Advertisement

ಬಿಜೆಪಿ-ಕಾಂಗ್ರೆಸ್‌ ಪಕ್ಷಕ್ಕೆ ಬಂಡಾಯದ ಬಿಸಿ

05:00 PM Aug 24, 2021 | Team Udayavani |

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಗೆ ಎಲ್ಲವನ್ನು ಅಳೆದು ತೂಗಿ, ಟಿಕೆಟ್‌ ವಂಚಿತರ್ಯಾರು ಬಂಡಾಯ ಇಲ್ಲವೇ ಪಕ್ಷಾಂತರ ಮಾಡ ಬಾರದು ಎಂದು ನಾಮಪತ್ರ ಸಲ್ಲಿಕೆಯ ದಿನದಂದೇ ಸ್ಪರ್ಧಾ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.

Advertisement

ಟಿಕೆಟ್‌ ವಂಚಿತರು ಪಕ್ಷೇತರ ಇಲ್ಲವೇ ಬೇರೆ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ರಂಗು ಕಾವೇರಿ ದಂತಾಗಿದೆಯಲ್ಲದೇ ರಾಜಕೀಯ
ಪಕ್ಷಗಳಲ್ಲಿ ಸಂಚಲನ ಮೂಡಿದೆ.ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಟಿಕೆಟ್‌ ದೊರೆತವರು ಬೆಂಬಲಿಗರು ಹಾಗೂ ಬೈಕ್‌ ರ‍್ಯಾಲಿ ಮುಖಾಂತರ
ನಾಮಪತ್ರ ಸಲ್ಲಿಸಿರುವುದು ಕಂಡುಬಂತು.

ಟಿಕೆಟ್‌ದಿಂದ ವಂಚಿತರಾದವರು ಪಕ್ಷೇತರಾಗಿ ಹಾಗೂ ಇನ್ನೂ ಕೆಲವರು ಜೆಡಿಎಸ್‌ ಇಲ್ಲವೇ ಆಮ್‌ ಆದ್ಮಿ ಹಾಗೂ ಎಂಐಎಂಐಎಂ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಗಳಲ್ಲೂ ಪರಿಶಿಷ್ಟ ಜಾತಿ ಹಾಗೂ ಇತರ ಪ್ರವರ್ಗಗಳಿಗೆ ಟಿಕೆಟ್‌ ನೀಡಿರುವುದು ಹಾಗೂ ಈಗಾಗಲೇ ಕೆಲಸ ಮಾಡಿ ಟಿಕೆಟ್‌ ನೀಡ್ತೇವೆ ಎಂಬುದಾಗಿ ಹೇಳಿ ಕೊನೆಗಳಿಗೆಯಲ್ಲಿ ಬೇರೆಯವರಿಗೆ ಮಣೆ ಹಾಕಿರುವುದು ಚುನಾವಣೆಯಲ್ಲಿ ಭಾರಿ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಈ ಎರಡೂ ಪಕ್ಷದಲ್ಲಿ ಟಿಕೆಟ್‌ ಪಟ್ಟಿಯಿಂದ ಅಸಮಾಧಾನ ಉಂಟಾಗಿದ್ದು, ಚುನಾವಣೆ ಮೇಲೆ ಪರಿಣಾಮ ಬೀಳುವುದು ನಿಶ್ಚಿತ ಎನ್ನಲಾಗುತ್ತಿದೆ. ಪಕ್ಷದ ಮುಖಂಡರು ತಮ್ಮ ಹಿಂಬಾಲಕರಿಗೆ ಟಿಕೆಟ್‌ ಹಂಚಿಕೆಯಲ್ಲಿ ಮಣೆ ಹಾಕಿರುವುದು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಣೆಗಣಿಸಲಾಗಿರುವುದು ಎರಡೂ ಪಕ್ಷಗಳಿಂದ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಇದನ್ನೂ ಓದಿ:ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ಪ್ರಕರಣ: ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ

