Advertisement

ಕಲಬುರಗಿ: ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ನಂ.1

05:05 PM Oct 10, 2024 | Team Udayavani |

ಉದಯವಾಣಿ ಸಮಾಚಾರ
ಕಲಬುರಗಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಲ್ಲಿ ಸದ್ದಿಲ್ಲದೇ ಹೈನೋದ್ಯಮ ಬೆಳೆಯುತ್ತಿದ್ದು, ಇದರಿಂದ ಆರ್ಥಿಕತೆಯಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ಜತೆಗೆ ಭೂಮಿ ಫ‌ಲವತ್ತಾಗಲು ಕೈ ಜೋಡಿಸುತ್ತಿರುವುದು ಮಾದರಿಯಾಗಿದೆ. ಬಯಲು ಜಾಗ ಹಾಗೂ ವಿಶಾಲ ಭೂಮಿ ಜತೆಗೆ ಉತ್ತಮವಾದ ನೀರಿನ ಸೌಲಭ್ಯವಿದ್ದರೂ ಉತ್ತರ ಕರ್ನಾಟಕ ಜತೆಗೆ ಕಲ್ಯಾಣ ಕರ್ನಾಟಕದಲ್ಲಿ ಹಾಲು ಉತ್ಪಾದನೆಗಿಂತ ಹತ್ತು ಪಟ್ಟು ಹಾಲು ಉತ್ಪಾದನೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ರಾಜ್ಯದ 15 ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಗಳಲ್ಲಿ ಅತಿ ಕಡಿಮೆ ಹಾಲು ಕಲಬುರಗಿ- ಬೀದರ್‌-ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದಿಂದ ಆಗುತ್ತದೆ.

Advertisement

ಬೆಂಗಳೂರು ನಗರ-ಬೆಂ.ಗ್ರಾ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಪ್ರತಿ ದಿನ 15.50 ಲಕ್ಷ ಲೀ. ಹಾಲು ಉತ್ಪಾದನೆಯಾಗಿ, ಒಕ್ಕೂಟದ ಮೂಲಕ ಪೂರೈಕೆಯಾಗುತ್ತಿದ್ದರೆ ಕಲಬುರಗಿ ಒಕ್ಕೂಟದಿಂದ ಕೇವಲ 72 ಸಾವಿರ ಲೀ.ಮಾತ್ರ ಸಂಗ್ರಹವಾಗುತ್ತಿದೆ.

ಎಲ್ಲೆಲ್ಲಿ, ಎಷ್ಟು ಹಾಲು ಉತ್ಪಾದನೆ?: ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದಲ್ಲಿ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮ ನಗರ ಬರುತ್ತವೆ. ಇದರಲ್ಲಿ ಬೆಂಗಳೂರು ಗ್ರಾ.ದಿಂದ 4.60 ಲಕ್ಷ ಲೀಟರ್‌, ಬೆಂಗಳೂರು ನಗರದಲ್ಲೇ 2.30 ಲಕ್ಷ ಲೀ.ಹಾಲು ಉತ್ಪಾದನೆಯಾದರೆ ಉಳಿದಿದ್ದು ರಾಮನಗರದಲ್ಲಿ 8.60 ಲಕ್ಷ ಲೀ.ಹಾಲು ಉತ್ಪಾದನೆಯಾಗುತ್ತಿದೆ. ಬೀದರ್‌ ಜಿಲ್ಲೆಯಲ್ಲಿ 41 ಸಾವಿರ, ಕಲಬುರಗಿ ಜಿಲ್ಲೆಯಿಂದ 30 ಸಾವಿರ ಹಾಗೂ ಯಾದಗಿರಿ ಜಿಲ್ಲೆಯಿಂದ 1500 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲೂ ಕೇವಲ 20 ಸಾವಿರ ಲೀ.ಹಾಲು  ಉತ್ಪಾದನೆಯಾಗುತ್ತಿದೆ. ಬಳ್ಳಾರಿಯಲ್ಲಿ ಮಾತ್ರ 1ಲಕ್ಷ ಲೀ.ಹಾಲು ಉತ್ಪಾದನೆಯಾಗುತ್ತಿದೆ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚಿನ ಹಾಲು ಉತ್ಪಾದನೆ ಹಾಸನ ಒಕ್ಕೂಟದಲ್ಲಿ ಆಗುತ್ತಿದೆ. ಹಾಸನ ಒಕ್ಕೂಟದಿಂದ 12.63 ಲಕ್ಷ ಲೀ., . ಚಿಕ್ಕಮಗಳೂರು ಜಿಲ್ಲೆಯಲ್ಲಿ 1.45 ಲಕ್ಷ ಲೀ., ಕೊಡಗು ಜಿಲ್ಲೆಯಲ್ಲಿ 20 ಸಾವಿರ ಲೀ. ಹಾಲು ಉತ್ಪಾದನೆ ಯಾಗುತ್ತಿದೆ. ಕೋಲಾರದಲ್ಲಿ 4.50 ಲಕ್ಷವಾದರೆ ಉಳಿದ 6.50 ಲಕ್ಷ ಲೀ.ಹಾಲು
ಚಿಕ್ಕಬಳ್ಳಾಪುರದಲ್ಲಿ ಉತ್ಪಾದನೆಯಾಗುತ್ತಿದೆ.

