Advertisement

ಕಹೋ ನಾ “ಪಿ.ಆರ್‌.’ಹೈ

06:00 AM Jul 17, 2018 | |

ಮಾರ್ಕೆಟಿಂಗ್‌ ಕ್ಷೇತ್ರ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಯುವಜನರನ್ನು ಆಕರ್ಷಿಸುತ್ತಿರುವ ಇನ್ನೊಂದು ಕ್ಷೇತ್ರವೆಂದರೆ ಪಬ್ಲಿಕ್‌ ರಿಲೇಷನ್ಸ್‌ (ಸಾರ್ವಜನಿಕ ಸಂಪರ್ಕ). ಅವರ ಮುಖ್ಯ ಕೆಲಸ ಜನರಲ್ಲಿ ಒಳ್ಳೆಯ ಇಮೇಜು ಮೂಡಿಸುವುದು. ಯಾವುದರ ಇಮೇಜು? ಖಾಸಗಿ ಸಂಸ್ಥೆಯ ಉತ್ಪನ್ನಗಳಾಗಿರಬಹುದು, ತಂತ್ರಜ್ಞಾನವಾಗಿರಬಹುದು, ಯಾವುದೇ ಕಾರ್ಯಕ್ರಮವಾಗಿರಬಹುದು. ಅಷ್ಟೇ ಏಕೆ, ಸೆಲೆಬ್ರಿಟಿಗಳ ಇಮೇಜನ್ನೂ ಹೆಚ್ಚಿಸುವಲ್ಲಿ ಪಿ.ಆರ್‌. ಪ್ರೊಫೆಷನಲ್‌ಗ‌ಳ ಪಾಲಿದೆ. ಬೆಂಗಳೂರೊಂದರಲ್ಲೇ ಇವತ್ತು 600ಕ್ಕೂ ಹೆಚ್ಚು ಪಿ.ಆರ್‌. ಏಜೆನ್ಸಿಗಳಿವೆ…  

Advertisement

ಹಿಂದೆಲ್ಲಾ ದೊಡ್ಡ ದೊಡ್ಡ ಸಂಸ್ಥೆಗಳು ಮಾತ್ರ ಸಾರ್ವಜನಿಕ ಸಂಪರ್ಕ (ಪಬ್ಲಿಕ್‌ ರಿಲೇಷನ್ಸ್‌ ಅಥವಾ ಪಿ. ಆರ್‌.) ಕಂಪನಿಗಳನ್ನು ಪ್ರಚಾರ ಕಾರ್ಯಕ್ಕೆ ನೇಮಿಸಿಕೊಳ್ಳುತ್ತಿದ್ದವು. ಸಂಸ್ಥೆಯ ಉತ್ಪನ್ನಗಳ ಕುರಿತು ಸಾರ್ವಜನಿಕರಿಗೆ ಉತ್ತಮ ಅಭಿಪ್ರಾಯ ಮೂಡಿಸಲು ಏನೇನು ಬೇಕೋ ಅವೆಲ್ಲವನ್ನೂ ಮಾಡುವ ಜವಾಬ್ದಾರಿ ಪಿ.ಆರ್‌. ಕಂಪನಿಗಳದ್ದು. ಪತ್ರಿಕೆಗಳಲ್ಲಿ, ಟಿ.ವಿಯಲ್ಲಿ ಬರುವ ಜಾಹೀರಾತುಗಳು, ಉತ್ಪನ್ನ ಆಧಾರಿತ ಕಾರ್ಯಕ್ರಮಗಳು ಎಲ್ಲವೂ ಪ್ರಚಾರದ ಭಾಗವೇ ಆಗಿದೆ. ಉದ್ಯೋಗ ಕ್ಷೇತ್ರವಾಗಿಯೂ ಪ್ರತಿಭಾನ್ವಿತರನ್ನು ಪಿ.ಆರ್‌. ಕ್ಷೇತ್ರ ಆಕರ್ಷಿಸುತ್ತಿದೆ. 