Advertisement

ಪಾಲಿಕೆಯಲ್ಲಿ ಈ ಸಲ ಬಿಜೆಪಿ ಆಡಳಿತ ಶುರುವಾಗಬೇಕೆಂದು ಪಕ್ಷದ ವರಿಷ್ಠರು ತಂತ್ರಗಾರಿಕೆ ರೂಪಿಸಿದ್ದರಿಂದ ಜತೆಗೆ ಕಾಂಗ್ರೆಸ್‌ ಪಕ್ಷವು ತನ್ನ ಕೈದಿಂದ ಪಾಲಿಕೆ ಆಡಳಿತ ಕೈ ಜಾರಬಾರದು ಎಂದುಕೊಂಡು ಸವಾಲಾಗಿ ತೆಗೆದುಕೊಂಡಿದ್ದರಿಂದ ಬಹು ಮುಖ್ಯವಾಗಿ ಜೆಡಿಎಸ್‌ ಪಕ್ಷವು ತನ್ನ
ಸಹಾಯವಿಲ್ಲದೇ ಯಾರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದುಕೊಂಡು ಅವಕಾಶ ಉಪಯೋಗಿಸಿಕೊಂಡು ಸೂಕ್ತ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರಿಂದ ಇನ್ನುಳಿದಂತೆ ಆಮ್‌ ಆದ್ಮಿ ಹಾಗೂ ಎಂಐಎಂಐಎಂ ಪಕ್ಷಗಳು ಸಹ ಪ್ರಸಕ್ತ ಚುನಾವಣೆಯಲ್ಲಿ ಧುಮುಕಿದ್ದರೆ ಕಲಬುರಗಿ ಪಾಲಿಕೆ ಚುನಾವಣೆ ನೋಡುವಂತಾಗಿದೆ.

ಒಂದೊಂದು ವಾರ್ಡ್‌ಗೆ ಈ ಹಿಂದೆ ಬಹಳವೆಂದರೆ ಮೂರ್‍ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರು. ಆದರೆ ಈ ಸಲ ಕನಿಷ್ಠ ಆರೇಳು ಜನ
ಸ್ಪರ್ಧಿಸಿದ್ದನ್ನು ಅವಲೋಕಿಸಿದರೆ ಚುನಾವಣೆ ಕಾವು ಹಿಂದೆಂದಿಗಿಂತಲೂ ತೀವ್ರತೆ ಪಡೆದುಕೊಳ್ಳುತ್ತದೆ ಎಂಬುದನ್ನು ಸರಳವಾಗಿ ಹೇಳ ಬಹುದಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ತಮ್ಮ ಅಭ್ಯರ್ಥಿಗಳ ಹೆಸರು ಕೊನೆಯಲ್ಲಿ ಗಳಿಗೆಯಲ್ಲಿ (ರವಿವಾರ ರಾತ್ರಿ) ಅಖೈರು ಗೊಳಿಸಿದ್ದರಿಂದ ನಾಮಪತ್ರ ಸಲ್ಲಿಸಲು ಸೋಮವಾರ ನೂಕುನುಗ್ಗಲು ಉಂಟಾಗಿತ್ತು. ನಾಮಪತ್ರಗಳನ್ನು ಸಲ್ಲಿಸಲು ಕೆಲ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಬೈಕ್‌ಗಳ ರ‍್ಯಾಲಿ ಮಾಡಿಕೊಂಡು ಬಂದರೆ, ಇನ್ನೂ ಕೆಲವರು ತಮ್ಮವರೊಂದಿಗೆ ಆಗಮಿಸಿ ಸಹಾಯಕ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ದಾಖಲೆಗಳನ್ನು ಸಲ್ಲಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಕಾಲಕ್ಕೆ ಜನಸಂದಣಿ ಆಗಬಾರದು ಎಂಬ ಕಾರಣಕ್ಕೆ ಪ್ರತಿ ಐದು ವಾರ್ಡ್‌ಗಳಿಗೆ ಒಬ್ಬರಂತೆ
ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ನಗರದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿ ಕೊಡಲಾಗಿತ್ತು. ಹೀಗಿದ್ದರೂ ಸಹ ಕೊನೆಯ ದಿನವೇ ಅಬ್ಬರ ಭರ್ಜರಿಯಾಗಿತ್ತು

