೋಜಿಸಿದ್ದ ಎರಡನೇ ಕಲಬುರಗಿ ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾಸ ಸಾಹಿತ್ಯವು ಭಕ್ತಿ ಸಾಹಿತ್ಯದ ಪ್ರಾತಿನಿಧಿಕವಾಗಿವೆ. ಜೈನರ ಕಾಲದಲ್ಲಿ ಜಿನ ಭಕ್ತಿಯಾಗಿ, ಶರಣರ ಕಾಲದಲ್ಲಿ ಶಿವಭಕ್ತಿಯಾಗಿ, ದಾಸರ ಕಾಲದಲ್ಲಿ ವಿಷ್ಣು ಭಕ್ತಿಯಾಗಿ ಹೊರಹೊಮ್ಮಿತು. ದೈವಭಕ್ತಿ ಕೇಂದ್ರಿತ ಚಿಂತನೆಗಳ ಕೀರ್ತನೆಗಳನ್ನು ದಾಸರು ರಚಿಸಿದರೂ ಮಾನವ ಘನತೆಯನ್ನು ಎತ್ತಿ ಹಿಡಿದು, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಯಾವುದೇ ನಿರ್ದಿಷ್ಟ ಸಮಾಜದ ಪರವಾಗಿ ದಾಸರ ಕೀರ್ತನೆಗಳು ಇರದೇ ಸರ್ವ ಸಮಾಜದ ಜನರನ್ನು ಉದ್ದೇಶಿಸಿ ಬರೆದವುಗಳಾಗಿವೆ. ಸರ್ವ ಜನಾಂಗದ ಶ್ರೇಯಸ್ಸು ಬಯಸುವುದೇ ದಾಸ ಸಾಹಿತ್ಯದ ಉದ್ದೇಶವಾಗಿದೆ ಎಂದರು.

ಕಲ್ಯಾಣ ಕರ್ನಾಟಕವು ದಾಸ ಸಾಹಿತ್ಯದ ಆಡಂಬೊಲವಾಗಿದೆ. ಈ ವಿಭಾಗದಲ್ಲಿಯೇ ಅತಿಹೆಚ್ಚು ದಾಸರು ಆಗಿ ಹೋಗಿದ್ದಾರೆ. ಜಾತ್ಯಾತೀತ, ಮಠಾತೀತವಾಗಿ, ಮತಾತೀತವಾಗಿ ಎಲ್ಲರಿಗೂ ದಾಸರ ಹಾಡುಗಳು ಮುದ ನೀಡುತ್ತವೆ ಎಂದರು.

ದಾಸ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಮುಖ್ಯವಾಗಿ ತರುಣ ಜನಾಂಗಕ್ಕೆ ಮನುಷ್ಯ ಜನ್ಮದ ಮಹತ್ವದ ಅರಿವು ಮೂಡಿಸಬೇಕಿದೆ. ಇದಕ್ಕಾಗಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ತೆಗೆಯಬೇಕಾಗಿದೆ ಎಂದು ಡಾ.‌ವಾಸುದೇವ ಅಗ್ನಿಹೋತ್ರಿ ಸಲಹೆ ನೀಡಿದರು.

Advertisement

ವಚನ ಸಾಹಿತ್ಯ- ದಾಸ ಸಾಹಿತ್ಯ ಮುಂದಿನ ಪೀಳಿಗೆಗೆ ತಲುಪಲಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ ಸಮ್ಮೇಳನ ಉದ್ಘಾಟಿಸಿ, 12 ನೇ ಶತಮಾನದ ಬಸವಾದಿ ಶರಣರ ಹಾಗೂ 15 ಶತಮಾನದ ದಾಸ ಸಾಹಿತ್ಯದ ತತ್ವಗಳು ಹಾಗೂ ಸಂದೇಶಗಳು ಇಂದಿನ ಯುವ ಜನಾಂಗ ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ವ್ಯಾಪಕವಾಗಿ ನಡೆಯಬೇಕಿದೆ. ಕಸಾಪ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಗುಲ್ಬರ್ಗ ವಿವಿಯಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ಇದೇ ಸಂದರ್ಭದಲ್ಲಿ ರಾಮಾಚಾರ್ಯ ಘಂಟಿ, ಕೃಷ್ಣಾಜೀ ಕುಲಕರ್ಣಿ, ವಾದಿರಾಜ ವ್ಯಾಸಮುದ್ರ, ಡಾ.‌ಪ್ರಲ್ಹಾದ ಬುರಲಿ, ಬಾಬುರಾವ ಸೇರಿಕಾರ ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹರಿದಾಸ ರತ್ನ ಪ್ರಶಸ್ತಿ ನೀಡಿ ಪುರಸ್ಕೃರಿಸಲಾಯಿತು. ಆಕಾಶವಾಣಿ ನಿವೃತ್ತ ಅಧಿಕಾರಿ ಸದಾನಂದ ಪೆರ್ಲ ಅವರ ಕನ್ನಡದ ಕೃಷ್ಣ ಕೃತಿ ಬಿಡುಗಡೆಗೊಳಿಸಲಾಯಿತು.

ಹಿರಿಯ ಸಾಹಿತಿ ಡಾ.‌ಸ್ವಾಮಿರಾವ ಕುಲಕರ್ಣಿ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯನಿ ಆನಂದ ದಂಡೋತಿ, ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಸೇರಿದಂತೆ ಮುಂತಾದವರಿದ್ದರು. ಕಸಾಪ ದಕ್ಷಿಣ ವಲಯ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಧರ್ಮಣ್ಣ ಧನ್ನಿ ಸ್ವಾಗತಿಸಿದರು.  ಪ್ರೊ.‌ನರೇಂದ್ರ ಬಡಶೇಷಿ ನಿರೂಪಿಸಿದರು. ತದನಂತರ ಅಮೃತ ಸಿಂಚನ ಗೋಷ್ಠಿ ಹಾಗೂ ದಾಸರ ಹಾಡಿನ ಸ್ಪರ್ಧೆ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next