ಕಡೂರು: ತಾಲೂಕಿನ ಜೀವನಾಡಿಯಾಗಿರುವ ಐತಿಹಾಸಿಕ ಮದಗದ ಕೆರೆ, ಪ್ರಕೃತಿಯ ಸುಂದರ ತಾಣದಲ್ಲಿ ನೆಲೆಗೊಂಡಿದೆ. “ಮಾಯದಂತ ಮಳೆ ಬಂದು ಮದಗದ ಕೆರೆ ತುಂಬಿತು’ ಎಂಬ ಜಾನಪದ ನುಡಿಯಂತೆ ಮದಗದ ಕೆರೆ ತುಂಬುತ್ತದೆ. ಆದರೆ ಹಳೇ ಮದಗದಕೆರೆಯೇ ಇದಕ್ಕೆ ವ್ಯತಿರಿಕ್ತವಾಗಿದ್ದು, ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಸಂಕಷ್ಟದ ಸ್ಥಿತಿಗೆ ತಲುಪಿದೆ.
210 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಹಳೇ ಮದಗದಕೆರೆ 50 ಮೀಟರ್ ಎತ್ತರವಿದೆ. ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಈ ಕೆರೆ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿದೆ. ಇಲಾಖೆಯ ಬೇಜವಾಬ್ದಾರಿಯಿಂದ ಪ್ರತಿ ಮಳೆಗಾಲದಲ್ಲಿ ತುಂಬಿ ಅತ್ಯಂತ ಮನೋಹರವಾಗಿ ಕಾಣುತ್ತಿದ್ದ ಕೆರೆಯ ಪರಿಸರ ಇಂದು ಸಂಪೂರ್ಣ ಹದಗೆಟ್ಟಿದೆ.
ಸುಂದರ ಪ್ರಕೃತಿಯ ತಾಣವಾಗಿರುವ ಕೆರೆ ಏರಿಯ ಸುತ್ತ ಮುಳ್ಳು ಗಂಟಿಗಳು ಬೆಳೆದು ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಗೆ ಹೋಗಲು ಉತ್ತಮ ರಸ್ತೆ ಇಲ್ಲ. ಇರುವ ರಸ್ತೆಯಲ್ಲಿ ವಾಹನ ಓಡಿಸಲು ಸಾಧ್ಯವೆ ಇಲ್ಲದಂತಾಗಿದೆ. ಪ್ರಯತ್ನ ಪಟ್ಟಿದ್ದರೆ ಅತ್ಯಂತ ಸುಂದರ ಪ್ರವಾಸಿ ಸ್ಥಳವನ್ನಾಗಿ ಮಾಡಬಹುದು. ಆದರೆ, ಕೆರೆಯನ್ನು ನಿರ್ಲಕ್ಷಿಸಲಾಗಿದೆ ಎಂಬ ಅಳಲು ಸ್ಥಳೀಯರದ್ದಾಗಿದೆ.
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇಂತಹ ಕೆರೆಗಳ ಅಭಿವೃದ್ಧಿಪಡಿಸಿದರೆ ಪ್ರವಾಸಿಗರನ್ನು ಸೆಳೆಯಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿ ಗಳ ಪ್ರಯತ್ನ ಬೇಕಾಗಿದೆ. ತಾಲೂಕಿನ ಅಯ್ಯನಕೆರೆಯಂತೆಯೇ ಇದನ್ನೂ ಅಭಿವೃದ್ಧಿಪಡಿಸಲಿ ಎಂಬ ಕೂಗು ಕೇಳಿ ಬರುತ್ತಿದೆ. ಕಡೂರು ಮತ್ತು ಬೀರೂರು ಎರಡೂ ಪಟ್ಟಣಗಳಿಗೆ ಸಮಾನ ಅಂತರದಲ್ಲಿರುವ ಹಳೆ ಮದಗದಕೆರೆಗೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುವ ನಿರೀಕ್ಷೆ ಇದೆ. ಹೊಸ ಮದಗದ ಕೆರೆಯ ನಿರ್ಮಾಣಕ್ಕಿಂತ ಮೊದಲೇ ರಚಿತವಾದ ಹಳೇಮದಗದ ಕೆರೆ ಮದಗದ ಕೆರೆಯಷ್ಟೇ ಪ್ರಮುಖವಾಗಿ ಕೃಷಿಗೆ ಆಧಾರವಾಗಿದೆ. ಆದರೆ ಹಲವಾರು ಕಾರಣದಿಂದ ಹಳೇಮದಗದ ಕೆರೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಲ್ಲಿಗೆ ಬರುವ ನೀರಿನ ಮೂಲಗಳನ್ನೇ ತಡೆಯಲಾಗಿದೆ.