ಬಿಜೆಪಿಯಲ್ಲೂ ಬಂಡಾಯ
ಬಿಜೆಪಿಯಿಂದ ಟಿಕೆಟ್‌ ವಂಚಿತರಾದವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್‌ ನಂ 5ರಲ್ಲಿ ಈ ಹಿಂದೆ ಎರಡು ಸಲ ಪಾಲಿಕೆ ಸದಸ್ಯರಾಗಿರುವ ಶಿವಾನಂದ ಪಾಟೀಲ್‌ ಅಷ್ಟಗಿ ಈ ಸಲ ಪತ್ನಿಯನ್ನು ನಿಲ್ಲಿಸಲು ಬಿಜೆಪಿಯಿಂದ ಆಕಾಂಕ್ಷಿಯಾಗಿದ್ದರು. ಆದರೆ ಇಲ್ಲಿ ಗಂಗಮ್ಮ ಬಸವರಾಜ ಮುನ್ನೋಳಿಗೆ ಟಿಕೆಟ್‌ ನೀಡಿದ್ದರಿಂದ ಪಕ್ಷೇತರರಾಗಿ ಮಲ್ಲಮ್ಮ ಶಿವಾನಂದ ಪಾಟೀಲ್‌ ಅಷ್ಟಗಿ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ವಾರ್ಡ್‌ 36ರ ಸಾಮಾನ್ಯ ವಾರ್ಡ್‌ನಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ| ಶಂಭುಲಿಂಗ ಬಳಬಟ್ಟಿ ಸ್ಪರ್ಧಿಸಲು ತೀವ್ರ ಆಕಾಂಕ್ಷಿಯಾಗಿದ್ದರು. ಆದರೆ ಮಾಜಿ ಸದಸ್ಯ ಸೂರಜ್‌ ತಿವಾರಿಗೆ ಟಿಕೆಟ್‌ ನೀಡಿದ್ದರಿಂದ ಡಾ| ಬಳಬಟ್ಟಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇನ್ನುಳಿದಂತೆ ವಾರ್ಡ್‌ ನಂ 48ರಲ್ಲಿ ಬಿಜೆಪಿ ಅಂತಿಮ ಪಟ್ಟಿಯಲ್ಲಿ ಉದಯ ಕಿರಣ ರೇಶ್ಮಿ ಹೆಸರು ಅಂತಿಮಗೊಂಡಿತ್ತು. ಆದರೆ ತದನಂತರ ವೀರಣ್ಣ ಹೊನ್ನಳ್ಳಿಗೆ ಟಿಕೆಟ್‌ ಅಂತಿಮಗೊಳಿಸಿದ್ದರಿಂದ ಉದಯ ಕಿರಣ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಟಿಕೆಟ್‌ ವಂಚಿತರಾದವರು ಬಂಡಾಯ
ತೋರದೇ ಒಳಗೊಳಗೆ ಪಕ್ಷದ ವಿರುದ್ಧ ಕೆಲಸ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲೂ ಬಂಡಾಯ
ಕಾಂಗ್ರೆಸ್‌ನಲ್ಲೂ ಬಂಡಾಯ ತಲೆದೋರಿದ್ದು, ಮಾಜಿ ಮೇಯರ್‌ ಅಷ್ಪಾಕ ಅಹ್ಮದ ಚುಲಬುಲ್‌ ಈಚೆಗೆ ಕಾಂಗ್ರೆಸ್‌ ಸೇರಿದ್ದರು. ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ಜೆಡಿಎಸ್‌ದಿಂದ ನಾಮಪತ್ರ ಸಲ್ಲಿಸಿದ್ದರೆ ಅದೇ ರೀತಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅಲೀಂ ಪಟೇಲ್‌, ನಾಸೀರ ಮೌಲಾನಾ ಸಹ ನಾಮಪತ್ರ ಸಲ್ಲಿಸಿದ್ದು, ಮಾಜಿ ಉಪಮೇಯರ್‌ ಸಜ್ಜಾದ ಅಲಿ ಆಮ್‌ ಆದ್ಮಿ ಹಾಗೂ ಅಜೀಮ ಪಟೇಲ್‌ ಎಂಐಎಂಐಎಂದಿಂದ ಸ್ಪರ್ಧಿಸಿದ್ದಾರೆ. ಅದೇ ರೀತಿ ಇತರರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿಮೇಯರ್‌ ಭೀಮರೆಡ್ಡಿ ಕುರಕುಂದಾ ಅವರಿಗೆ ಕೊನೆ ಗಳಿಗೆಯಲ್ಲಿ ವಾರ್ಡ್‌ ನಂ 16ರಿಂದ ಸ್ಪರ್ಧಿಸಲು ಮಧ್ಯರಾತ್ರಿ 2 ಗಂಟೆಗೆ ಕೊನೆ ಗಳಿಗೆಯಲ್ಲಿ ಹೇಳಿದ್ದರಿಂದ ಅವರೂ ಸ್ಪರ್ಧಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

