ದೀಕ್ಷಿತ್ ಶೆಟ್ಟಿ ನಾಯಕನಾಗಿ ಮತ್ತು ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿರುವ “ಕೆಟಿಎಮ್’ ಸಿನಿಮಾ ಇದೇ ಫೆ. 16ರಂದು ತೆರೆಗೆ ಬರುತ್ತಿದೆ. ಸಿನಿಮಾದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ನಟಿ ಕಾಜಲ್ ಕುಂದರ್ “ಕೆಟಿಎಮ್’ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಇಲ್ಲಿಯವರೆಗೆ ನಾನು ಕನ್ನಡಲ್ಲಿ ಅಭಿನಯಿಸಿದ್ದ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. “ಕೆಟಿಎಂ’ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ನನ್ನ ಮೂರನೇ ಸಿನಿಮಾ. ನಾನಿನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾಗುತ್ತಿರುವಾಗ ಸಿಕ್ಕ ಸಿನಿಮಾ ಇದು. ಈ ಸಿನಿಮಾ ನನ್ನ ಸಿನಿ ಕೆರಿಯರ್‌ನಲ್ಲಿ ಸಾಕಷ್ಟು ಅನುಭವಗಳನ್ನು ಕೊಟ್ಟಿದೆ’ ಎನ್ನುವುದು ಕಾಜಲ್ ಮಾತು.
ಇನ್ನು ಕಾಜಲ್ ಕುಂದರ್, “ಕೆಟಿಎಮ್’ ಸಿನಿಮಾದಲ್ಲಿ ಉಡುಪಿಯ ಹಿನ್ನೆಲೆಯ ಕಥೆಯಲ್ಲಿ ಬರುವ ಟೀನೇಜ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಆಗಷ್ಟೇ ಪಿಯುಸಿ ಓದುತ್ತಿರುವ ಮಧ್ಯಮ ವರ್ಗದ ಹುಡುಗಿಯ ಪಾತ್ರ ನನ್ನದು. ಈ ಸುಮಾರು ಮೂರು ವರ್ಷಗಳ ಹಿಂದೆ ಈ ಸಿನಿಮಾದ ಶೂಟಿಂಗ್ ಮಾಡುತ್ತಿರುವಾಗ, ನನಗೆ ಕನ್ನಡ ಕೂಡ ಅಷ್ಟಾಗಿ ಬರುತ್ತಿರಲಿಲ್ಲ. ಈ ಸಿನಿಮಾದಲ್ಲಿ ಸಾಕಷ್ಟು ಕನ್ನಡ ಮಾತನಾಡುವುದನ್ನು ಕಲಿತೆ. ನನ್ನ ಪಾತ್ರ ಕೂಡ ನಿಧಾನವಾಗಿ ನೋಡುಗರ ಮನಮುಟ್ಟುವಂತಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಕಾಜಲ್.
“”ಕೆಟಿಎಮ್’ ಒಂದು ಬ್ಯೂಟಿಫುಲ್ ಮ್ಯೂಸಿಕಲ್ ಸ್ಟೋರಿ ಸಿನಿಮಾ. ಹಾಗಂತ ಇದರಲ್ಲಿ ಕೇವಲ ಹುಡುಗ-ಹುಡುಗಿಯ ನಡುವಿನ ಪ್ರೀತಿ ಮಾತ್ರವಲ್ಲ, ಪೋಷಕರು, ಸ್ನೇಹಿತರ ನಡು ವಿನ ಸಂಬಂಧ ಅದೆಲ್ಲದರ ಮಹತ್ವನ್ನೂ ಹೇಳಲಾಗಿದೆ. ಪ್ರೀತಿಯಲ್ಲಿ ಬೀಳುವುದು ಮುಖ್ಯವಲ್ಲ, ಅದರಲ್ಲಿ ಮೇಲೇಳು ವುದು ಕೂಡ ಅಷ್ಟೇ ಮುಖ್ಯ ಎಂಬ ಸಂದೇಶವಿದೆ’ ಎಂದು “ಕೆಟಿಎಮ್’ ಕಥಾಹಂದರ ತೆರೆದಿಡುತ್ತಾರೆ ಕಾಜಲ್.
“ಈಗಾಗಲೇ ನಾನು “ಕೆಟಿಎಮ್’ ಸಿನಿಮಾ ನೋಡಿದ್ದೇನೆ. ಸಿನಿಮಾದ ಕಥೆ ಮತ್ತು ನನ್ನ ಪಾತ್ರ ಎರಡನ್ನೂ ಸಿನಿಮಾದಲ್ಲಿ ನೋಡಿ ತುಂಬ ಖುಷಿಯಾಯಿತು. ಒಂದು ಲೈಫ್ ಜರ್ನಿ ಈ ಸಿನಿಮಾದಲ್ಲಿದೆ. ಅದನ್ನು ನೋಡುವ ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ. ಒಮ್ಮೆ ಪ್ರೇಕ್ಷಕರು ಥಿಯೇಟರ್ ಒಳಗೆ ಬಂದರೆ ಸಂಪೂರ್ಣ ಮನರಂಜನೆ ಸಿನಿಮಾದಲ್ಲಿ ಸಿಗುತ್ತದೆ’ ಎಂದು “ಕೆಟಿಎಮ್’ ಬಗ್ಗೆ ವಿಶ್ವಾಸದ ಮಾತುಗಳನ್ನಾಡುತ್ತಾರೆ ಕಾಜಲ್.
ಅಂದಹಾಗೆ, ಮೊದಲು ಮರಾಠಿಯ “ಶುಭಸ್ಯ ಶೀಘ್ರಂ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಾಜಲ್ ಕುಂದರ್, ಅದಾದ ನಂತರ ಹಿಂದಿ ಸಿನಿಮಾ ಒಂದರಲ್ಲಿ ಅಭಿನಯಿಸಿದ್ದರು. ಬಳಿಕ ಕನ್ನಡದತ್ತ ಮುಖ ಮಾಡಿದ್ದ ಕಾಜಲ್ ಎರಡು ತುಳು ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಅದಾದ ನಂತರ ಕನ್ನಡದಲ್ಲಿ “ಮಾಯಾ ಕನ್ನಡಿ’, “ಬಾಂಡ್ ರವಿ’ ಸಿನಿಮಾಗಳಲ್ಲಿ ಕಾಜಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಕನ್ನಡದಲ್ಲಿ ಕಾಜಲ್ ಅಭಿನಯಿಸಿರುವ “ಕೆಟಿಎಮ್’ ಬಿಡುಗಡೆಗೆ ಸಿದ್ಧವಾಗಿದ್ದು, ಈ ವರ್ಷದ ಕೊನೆಗೆ ಕಾಜಲ್ ಕನ್ನಡದಲ್ಲಿ ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿರುವ ಮತ್ತೂಂದು ಸಿನಿಮಾ “ಪೆಪೆ’ ಸಿನಿಮಾ ಕೂಡ ಬಿಡುಗಡೆಯಾಗಲಿದೆ.