Advertisement

Ration Card ತ್ವರಿತಗತಿಯಲ್ಲಿ ಪಡಿತರ ಚೀಟಿ ವಿತರಿಸಲು ಕಾಗೇರಿ ಆಗ್ರಹ

04:05 PM Aug 02, 2023 | Team Udayavani |

ಶಿರಸಿ: ರಾಜ್ಯದಲ್ಲಿ ಈಗಾಗಲೇ ಬಿಪಿಎಲ್,ಎಪಿಎಲ್,ಅಂತ್ಯೋದಯ ಪಡಿತರ ಚೀಟಿ ತಾಂತ್ರಿಕ ಕಾರಣದಿಂದ ರದ್ದಾಗಿರುವ ಹಾಗೂ ಅಮಾನತ್ತಿನಲ್ಲಿ ಇರುವ ಪಡಿತರ ಚೀಟಿಯನ್ನು ತ್ವರಿತಗತಿಯಲ್ಲಿ ಉರ್ಜಿತಗೊಳಿಸಬೇಕು ಎಂದು ಮಾಜಿ ಸ್ಪೀಕರ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.

Advertisement

ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಅಂದಾಜು 24,300 ಕಾರ್ಡಗಳು ಅಮಾನತು, ರದ್ದಾಗಿರುವ ಮಾಹಿತಿ ಇದ್ದು, ಅನ್ನ ಭಾಗ್ಯ ಯೋಜನೆಯ ಫಲ ಸಿಗಬೇಕಾದರೆ ಪಡಿತರ ಚೀಟಿ ಸರಿಯಾಗಿ ಇರಬೇಕು. ಆದರೆ, ಅದನ್ನೇ ಅಮಾನತ್ತಿನಲ್ಲಿ ಇಟ್ಟರೆ ಯೋಜನೆಯ ಲಾಭ ಅರ್ಹರಿಗೆ ಸಿಗುವುದಿಲ್ಲ. ಬಡ ಜನರು ಇದರಿಂದ ವಂಚನೆಗೆ ಒಳಗಾಗದಂತೆ ನೋಡಿಕೊಳ್ಳಬೇಕಾದ್ದು ಸರಕಾರದ ಜವಾಬ್ದಾರಿ ಎಂದು ಪ್ರತಿಪಾದಿಸಿದ್ದಾರೆ.

ಪಡಿತರ ಚೀಟಿಗೆ ಸಂಬಂಧಿಸಿದ ವ್ಯವಸ್ಥೆ ಸರಳಿಕರಣಗೊಳಿಸಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಅರ್ಹ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ಸಿಗುವಂತೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಪೂರ್ವ ಘೋಷಿಸಿದ್ದ ಅನ್ನ ಭಾಗ್ಯದ ಸೌಲಭ್ಯ ಮಾತಿನಂತೆ ನಡೆದುಕೊಳ್ಳುತ್ತೇವೆ ಎನ್ನುವ ಸರಕಾರ ಈಗ ಅಮಾನತ್ತು, ರದ್ದತಿ ಮಾಡದೇ ಅರ್ಹರಿಗೆ ಅನ್ನ ಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ಹಾಗೂ ಅದಕ್ಕೆ ಸಂಬಂಧಿಸಿ ಹಣ ಹೊಂದಿಸಲು ಆಗದ ಭಾಗ್ಯದ ಸರಕಾರ ಇದೀಗ ಪಡಿತರ ಕಾರ್ಡಗಳನ್ನೆ ನವೀಕರಣ ಹಾಗೂ ಇತರ ಕಾರಣ ಇಟ್ಟು ಅಮಾನತ್ತಿನಲ್ಲಿ ಇಟ್ಟರೆ ಹೇಗೆ ಎಂದು ಕೇಳಿದ ಅವರು, ಭರವಸೆಯ ಮೇಲೆ ರಾಜ್ಯ ಆಡಳಿತದ ಚುಕ್ಕಾಣಿ ಹಿಡಿದ್ದ ಕಾಂಗ್ರೆಸ್ ಸರಕಾರ, ಗ್ಯಾರೆಂಟಿ ಭಾಗ್ಯಕ್ಕೆ ಜನರು ಗೊಂದಲಕ್ಕೆ ಬೀಳದಂತೆ ಮಾಡುವುದು ಮಾಡಬೇಕಿತ್ತು. ಆದರೆ, ಕಾಂಗ್ರೆಸ್ ಸರಕಾರ ಜನರನ್ನು ಗೊಂದಲಕ್ಕೆ ಕೆಡವುದನ್ನೇ ಮಾಡಿಕೊಂಡಿದೆ ಎಂದರು.