21 ಮುಸ್ಲಿಮರಿಗೆ ಕಾಂಗ್ರೆಸ್‌-
10 ಮುಸ್ಲಿಮರಿಗೆ ಬಿಜೆಪಿ ಟಿಕೆಟ್‌
ಪಾಲಿಕೆಯ ಒಟ್ಟಾರೆ 55 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಮುಸ್ಲಿಂರಿಗೆ ಟಿಕೆಟ್‌ ನೀಡಿದ್ದರೆ ಬಿಜೆಪಿ ಇದೇ ಮೊದಲ ಬಾರಿಗೆ 10 ಸ್ಥಾನ ಗಳಲ್ಲಿ ಮುಸ್ಲಿಂರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ದಲ್ಲಿ ಲಿಂಗಾಯತರಿಗೆ 9 ವಾರ್ಡ್‌ಗಳಲ್ಲಿ ಟಿಕೆಟ್‌ ನೀಡಿದ್ದರೆ ಬಿಜೆಪಿ 12 ವಾರ್ಡ್‌ಗಳಲ್ಲಿ ಟಿಕೆಟ್‌ ನೀಡಿದೆ. 8 ಕಲಬುರಗಿ ಉತ್ತರ ಕ್ಷೇತ್ರದಲ್ಲಿ ನೀಡಲಾಗಿದ್ದರೆ ನಾಲ್ವರಿಗೆ ಮಾತ್ರ ಕಲಬುರಗಿ ದಕ್ಷಿಣದಲ್ಲಿ ಟಿಕೆಟ್‌ ನೀಡಲಾಗಿದೆ. ಉಳಿದಂತೆ ಬಿಜೆಪಿಯಿಂದ ಕೊಲಿ ಸಮಾಜದಿಂದ ಮೂವರಿಗೆ ಟಿಕೆಟ್‌ ನೀಡಲಾಗಿದ್ದರೆ ಕಾಂಗ್ರೆಸ್‌ದಿಂದ ಒಬ್ಬರಿಗೆ ಟಿಕೆಟ್‌ ನೀಡಲಾಗಿದೆ.

ಹಳಬರೂ ಅಖಾಡಕ್ಕೆ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಸಲವೂ ಹಿರಿಯ ಮಾಜಿ ಸದಸ್ಯರು ಮತ್ತೊಮ್ಮೆಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ್ರಭುಲಿಂಗ ಹಾದಿಮನಿ, ವಿಠಲ್‌ ಜಾಧವ, ವಿಜಯಕುಮಾರ ಸೇವಲಾನಿ, ವಿಶಾಲ್‌ ದರ್ಗಿ, ಹುಲಿಗೆಪ್ಪ ಕನಕಗಿರಿ, ಸೂರಜ್‌ ಪ್ರಸಾದ ತಿವಾರಿ, ಲತಾ ರವಿ ರಾಠೊಡ, ಪುತಲಿಬೇಗಂ, ಶೇಖ್‌ ಅಜಮಲ್‌ ಗೋಲಾ, ಅಷ್ಪಾಕ ಅಹ್ಮದ ಚುಲ್‌ಬುಲ್‌, ಸಜ್ಜಾದಅಲಿ, ವೀರಣ್ಣ ಹೊನ್ನಳ್ಳಿ ಮೊದಲಾದವರು ಮತ್ತೇ
ಹುರಿಯಾಳುಗಳಾಗಿ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next