ಒಟ್ಟಾರೆ ರಾಜ್ಯದಲ್ಲಿ ದಿನಕ್ಕೆ 86ರಿಂದ 88 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಈ ಪೈಕಿ ಉತ್ತರ ಕರ್ನಾಟಕದ ಬಳ್ಳಾರಿ, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ, ಕಲಬುರಗಿ ಹಾಲು ಒಕ್ಕೂಟ ಸೇರಿ ಒಟ್ಟಾರೆ ಕೇವಲ 10 ಲಕ್ಷ ಲೀ.ಹಾಲು ಉತ್ಪಾದನೆಯಾಗುತ್ತಿದೆ. ಬೆಂಗಳೂರು, ಹಾಸನ, ಕೋಲಾರ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಚಾಮರಾಜ ನಗರ ಹಾಲು ಉತ್ಪಾದಕರ ಒಕ್ಕೂಟ ಸೇರಿ ಒಟ್ಟಾರೆ 75 ಲಕ್ಷ ಅಧಿಕ ಲೀ.ಹಾಲು ಉತ್ಪಾದನೆಯಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನೋದ್ಯಮ ಹೆಚ್ಚಳಕ್ಕೆ ಹಾಲು ಉತ್ಪಾದಕರ ಸಂಘಗಳನ್ನು ಹೆಚ್ಚಾಗಿ ರಚನೆಯಾಗಬೇಕು. ಈಗಾಗಲೇ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ತಮ್ಮ ರಾಜ್ಯಸಭಾ ಅನುದಾನವನ್ನು ಹಾಲು ಉತ್ಪಾದನಾ ಹೆಚ್ಚಳಕ್ಕೆ ವಿನಿಯೋಗಿಸುವುದಾಗಿ ಹೇಳಿದ್ದಾರೆ. ಕೆಕೆಆರ್‌ಡಿಬಿಯಿಂದ ಅನುದಾನ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು.
● ಭೀಮಾ ನಾಯ್ಕ, ಅಧ್ಯಕ್ಷ, ಕೆಎಂಎಫ್

Advertisement

ಕಲ್ಯಾಣ ಕರ್ನಾಟಕ ಭಾಗದಲ್ಲಿ‌ ಹೈನುಗಾರಿಕೆ ಬೆಳೆಯಲು ಸರ್ಕಾರದಿಂದ ಲೀಟರ್‌ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡುವಂತೆ
ಕೆಕೆಆರ್‌ಡಿಬಿಯಿಂದಲೂ 5 ರೂ. ಪ್ರೋತ್ಸಾಹ ಧನ ನೀಡಲು ಮುಂದಾಗಬೇಕು. ಇದಕ್ಕಾಗಿ 50 ಕೋಟಿ ರೂ ತೆಗೆದಿರಿಸಿದರೆ ಸಾಕು.
● ಈರಣ್ಣ ಬಿರಾದಾರ, ಪ್ರಗತಿಪರ ರೈತ

ರಾಜ್ಯ ಸರ್ಕಾರದಿಂದ ನೀಡಲಾಗುವ 5 ರೂ. ಪ್ರೋತ್ಸಾಹ ಧನ ಜತೆಗೆ ಕೆಕೆಆರ್‌ಡಿಬಿಯಿಂದಲೂ 5 ರೂ. ಪ್ರೋತ್ಸಾಹ ಧನ ನೀಡಿದಲ್ಲಿ ಕಕ ಭಾಗದ ಹಾಲು ಉತ್ಪಾದನೆ ರಾಜ್ಯದ ಇತರ ಭಾಗದ ಸಮೀಪವಾದರೂ ಹೆಚ್ಚಳವಾಗ ಬಹುದೆಂಬ ನಿರೀಕ್ಷೆ ಹೊಂದಲಾಗಿದೆ.
● ಡಾ|ಅಜಯಸಿಂಗ್‌,ಅಧ್ಯಕ್ಷ, ಕೆಕೆಆರ್‌ಡಿಬಿ

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next