ಕಡೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರುನ ಮಂಗಳವಾರ ಕಡೂರು ಮತ್ತು ಬೀರೂರು ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ, ಕೊರೊನಾ ಚಿಕಿತ್ಸೆಗಾಗಿ ಸಿದ್ಧಪಡಿಸಿರುವ ಐಸೋಲೇಷನ್ ವಾರ್ಡ್ ಮತ್ತಿತರ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಂತರ ತಾಪಂ ಸಭಾಂಗಣದಲ್ಲಿ ಶಾಸಕ ಬೆಳ್ಳಿಪ್ರಕಾಶ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದರು.
ತಾಲ್ಲೂಕು ಆರೋಗ್ಯಾ ಧಿಕಾರಿ ಡಾ| ಹರೀಶ್ ಅವರಿಂದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರ ಪಡೆದ ಪ್ರಜ್ವಲ್, ಯಾವುದೇ ಕೊರತೆಯಿದ್ದರೂ ನನ್ನ ಗಮನಕ್ಕೆ ತನ್ನಿ. ಪಿಪಿಇ ಕಿಟ್ ಮತ್ತು ಎನ್-95 ಮಾಸ್ಕ್ಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡುತ್ತೇನೆ ಎಂದರು. ಅಗತ್ಯ ವಸ್ತುಗಳು ಮತ್ತು ದಿನಬಳಕೆಯ ದಿನಸಿ ವಸ್ತುಗಳ ದರ ಪಟ್ಟಿಯನ್ನು ಅಂಗಡಿಗಳ ಮುಂದೆ ಕಡ್ಡಾಯವಾಗಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು. ಈ ವಸ್ತುಗಳಿಗೆ ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ಲೈಸೆನ್ಸ್ ರದ್ದುಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ಗೆ ಸೂಚಿಸಿದರು.
ಎಪಿಎಂಸಿಯಲ್ಲಿ ತರಕಾರಿ, ಧಾನ್ಯ ಮಾರಾಟ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸಬೇಕು ಎಂದರು. ಮುಂದಿನ ಸೋಮವಾರ ಎರಡೂವರೆ ಸಾವಿರ ಆಹಾರ ಪದಾರ್ಥ ಕಿಟ್‌ಗಳನ್ನು ಕಡೂರಿಗೆ ಕಳುಹಿಸಲಿದ್ದು, ಅಗತ್ಯವಿದ್ದವರಿಗೆ ಅದನ್ನು ನೀಡಲಾಗುವುದು. ಎರಡೂವರೆ ಸಾವಿರ ಲೀಟರ್ ಸ್ಯಾನಿಟೈಸರ್ ಮತ್ತು 2500 ಮಾಸ್ಕ್ಗಳನ್ನೂ ಇದರ ಜೊತೆ ಕಳುಹಿಸಲಿದ್ದೇನೆ. ಇವುಗಳನ್ನು ಎಲ್ಲ ಆಸ್ಪತ್ರೆಗಳಿಗೆ ಮತ್ತು ಅಗತ್ಯವಿದ್ದವರಿಗೆ ನೀಡುವಂತೆ ತಿಳಿಸಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರಂತರ ದುಡಿಯುತ್ತಿರುವ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಇನ್ನಿತರ ಇಲಾಖಾ ಸಿಬ್ಬಂದಿಗೆ ಮತ್ತು ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಶಾಸಕ ಬೆಳ್ಳಿಪ್ರಕಾಶ್ ಅವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕಾಗಿ ಶಾಸಕರಿಗೆ ಮತ್ತು ವೈದ್ಯಕೀಯ ಸಿಬ್ಬಂ ದಿಗೆ ಅಭಿನಂದಿಸುತ್ತೇನೆ ಎಂದರು. ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಕೊರೊನಾ ಹೆಚ್ಚಾಗುವುದಕ್ಕೆ ಮುಂಚೆಯೇ ಕಡೂರಿನಲ್ಲಿ ಹೋಟೆಲ್ ಮತ್ತು ಬೇಕರಿಗಳನ್ನು ಮುಚ್ಚಲಾಗಿತ್ತು. ಮಾಂಸದಂಗಡಿಗಳನ್ನು ತೆಗೆಯಬಹುದೆಂದಿದ್ದರೂ ಸ್ಥಿತಿಗತಿಯನ್ನಾಧರಿಸಿ ಸ್ಥಳೀಯ ಆಡಳಿತ ಮಾಂಸದಂಗಡಿ, ಬೇಕರಿ ತೆಗೆಯಲು ಅನುಮತಿ ನೀಡಲಿಲ್ಲ. ಕೊರೊನಾ ತಡೆಯುವ ನಿಟ್ಟಿನಲ್ಲಿ ನಿರಂತರವಾಗಿ ಅ ಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಕಾರ್ಯ ನಿರ್ವಹಿಸಲಾಗುತ್ತಿದೆ.ಇದಕ್ಕೆ ಜನರ ಸಹಕಾರ ಮುಖ್ಯವಾಗಿದೆ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ, ಉಪವಿಭಾಗಾ ಧಿಕಾರಿ ರೇಣುಕಾ ಪ್ರಸಾದ್, ತಹಶೀಲ್ದಾರ್ ಜೆ.ಉಮೇಶ್, ಡಿವೈಎಸ್‌ಪಿ ರೇಣುಕಾಪ್ರಸಾದ್, ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ತಾಪಂ ಇಒ ಡಾ.ದೇವರಾಜನಾಯ್ಕ, ಡಾ. ದೀಪಕ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಬೀರೂರು ಸತ್ಯನಾರಾಯಣ, ಆಹಾರ ಇಲಾಖೆಯ ಪ್ರಸಾದ್ ಮತ್ತಿತರರು ಇದ್ದರು.