ಕಲಬುರಗಿ: ಕೋವಿಡ್-19 ನಿಯಂತ್ರಣ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಆಶಾ ಕಾರ್ಯಕರ್ತೆ ಶಾರದಾ (42) ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಮಾಗಣಗೇರಾ ಗ್ರಾಮದ ನಿವಾಸಿಯಾಗಿದ್ದ ಶಾರದಾ ಮೇ 15ರಂದು ಕೋವಿಡ್ ಕುರಿತಾದ ಸಭೆಗೆ ತನ್ನ ಪತಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಬಿದ್ದು ಮೃತಪಟ್ಟಿದ್ದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಮೃತಪಡುವ ವಾರಿಯರ್ಸ್‌ಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನ ಜೀವ ವಿಮೆಯಡಿ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಅದರಂತೆ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿರುವ ಶಾರದಾ ಕುಟುಂಬಕ್ಕೆ ಪರಿಹಾರ ಕೊಡಿಸಲು ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಮನವಿ ಸಲ್ಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದ್ದಾರೆ.
ಏನಿದು ಘಟನೆ? ಜೀವರ್ಗಿ ತಾಲೂಕಿನ ಮಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾರದಾ ಸೇವೆ ಸಲ್ಲಿಸುತ್ತಿದ್ದರು. ಮೇ 15ರಂದು ಕೋವಿಡ್-19 ಸೋಂಕು ನಿಯಂತ್ರಣ ಕುರಿತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಶಾರದಾ ತಮ್ಮ ಗ್ರಾಮದಿಂದ ಸಭೆಗೆಂದು ಪತಿಯ ಬೈಕ್ ನಲ್ಲಿ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ, ಕೆಲ್ಲೂರು ಗ್ರಾಮದ ಸಮೀಪ ದಾರಿ ನಡುವೆ ಆಯತಪ್ಪಿ ಬೈಕ್ ನಿಂದ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅವರು ಮಾರ್ಗ ಮಧ್ಯೆಯೇ ಶಾರದಾ ಅವರು ಕೊನೆಯುಸಿರೆಳೆದಿದ್ದರು.