Advertisement

ಈ ಪಡಿತರ ಅಮಾನತ್ತು ಕಷ್ಟದಲ್ಲಿ ಇರುವ ಬಡವರ ಹೊಟ್ಟೆಗೆ ತಣ್ಣೀರಿಟ್ಟಿದೆ. ಅನ್ನದ ಬಟ್ಟಲಿನ ಅನ್ನ ಕಸಿದುಕೊಳ್ಳುವ ಗುಣ ಯಾವುದೇ ಸರಕಾರಗಳಿಗೆ ಇರಬಾರದು. ಇದು ಜನಪರ ಎಂದು ಕೇಳಿಕೊಂಡ ಕಾಂಗ್ರೆಸ್ ಸರಕಾರದ ಕಾರ್ಯ ವೈಖರಿ ಆಗಬಾರದು. ಸರ್ವರಿಗೆ ಸಮಬಾಳು, ಸರ್ವರಿಗೂ ಸಮಪಾಲು ಎನ್ನುತ್ತಲೇ ಕತ್ತು ಹಿಸುಕುವ ಗುಣ ಬಹುಕಾಲ ಬೆಳಕಿಗೆ ಬಾರದೇ ಉಳಿಯುವುದಿಲ್ಲ. ಆಡುವುದು ಒಂದು ಮಾಡುವುದು ಇನ್ನೊಂದು ಎಂಬಂತೂ ಆಗಬಾರದು ಎಂದೂ ಪರೋಕ್ಷ ಸರಕಾರವನ್ನು ಎಚ್ಚರಿಸಿದ್ದಾರೆ.

ಮತದಾರರಲ್ಲಿ, ಜನರಲ್ಲಿ ಭರವಸೆ, ಆಸೆ ತೋರಿಸಿ ಕೆಲಸ ಮುಗಿದ ಬಳಿಕ ಏರಿದ ಏಣಿಯನ್ನೇ ಒದೆಯುವ ಕ್ರಮಕ್ಕೆ ಮುಂದಾದರೆ ಅದು ಸರಿಯಲ್ಲ. ಅನಗತ್ಯವಾಗಿ ತಕ್ಷಣ ರದ್ದಾದ, ಅಮಾನತ್ತಾದ ಕಾರ್ಡಗಳನ್ನು ಊರ್ಜಿತಗೊಳಿಸಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ತಕ್ಷಣ ಜನರ ಬವಣೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಬಡ ಜನರಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಕೇವಲ ಭ್ರಮೆಯನ್ನು ಹುಟ್ಟಿಸಿದೆ. ಸಿಎಂ, ಡಿಸಿಎಂ ಅವರಲ್ಲಿ ಹೊಂದಾಣಿಕೆ ಇಲ್ಲ, ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ದಿನ ದೂಡಿದರೆ ಆಯಿತು ಎಂಬಂತೆ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಮೊದಲು ಹೇಳಿದ ನಿಯಮಗಳನ್ನು ಗ್ಯಾರೆಂಟಿಗಳ ನಿರ್ವಹಣೆಗೆ ಸಲ್ಲದ ಷರತ್ತುಗಳನ್ನು ವಿಧಿಸಿದ್ದಾರೆ. ಎಲ್ಲ ಅಗತ್ಯ ವಸ್ತಗಳ ಬೆಲೆ ಗಗನಕ್ಕೆ ಏರಿಸಿ ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸಿದೆ. ಜನರಿಗೆ ಒಂದು ಕೈಯಿಂದ ಸೊಗೆದು ಇನ್ನೊಂದು ಕೈಲಿ ಕೊಟ್ಟಂತೆ ನಾಟಕ ಮಾಡುವ ನಾಟಕ ಸರಕಾರ ಇದು ಎಂದು ವಾಗ್ದಾಳಿ ಮಾಡಿದ್ದಾರೆ.

ಇದು ಬಡವರ ಪರವಾದ ಸರಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರು, ಜನತೆಗೆ ನೀಡಿದ ಭರವಸೆಯನ್ನು ದಿನಕ್ಕೊಂದು ಆದೇಶ ನೀಡಿ ಗೊಂದಲನ್ನು ಮಾಡದೇ ಎಲ್ಲರಿಗೂ ಸಮನಾಗಿ ಅನುಷ್ಠಾನ ಗೊಳಿಸಬೇಕು. ಹಾಗೂ ಈಗ ರದ್ದುಪಡಿಸಿದ ಕಾರ್ಡಗಳನ್ನು ಪುನರ್‌ಪರಿಶೀಲಿಸಿ ಎಲ್ಲ ಕಾರ್ಡಗಳನ್ನು ಉರ್ಜಿತಗೊಳಿಸಲು ಕ್ರಮ ಕೈಗೊಳ್ಳಬೇಕು. ಭಾಗ್ಯದ ವ್ಯವಸ್ಥೆ ಸರಳೀಕರಣಗೊಳಿಸಿ, ಸರಕಾರ ಯಾವುದೇ ಗೊಂದಲವಿಲ್ಲದೆ ಜನರಿಗೆ ಇದರ ಪ್ರಯೋಜನ ತಲುಪುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next