ವಿಸ್ತಾರಗೊಳ್ಳುತ್ತಿವೆ ಅವಕಾಶಗಳು
ಇಂದಿನ ಕಾಲದ ಹೊಸ ಬೆಳವಣಿಗೆ ಎಂದರೆ, ದೊಡ್ಡ ಸಂಸ್ಥೆಗಳು ಮಾತ್ರವಲ್ಲ, ತಮ್ಮ ಇಮೇಜನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವ್ಯಕ್ತಿಗಳೂ ಪಿ.ಆರ್‌. ಕಂಪನಿಗಳ ಮೊರೆ ಹೋಗುತ್ತಿದ್ದಾರೆ. ರಾಜಕಾರಣಿಗಳು, ನಟ- ನಟಿಯರು, ಕ್ರೀಡಾಪಟುಗಳು ಮುಂತಾದ ಸೆಲೆಬ್ರಿಟಿಗಳೂ ಇವರಲ್ಲಿ ಸೇರಿದ್ದಾರೆ. ಪಿ.ಆರ್‌. ಕಂಪನಿಗಳ ಕಾರ್ಯವ್ಯಾಪ್ತಿ ವಿಸ್ತಾರವಾದುದು. ಬರೀ ಪ್ರಚಾರ ಮಾತ್ರವಲ್ಲ, ಇವೆಂಟ್‌ ಮ್ಯಾನೇಜ್‌ಮೆಂಟನ್ನೂ ಇವು ವಹಿಸಿಕೊಳ್ಳುತ್ತವೆ. ಭರತನಾಟ್ಯ, ಹುಟ್ಟುಹಬ್ಬದಂಥ ಸಣ್ಣಪುಟ್ಟ ಕಾರ್ಯಕ್ರಮಗಳಿಂದ ಹಿಡಿದು ಕಾರ್ಪೊರೇಟ್‌ ಸಭೆಗಳವರೆಗೆ ಪಿ.ಆರ್‌. ಕಂಪನಿಗಳು ಆರ್ಡರ್‌ ಸ್ವೀಕರಿಸುತ್ತಾರೆ. ಹೀಗಾಗಿ, ಇಂದಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಪಿ.ಆರ್‌.ಗೆ ಪ್ರಾಮುಖ್ಯತೆ ಮತ್ತು ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು.

ಬರೆಯಬೇಕು, ಬರೆದು ಜಯಿಸಬೇಕು
ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಹೆಸರು ಮಾಡಲು ಅಭ್ಯರ್ಥಿಗಳು ಅನೇಕ ಕೌಶಲ್ಯಗಳನ್ನು ರೂಢಿಸಿಕೊಂಡಿರಬೇಕು. ಕ್ರಿಯಾಶೀಲ ಬರವಣಿಗೆ, ಇಂಗ್ಲಿಷ್‌ ಮತ್ತು ಕನ್ನಡ ಭಾಷಾಜ್ಞಾನ ಉತ್ತಮವಾಗಿರಬೇಕು. ಕಂಪನಿಯ ಬಗೆಗಿನ ಅಂಕಣ, ಕಾರ್ಯಕ್ರಮದ ಮಾಹಿತಿಯುಳ್ಳ ಪ್ರಸ್‌ ರಿಲೀಸ್‌… ಹೀಗೆ, ಬರೆಯುವುದು ಇದ್ದೇ ಇರುತ್ತದೆ. ಸಾಹಿತ್ಯವನ್ನು ಬರೆಯುವುದಕ್ಕೂ, ಪ್ರಸ್‌ ರಿಲೀಸ್‌ ಬರೆಯುವುದಕ್ಕೂ ತುಂಬಾ ವ್ಯತ್ಯಾಸವಿದೆ. ಪಿ.ಆರ್‌. ಕಂಪನಿಯಲ್ಲಿ ಬರೆಯುವಾಗ ಪ್ರತಿ ಪದವನ್ನೂ ಅಳೆದು ತೂಗಿ ಬಳಸಬೇಕಾಗುತ್ತದೆ. ಸೀಮಿತ ಕಾರ್ಯವ್ಯಾಪ್ತಿ, ಪದಮಿತಿಯ ಒಳಗೆ ಬರೆಯುವ ಅನಿವಾರ್ಯತೆಯೂ ಇರುತ್ತದೆ. ಹಾಗಿದ್ದೂ ಆ ಬರಹ ಆಕರ್ಷಕ ಮತ್ತು ಸುಲಭವಾಗಿ ಅರ್ಥವಾಗುವಂತಿರಬೇಕು. ಅದು ಸವಾಲು.

