ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಜನಾರ್ದನ ಕಲಾವೃಂದ ಜೋಡುಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡದ ಹಿರಿಯ ಚೇತನ ನಾಡೋಜ ಡಾ.ಕಯ್ಯಾ ಕಿಞಣ್ಣ ರೈಗಳ 104 ನೇ ಜನ್ಮದಿನಾಚರಣೆ ಮತ್ತು ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ ಜೂನ್ 8 ರಂದು ಜೋಡುಕಲ್ಲು ಜೆ.ಕೆ.ವಿ. ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಜರಗಲಿದೆ.
ಗ.ಸಾ.ಸಾಂ. ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸುವರು. ಕೇರಳ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಪ್ರಾದೇಶಿಕ ಪ್ರಬಂಧಕರಾದ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಎಚ್.ಎಮ್. ಬಸವರಾಜ ಬಳ್ಳಾರಿಯವರಿಗೆ ಗಡಿನಾಡ ಕೇಸರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ ರೈ ಕಯ್ನಾರು, ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ಉಮೇಶ್ ಶೆಟ್ಟಿ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಶ್ರೀಧರ ಹೊಳ್ಳ ಕಯ್ನಾರು, ಕ.ಜಾ.ಪ. ಕೇರಳ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ , ಪ್ರೊ. ಶ್ರೀನಾಥ್, ಮೀಡಿಯ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ಜೆಕೆವಿ ಜೋಡುಕಲ್ಲು ಅಧ್ಯಕ್ಷ ಲಕ್ಷಣ ಮಡಂದೂರು ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.
ಟಿ.ಎಚ್.ಎಂ. ಬಸವರಾಜ ಇವರ ಕಿರು ಪರಿಚಯ
ಟಿ.ಎಚ್.ಎಂ. ಬಸವರಾಜರವರು ವೃತ್ತಿಯಲ್ಲಿ ನಿವೃತ್ತ ಕೆ.ಇ.ಬಿ. ಅಧಿಕಾರಿಗಳು, ಪ್ರವೃತ್ತಿಯಲ್ಲಿ ಜಾನಪದ ಕಲಾವಿದರಾಗಿ, ಸಾಹಿತಿಯಾಗಿ, ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಇವರು ಬಳ್ಳಾರಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ನೆಲೆಸಿರುವ ಇವರು ಕಳೆದ 40 ವರ್ಷಗಳಿಂದ ವೀರಗಾಸೆಯ ಸಮಾಳ ವಾದ್ಯದಲ್ಲಿ ಜಾನಪದ ಕಲಾವಿದರಾಗಿದ್ದಾರೆ. ಪ್ರಸ್ತುತ ಕರ್ನಾಟಕ ಇತಿಹಾಸ ಅಕಾಡೆಮಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಬಳ್ಳಾರಿಯಲ್ಲಿ ಜಾನಪದ ಸಮ್ಮೇಳನ ಆಯೋಜಿಸಿ ಸಮಿತಿಯ ಸದಸ್ಯರಾಗಿಯೂ ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಜಾನಪದ ಕಲಾವಿದರಾದ ಇವರನ್ನು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಗಿದೆ. ಇವರು ಅಮೇರಿಕಾ ಪ್ರವಾಸ ಕೈಗೊಂಡು ಅಲ್ಲಿರುವ ಕನ್ನಡ ಸಂಘಗಳನ್ನು, ಸಾಂಸ್ಕೃತಿಕ ಸ್ಥಳಗಳನ್ನು ಅಧ್ಯಯನ ಮಾಡಿದ್ದಾರೆ. ಕ.ಸಾ.ಪ. ರಾಜ್ಯ ಮಟ್ಟದ ಕನ್ನಡಶ್ರೀ ಪ್ರಶಸ್ತಿ, ಕಾಸರಗೋಡಿನ ಸುವರ್ಣ ಕನ್ನಡಿಗ ಪ್ರಶಸ್ತಿ, ಬಸವಸಿರಿ, ಜಾನಪದಶ್ರೀ, ಭಾರ್ಗವ, ಕಲಾಶ್ರೀ ಮತ್ತು ಡಾ.| ಸುಭಾಶ್ ಭರಿಣಿ ಪ್ರಶಸ್ತಿಗಳು ಲಭಿಸಿವೆ. ಜ್ಯೋತಿ ಬೆಳಗುತ್ತಿದೆ ಎಂಬ ಮಾಸ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದರು ಮತ್ತು ಸಂಪಾದಕರಾಗಿದ್ದರು. ಡಾ|ಎ.ಆರ್. ಗೋವಿಂದ ಸ್ವಾಮಿಯವರ ಜೊತೆ ಬೆಂಗಳೂರು ಆಕಾಶವಾಣಿಯಲ್ಲಿ ವಿದ್ಯುತ್ ಅಂದು-ಇಂದು ಎಂಬ ಯಶೋಗಾಧೆಯಲ್ಲಿ ಭಾಗವಹಿಸಿರುತ್ತಾರೆ.