ಬ್ರಹ್ಮದೇವರ ಕಟ್ಟೆ, ಕಿತ್ತಲೆ ಮಡಬಾಯಿ ಎಂಬ ಎರಡು ಮಾನವ ನಿರ್ಮಿತ ಹಾಗೂ ತಾಯಿ ಹಳ್ಳ ಎಂಬ ನಿಸರ್ಗ ನಿರ್ಮಿತ ಹಳ್ಳದಿಂದ ಹಳೇಮದಗದ ಕೆರೆಗೆ ನೀರು ಬರುತ್ತದೆ. ಈ ಮೂಲಗಳ ಮೂಲ ಮದಗದ ಕೆರೆ. ಇನ್ನು ನೈಸರ್ಗಿಕವಾಗಿ ಹರಿಯುವ ತಾಯಿಹಳ್ಳ ನೇರವಾಗಿ ಹಳೇಮದಗದ ಕೆರೆಗೆ ತಲುಪುತ್ತಿತ್ತು. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ, ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ ಅತ್ಯಂತ ಪ್ರಮುಖ ವಿಹಾರ ಕೇಂದ್ರವನ್ನಾಗಿಸುವ ಸಾಧ್ಯತೆಗಳಿರುವ ಹಳೆಮದಗದ ಕೆರೆಯ ಪುನರುಜ್ಜೀವನಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಬೇಕಾಗಿದೆ.
10 ಹಳ್ಳಿಗಳಿಗೆ ಕುಡಿಯುವ ನೀರಿನ ಆಧಾರ ಸ್ತಂಭ
ಮದಗದ ಕೆರೆಯ ಕೋಡಿ ಬಿದ್ದ ನೀರು ಹಳೇಮದಗದ ಕೆರೆಗೆ ಹೋಗಿ ತುಂಬುವುದು ವಾಡಿಕೆ. ಹಳೇಮದಗದ ಕೆರೆ ತುಂಬಿ ಕೋಡಿ ಬಿದ್ದ ನೀರು ಅಲ್ಲಿಂದ ಮುಂದಕ್ಕೆ ಚಿಕ್ಕಂಗಳ, ಅಂದೇನಹಳ್ಳಿ, ಚೆನ್ನಾಪುರ, ಚಿಕ್ಕಪಟ್ಟಣಗೆರೆ, ಸಂತೆಕೆರೆ, ಎಂ.ಕೋಡಿಹಳ್ಳಿ ಕೆರೆ ಮುಂತಾದ ಕೆರೆಗಳು ತುಂಬುತ್ತವೆ. ಇದಲ್ಲದೆ ಇಲ್ಲಿ ಸುತ್ತಮುತ್ತ
ಇರುವ ಸುಮಾರು 10 ಹಳ್ಳಿಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಮುಖ್ಯ ಆಧಾರ. 30 ಕಿ.ಮೀ. ಸುತ್ತಮುತ್ತ ಅಂತರ್ಜಲ ಮಟ್ಟ ಸ್ಥಿರತೆಗೂ ಈ ಕೆರೆಯ ಕೊಡುಗೆಯಿದೆ.
ಎ.ಜೆ.ಪ್ರಕಾಶಮೂರ್ತಿ