ಭಾರ್ದೇವಾ(ಜಮ್ಮು-ಕಾಶ್ಮೀರ): ವರ್ಷಂಪ್ರತಿ ನಡೆಯುತ್ತಿದ್ದ ಪವಿತ್ರ ಕೈಲಾಶ್ ಕುಂಡ್ ಯಾತ್ರೆಯನ್ನು ಈ ವರ್ಷ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪವಿತ್ರ ಕೈಲಾಶ್ ಕುಂಡ್ ಸರೋವರ ಸುಮಾರು 14,700 ಅಡಿ ಎತ್ತರದಲ್ಲಿದೆ.
ಹತ್ತು ದಿನಗಳ ಕಾಲದ ತೀರ್ಥಯಾತ್ರೆಯನ್ನು ಮೂರು ದಿನಕ್ಕೆ ಇಳಿಸಲಾಗಿದೆ. ಕೇವಲ “ಚಾರಿ ಮುಬಾರಕ್” (ಭಗವಾನ್ ಶಿವನ ಪವಿತ್ರ ದಂಡದ ಯಾತ್ರೆ) ಮೆರವಣಿಗೆಗೆ ಮಾತ್ರ ಸಾಂಪ್ರದಾಯಿಕ ಹಿಮಾಲಯ ಮಾರ್ಗದಲ್ಲಿ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಏನಿದು ಕೈಲಾಶ್ ಕುಂಡ್ ಯಾತ್ರೆ?
ಹತ್ತು ದಿನಗಳ ಈ ಯಾತ್ರೆ ಎರಡು ಹಾದಿಯಲ್ಲಿ ಸಾಗುತ್ತಿತ್ತು. ಜಮ್ಮು-ಕಾಶ್ಮೀರದ ಚಾಟ್ಟಾರ್ಗಾಲಾ ಮತ್ತು ಹಯಾನ್ ಪ್ರದೇಶದಿಂದ ಯಾತ್ರೆ ಆಗಸ್ಟ್ 8ರಂದು ಆರಂಭವಾಗಬೇಕಿತ್ತು. ಆದರೆ ಕೋವಿಡ್ 19ನಿಂದಾಗಿ ಈ ಬಾರಿ (ಆಗಸ್ಟ್ 8-2020) ವಿಳಂಬವಾಗಿದೆ.
ನಿರ್ದಿಷ್ಟ ಗುಣಮಟ್ಟದ ಕಾರ್ಯಾಚರಣೆ( ಎಸ್ ಒಪಿ)ಗೆ ಅನುಗುಣವಾಗಿ ಜಮ್ಮು-ಕಾಶ್ಮೀರ ಆಡಳಿತ ಈ ಬಗ್ಗೆ ಕೈಲಾಶ್ ಸೇವಾ ಸಂಘ, ಸನಾತನ ಧರ್ಮ ಸಭಾ, ಧರ್ಮಾರ್ಥ ಟ್ರಸ್ಟ್ ಮತ್ತು ವಾಸುಕಿ ಅನ್ನಪೂರ್ಣ ಲಾಂಗಾರ್ ಜತೆ ಚರ್ಚೆ ನಡೆಸಿ ಈ ಬಾರಿ ಕೈಲಾಶ್ ಯಾತ್ರೆಯನ್ನು ಕೈಗೊಳ್ಳುವುದು ಸೂಕ್ತವಲ್ಲ ಎಂಬ ಬಗ್ಗೆ ನಿರ್ಧಾರ ತೆಗೆದುಕೊಂಡು ಯಾತ್ರೆಯನ್ನು ರದ್ದುಪಡಿಸಿದ್ದೇವೆ. ಈ ಬಗ್ಗೆ ವಿಷಾದ ಇರುವುದಾಗಿ ಭಾರ್ದೇವಾ ಹೆಚ್ಚುವರಿ ಡೆಪ್ಯುಟಿ ಕಮಿಷನರ್ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಕೈಲಾಶ್ ಕುಂಡ್ ಸರೋವರ ಯಾತ್ರೆ ಜನರ ಭಾವನೆ ಜತೆಗೆ ಧಾರ್ಮಿಕವಾಗಿ ತಳುಕು ಹಾಕಿಕೊಂಡಿದೆ. ಮುಖ್ಯವಾಗಿ ನಾಗ ಭಕ್ತರಲ್ಲಿ. ಹೀಗಾಗಿ ಪವಿತ್ರ ಸರೋವರದಲ್ಲಿ ಪೂಜಾ ವಿಧಿವಿಧಾನ ನಡೆಸಲು ಪುರೋಹಿತರು ಸೇರಿದಂತೆ ಚಾರಿ ಮುಬಾರಕ್ ಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಚಾರಿ ಮುಬಾರಕ್ ಮೆರವಣಿಗೆ ಆಗಸ್ಟ್ 16ರಂದು(2020) ಬಾರ್ದೇವಾದಿಂದ ಆರಂಭವಾಗಲಿದ್ದು, ಆಗಸ್ಟ್ 18ರಂದು ಕೈಲಾಶ್ ಕುಂಡ್ ತಲುಪಲಿದೆ. ನಾಗದೇವರ ಪವಿತ್ರ ದಂಡದ ಮೆರವಣಿಗೆ ಪುರಾತನ ನಾಗ ದೇವಾಲಯ ಇರುವ ಗಥಾ ಪ್ರದೇಶದಿಂದ ಆರಂಭವಾಗುತ್ತದೆ. ವಾಸ್ಕಾ ಡೇರಾ ಎಂಬಲ್ಲಿಂದ ಚಾರಿ ಮುಬಾರಕ್ ಎಂಬ ಮತ್ತೊಂದು ಮೆರವಣಿಗೆ ಇದರೊಂದಿಗೆ ಸೇರಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.
ಈ ಕುಂಡ ಬೃಹತ್ ಸರೋವರವಾಗಿದ್ದು ಇದರ ನೀರು ತಂಪು ಮತ್ತು ಸ್ಫಟಿಕದಷ್ಟು ಶುದ್ಧವಾಗಿದೆ. ಇದು 1.5 ಮೈಲ್ ನಷ್ಟು ಉದ್ದವಿದ್ದು, ಬರೋಬ್ಬರಿ 14,700 ಅಡಿ ಎತ್ತರದಲ್ಲಿದೆ. ಸ್ಥಳೀಯರ ನಂಬಿಕೆ ಪ್ರಕಾರ ಕೈಲಾಶ್ ಕುಂಡ್ ಶಿವನ ಮೂಲ ವಾಸ ಸ್ಥಾನವಾಗಿದೆ. ಈ ಸ್ಥಳವನ್ನು ವಾಸುಕಿ ನಾಗನಿಗೆ ಬಿಟ್ಟುಕೊಟ್ಟು ಶಿವ ಹಿಮಾಚಲ ಪ್ರದೇಶದ ಭಾರ್ಮೌರ ಪ್ರದೇಶಕ್ಕೆ ತೆರಳಿ ಮಣಿ ಮಹೇಶನಾಗಿ(ಮಣಿಮಹೇಶ್ ಲೇಕ್) ನೆಲೆನಿಂತಿರುವುದಾಗಿ ಸ್ಥಳ ಪುರಾಣ ತಿಳಿಸಿದೆ. ಮಾನಸ ಸರೋವರದ ನಂತರ ಮಣಿಮಹೇಶ್ ಲೇಕ್ ಇದ್ದಿರುವುದಾಗಿ ವರದಿ ತಿಳಿಸಿದೆ.