Advertisement

ಅಲೆಮಾರಿಗಳಿಗೆ ಆಹಾರ ಕಿಟ್‌ ವಿತರಣೆ

05:34 PM Apr 13, 2020 | Naveen |

ಕಲಬುರಗಿ: ನಗರದ ಕೇಂದ್ರೀಯ ಬಸ್‌ ನಿಲ್ದಾಣದ ಪಕ್ಕದಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಜನಾಂಗದವರು ತಮಗೆ ತಿನ್ನಲು ಆಹಾರವಿಲ್ಲ, ಹೊರಗೆ ಹೋದರೆ ಪೊಲೀಸರ ಭಯವಿದ್ದು, ದಯವಿಟ್ಟು ಸಹಾಯಕ್ಕೆ ಬನ್ನಿ ಎಂದು ಅಂಗಲಾಚಿದ್ದೇ ತಡ ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾಡಳಿತದ ಆಹಾರ ಸಮಿತಿ ತಂಡ ಅಲೆಮಾರಿಗಳ ಗುಡಿಸಲಿಗೆ ಹೋಗಿ, ಆಹಾರ ಪದಾರ್ಥ ಸಾಮಗ್ರಿಗಳ ಕಿಟ್‌ ವಿತರಿಸಿತು.

Advertisement

ಬಸ್‌ ನಿಲ್ದಾಣದ ಬಳಿ ಕಣ್ಣಿ ಮಾರ್ಕೇಟ್‌ಗೆ ಹೊಂದಿಕೊಂಡಂತೆ ಜೋಪಡಿ, ಟೆಂಟ್‌ ಹಾಕಿಕೊಂಡಿರುವ ಈ ನಿವಾಸಿಗಳು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ ಪರಿಣಾಮ ಕೈಯಲ್ಲಿ ಕಾಸಿಲ್ಲದೇ ಊಟಕ್ಕೆ ಪರದಾಡುವಂತಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ರವಿವಾರ ಮಧ್ಯಾಹ್ನ ಅಲ್ಲಿನ ಕುಟುಂಬಗಳು ಆಹಾರ ಪದಾರ್ಥ ನೀಡುವಂತೆ ಬೇಡಿಕೊಂಡಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಈ ಮಾಹಿತಿ ಮಧ್ಯಾಹ್ನ 3:30ಕ್ಕೆ ದೊರೆತ ಕೂಡಲೇ, ಇದನ್ನು ಜಿಲ್ಲಾಡಳಿತದ ಆಹಾರ ಸಮಿತಿ ಮುಖ್ಯಸ್ಥರಾದ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಅವರಿಗೆ ರವಾನಿಸಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರವೀಣ್‌ ಪ್ರಿಯಾ ಅವರು ಅಧಿಕಾರಿಗಳ ತಂಡವನ್ನು ಕಣ್ಣಿ ಮಾರ್ಕೆಟ್‌ ಪ್ರದೇಶಕ್ಕೆ ಕಳುಹಿಸಿ ವಿವರ ಪಡೆದು, ಸಂಜೆ 5 ಗಂಟೆಯೊಳಗಾಗಿ ಆಹಾರ ಸಮಿತಿ ಸದಸ್ಯರಾದ ಆಹಾರ ಸುರಕ್ಷತಾ ಅಧಿಕಾರಿ ಡಾ| ದೀಪಕ್‌ ಸುಖೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷ ಹಾಗೂ ನಿರಾಶ್ರಿತ ಪರಿಹಾರ ಕೇಂದ್ರದ ಮುಖ್ಯಸ್ಥ ಸಂಗಮನಾಥ ಮೋದಿ ಅವರ ಸಮಕ್ಷಮ ಕಣ್ಣಿ ಮಾರ್ಕೆಟ್‌ ಪ್ರದೇಶದಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುತ್ತಿರುವ ಎಲ್ಲ 31 ಕುಟುಂಬಗಳಿಗೆ ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಖಾರದ ಪುಡಿ, ಉಪ್ಪು ಹೀಗೆ ಆಹಾರ ಪದಾರ್ಥಗಳ ಕಿಟ್‌ ಗಳನ್ನು ಪ್ರತ್ಯೇಕವಾಗಿ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next