Advertisement

ಕಲಬುರಗಿಗೆ ಪ್ರಧಾನಿ: ಮಳಖೇಡ ಬಳಿ ವಿಶಾಲವಾದ 60 ಎಕರೆಯಲ್ಲಿ ಕಾರ್ಯಕ್ರಮ ಸಿದ್ದತೆ

05:31 PM Jan 10, 2023 | Team Udayavani |

ಕಲಬುರಗಿ: ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಜನವರಿ 19ಕ್ಕೆ ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

Advertisement

ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಕೆಕೆಆರ್ ಟಿಸಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ರಾಜಕುಮಾರ ಪಾಟೀಲ್ ತೇಲ್ಕೂರ ಹಾಗೂ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿಯಾಗಿ ಸಭೆ ನಡೆಸಿದರು.

ಸೇಡಂ ತಾಲೂಕಿನ ಮಳಖೇಡ ಬಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 60 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಐತಿಹಾಸಿಕ 30 ಸಾವಿರ ಸೇರಿದಂತೆ ವಿವಿಧ ಫಲಾನಭವಿಗಳು ಪಾಲ್ಗೊಳ್ಳಲಿದ್ದಾರೆ.‌ ಪ್ರಧಾನಮಂತ್ರಿಗಳು ಅಂದು ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ಜಿಲ್ಲೆಯ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡುವರು.

ಕಾರ್ಯಕ್ರಮ ಸುಗಮ ನಿರ್ವಹಣೆ ಮತು ಯಶಸ್ಸಿಗೆ ವಿವಿಧ 10 ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಅಧಿಕಾರಿಗಳಿಗೆ ನೀಡಲಾಗುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ಸಮರ್ಪಕವಾಗಿ ನಿರ್ವಹಿಸಬೇಕು. ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ, ಸಾರ್ವಜನಿಕರ ಮತ್ತು ಗಣ್ಯರ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಭದ್ರತೆ ಹೀಗೆ ಎಲ್ಲವು ಅಚ್ಚುಕಟ್ಟಾಗಿರಬೇಕು. ಮುನ್ನಚ್ಚರಿಕೆಯಾಗಿ ಕಾರ್ಯಕ್ರಮ ಸ್ಥಳದಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ವಾಹನ ತೈನಾತಿಸಬೇಕು. ಬೇರೆ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಯಾವುದೇ ಲೋಪಕ್ಕೆ ಇಲ್ಲಿ ಅವಕಾಶವಿಲ್ಲ. ಸಣ್ಣ-ಪುಟ್ಟ ಏನೇ ಸಮಸ್ಯೆ ಇದ್ದರು ತಮ್ಮ ಗಮನಕ್ಕೆ ತರಬೇಕು ಎಂದು ತೇಲ್ಕೂರ, ರೇವೂರ ಹಾಗೂ ಡಿ.ಸಿ. ಯಶವಂತ ವಿ. ಗುರುಕರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಜಿಲ್ಲೆಯ ವಿವಿಧ ಸ್ಥಳಗಳಿಂದ ಫಲಾನುಭವಿಗಳನ್ನು ಕರೆತರಲು 2,500 ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಕೆ.ಕೆ.ಅರ್.ಟಿ.ಸಿ. ಸಂಸ್ಥೆಯ ಎಂ.ಡಿ. ರಾಚಪ್ಪ ಅವರಿಗೆ ತಿಳಿಸಿದರು. ಇನ್ನು ಮಳಖೇಡ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುಂಜಾಗ್ರತವಾಗಿ ಸಿ.ಎಚ್.ಸಿ. ಕೇಂದ್ರಕ್ಕೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಡಿ.ಎಚ್.ಓ ಡಾ.ರಾಜಶೇಖರ ಮಾಲಿ ಅವರಿಗೆ ಡಿ.ಸಿ. ನಿರ್ದೇಶನ ನೀಡಿದರು.

Advertisement

ಅಧಿಕಾರಿಗಳು ಕೇಂದ್ರಸ್ಥಾನ ಬಿಡುವಂತಿಲ್ಲ: ಪ್ರಧಾನ ಮಂತ್ರಿಗಳ ಪ್ರವಾಸ ಹಿನ್ನೆಲೆಯಲ್ಲಿ ಜನವರಿ 20ರ ವರೆಗೆ ಜಿಲ್ಲೆಯ ಯಾವುದೇ ಅಧಿಕಾರಿ-ಸಿಬ್ಬಂದಿ ಕೇಂದ್ರಸ್ಥಾನ ಬಿಡುವಂತಿಲ್ಲ. ಅಲ್ಲದೇ ಪ್ರತಿ ಕಚೇರಿಯಲ್ಲಿ ಶೇ.100ರ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಬೇಕು. ಕೇಂದ್ರಸ್ಥಾನ ಬಿಡಬೇಕಾದಲ್ಲಿ ತಮ್ಮ ಅನುಮತಿ ಅಗತ್ಯ. ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ಡಿ.ಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಅಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತರಾದ ಮಮತಾ ಕುಮಾರಿ, ಕಾರ್ತಿಕ್ ಸೇರಿದಂತೆ ಎಸ್.ಪಿ.ಜಿ. ಭದ್ರತಾ ತಂಡದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ತಹಶೀಲ್ದಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next