ಅಪ್‌ಡೇಟ್‌ ಆಗುತ್ತಿರಬೇಕು
ನಾವು ಫ್ಯಾಷನ್‌ ವಿಷಯದಲ್ಲಿ, ಉತ್ಪನ್ನ- ವಾಹನಗಳನ್ನು ಖರೀದಿಸುವ ವಿಚಾರದಲ್ಲಿ ಮಾರುಕಟ್ಟೆಯಲ್ಲಿ ಲೇಟೆಸ್ಟ್‌ ಇರುವುದನ್ನೇ ಆರಿಸಿಕೊಳ್ಳುತ್ತೇವೆ. ಸ್ಮಾರ್ಟ್‌ಫೋನ್‌ನಲ್ಲಿ ಅಪ್‌ಗ್ಳನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡಿಕೊಳ್ಳುತ್ತಿರುತ್ತೇವೆ. ಅದೇ ರೀತಿ ಪ್ರತಿಯೊಬ್ಬ ಪಿ.ಆರ್‌. ಪ್ರೊಫೆಷನಲ್‌ ಕೂಡಾ ತನ್ನನ್ನು ತಾನು ಅಪ್‌ಡೇಟ್‌ ಮಾಡಿಕೊಳ್ಳುತ್ತಿರಬೇಕು. ಜಗತ್ತಿನಲ್ಲಿ ಏನೇನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಿರಬೇಕು. ವಿದೇಶಿ ರಾಜಕಾರಣ, ಪ್ರಾಕೃತಿಕ ವಿಕೋಪ, ಹೊಸ ಆವಿಷ್ಕಾರ- ಹೀಗೇ ಎಲ್ಲಾ ವಿಚಾರಗಳ ಕುರಿತು ಒಳಗಣ್ಣನ್ನು ತೆರೆದಿಟ್ಟಿರಬೇಕು. ಇದರಿಂದ ಕೆಲಸಕ್ಕೆ ತುಂಬಾ ಸಹಾಯವಾಗುತ್ತದೆ. ತಮ್ಮ ಗ್ರಾಹಕರಿಗೆ ಅಗತ್ಯ ಬಿದ್ದಾಗ ಸಲಹೆ ಸೂಚನೆ, ಟ್ರೆಂಡ್‌ಗೆ ತಕ್ಕಂತೆ ಉಪಾಯ ನೀಡಲು ಸಾಧ್ಯವಾಗುತ್ತದೆ. ಆಗ ಪಿ.ಆರ್‌. ಉದ್ಯೋಗಿಯ ಮೇಲೆ ಹೆಚ್ಚಿನ ವಿಶ್ವಾಸ ಮತ್ತು ನಂಬಿಕೆ ಮೂಡುತ್ತದೆ. ಅಂತಾರಾಷ್ಟ್ರೀಯ ಕಂಪನಿಗಳ ಗುರುತರ ಕೆಲಸಗಳನ್ನು ಅಂಥವರಿಗೆ ನೀಡಲು ಸೀನಿಯರ್‌ಗಳು ಹಿಂದೆಮುಂದೆ ನೋಡುವುದಿಲ್ಲ.

Advertisement

ಮುಂದಾಲೋಚನೆ
ಪಿ.ಆರ್‌. ಉದ್ಯೋಗಿಯಲ್ಲಿರಬೇಕಾದ ಮುಖ್ಯವಾದ ಗುಣ ದೂರಾಲೋಚನೆ. ಸರ್ಕಾರದ ಪಾಲಿಸಿಗಳು, ಜನರ ಅಭಿಮತ, ಟ್ರೆಂಡುಗಳು ಇವ್ಯಾವುವೂ ಒಂದೇ ಥರ ಇರುವುದಿಲ್ಲ. ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಹೋಗುತ್ತಿರುತ್ತವೆ. ಜಗತ್ತಿನ ಆಗುಹೋಗುಗಳ ಮೇಲೆ ನಿಗಾ ವಹಿಸಿದರೆ ಮುಂದಾಗುವುದನ್ನು ಅಂದಾಜಿಸಬಹುದು. ಅದಕ್ಕೆ ಯಾವ ಯಂತ್ರ ತಂತ್ರಗಳ ಅಗತ್ಯವಿಲ್ಲ. ಇದರಿಂದ ಗ್ರಾಹಕರು (ಕ್ಲೈಂಟ್‌ಗಳು) ಬೇರೆ ಪಿ.ಆರ್‌. ಕಂಪನಿಗಳತ್ತ ಜಂಪ್‌ ಆಗದಂತೆ ತಡೆಯಬಹುದು. ಪಿ.ಆರ್‌. ಕಂಪನಿ ಮತ್ತು ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಪಿ.ಆರ್‌ ಕ್ಷೇತ್ರದಲ್ಲಿ ಏಳಿಗೆ ಕಾಣಬೇಕೆಂದರೆ ಆಗಬೇಕಾಗಿರುವುದು ಇದೇ. ಅದಾಗಬೇಕೆಂದರೆ ಉದ್ಯೋಗಿಗಳು ನೈಪುಣ್ಯತೆ ಸಾಧಿಸಿರಬೇಕು.

ರಾಘವೇಂದ್ರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next