Advertisement

ಮೂಗು ಮುಚ್ಚಿಕೊಂಡೇ ಓದುವ ಸ್ಥಿತಿ!

05:51 PM Oct 20, 2019 | Naveen |

ಕಡೂರು: ತಾಲೂಕು ಕೇಂದ್ರ ಕಡೂರು ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ಗ್ರಂಥಾಲಯ ಶೀಘ್ರದಲ್ಲೇ ಡಿಜಿಟಲೀಕರಣಗೊಳ್ಳಲಿದೆ. ಆದರೆ, ಗ್ರಂಥಾಲಯದ ಬಳಿ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಹೊರಸೂಸುವ ದುರ್ವಾಸನೆಯಿಂದ ಓದುಗರು ಮೂಗು, ಬಾಯಿ ಮುಚ್ಚಿಕೊಂಡೇ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸುಮಾರು 45 ವರ್ಷಗಳ ಇತಿಹಾಸ ಇರುವ ಕಡೂರು ಗ್ರಂಥಾಲಯ 2002ರಲ್ಲಿ ಅಂದಿನ ಶಾಸಕ ಕೆ.ಎಂ.ಕೃಷ್ಣಮೂರ್ತಿ, ಸಂಸದ ಶ್ರೀಕಂಠಪ್ಪನವರಿಂದ ಉದ್ಘಾಟನೆಗೊಂಡಿದೆ. ನೂತನ ಕಟ್ಟಡದ ಆವರಣ ಇದೀಗ ಸಾರ್ವಜನಿಕರ ಬಯಲು ಶೌಚಾಲಯ, ದೂರದ ಊರುಗಳಿಗೆ ಹೋಗುವವರ ದ್ವಿಚಕ್ರ ವಾಹನಗಳ ನಿಲುಗಡೆಯ ತಾಣವಾಗಿ ಆರ್‌ಟಿಒ ಕಚೇರಿಯಂತೆ ಕಂಡು ಬರುತ್ತಿದೆ ಹಾಗೂ ಹೂವು, ತರಕಾರಿ ಮಾರಾಟಗಾರರ ಮಳಿಗೆಯಾಗಿಯೂ ಮಾರ್ಪಟ್ಟಿದೆ.

ಪಟ್ಟಣದ ಜನಸಂಖ್ಯೆಗಿಂತ ಗ್ರಂಥಾಲಯದ ಪುಸ್ತಕಗಳ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 35 ಸಾವಿರ ಪುಸ್ತಕಗಳ ಬೃಹತ್‌ ಸಂಗ್ರಹವೇ ಇಲ್ಲಿದೆ. ಕಾದಂಬರಿ, ಮಕ್ಕಳ ಕಥೆಗಳ ಪುಸ್ತಕಗಳು, ದಿನಪತ್ರಿಕೆಗಳು, ವಾರ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹತ್ತು ಹಲವು ವಿಧವಾದ ಪುಸ್ತಕಗಳ ಭಂಡಾರವಾಗಿದೆ. ಆದರೆ, ಉಪಯೋಗಿಸಿಕೊಳ್ಳುವವರ ಸಂಖ್ಯೆ ಮಾತ್ರ ತೀರಾ ಕಡಿಮೆ.

ಸೋಮವಾರ ವಾರದ ರಜೆ ಇದ್ದು, ಉಳಿದಂತೆ ಎಲ್ಲಾ ದಿನಗಳಲ್ಲೂ ತೆರೆದಿರುವ
ಗ್ರಂಥಾಲಯಕ್ಕೆ ತೆರೆದ ದಿನಗಳಂದು ಹೆಚ್ಚಾ ಕಡಿಮೆ 120 ಜನರು ಬಂದು ಹೋಗುತ್ತಾರೆ. ಅದರಲ್ಲಿ ಹೆಚ್ಚಿನ ಭಾಗ ದಿನಪತ್ರಿಕೆಗಳನ್ನು ಓದುವವರೇ ಹೆಚ್ಚಾಗಿರುತ್ತಾರೆ. ಕಾದಂಬರಿಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಗ್ರಂಥಾಲಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬೆಳಕಿನ ವ್ಯವಸ್ಥೆ ಅಷ್ಟಕಷ್ಟೇ. ಮುಂದಿನ ಕಾಂಪೌಂಡ ಅನ್ನು ಪುರಸಭೆ ಆಡಳಿತ ಚರಂಡಿ ನಿರ್ಮಿಸಲು ಕೆಡವಿದ್ದರ ಪರಿಣಾಮ ಸಾರ್ವಜನಿಕರು ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಗ್ರಂಥಾಲಯದ ಸಹವರ್ತಿ ಎಚ್‌. ಗೋವಿಂದಪ್ಪ ದೂರುತ್ತಾರೆ.

ಡಿಜಿಟಲ್‌ ಗ್ರಂಥಾಲಯದಲ್ಲಿ 10ಕ್ಕೂ ಹೆಚ್ಚಿನ ಕಂಪ್ಯೂಟರ್‌ ಅಳವಡಿಸಲಿದ್ದು,
ಪ್ರತಿಯೊಂದು ಕಂಪ್ಯೂಟರ್‌ಗೆ ನೆಟ್‌ ಕನೆಕ್ಷನ್‌ ಇದೆ. ಯಾವುದೇ ಮಾಹಿತಿಯನ್ನು ಗಣಕ ಯಂತ್ರದ ಮೂಲಕ ಓದಿಕೊಳ್ಳಲು ನೂತನ ಪ್ರಯೋಗ ಆರಂಭವಾಗಲಿದೆ.

Advertisement

ಒಟ್ಟಾರೆ ಬಯಲು ಮುಕ್ತ ಶೌಚಾಲಯ ನಿರ್ಮಾಣವಾದರೆ ಓದುಗರಿಗೆ ಉಪಯುಕ್ತವಾಗಲಿದೆ. ಡಿಜಿಟಲ್‌ ಗ್ರಂಥಾಲಯ ಶೀಘ್ರವೇ ಆರಂಭವಾದರೆ ವಿದ್ಯಾರ್ಥಿಗಳನ್ನು ಸೆಳೆಯಬಹುದು. ಈ ಗ್ರಂಥಾಲಯಕ್ಕೆ ದಾನಿಗಳು ಸಹ ಪುಸ್ತಕಗಳನ್ನು ನೀಡಿದ್ದು, ಅನುಪಯುಕ್ತ ಪುಸ್ತಕಗಳ ಸಂಖ್ಯೆ 3 ಸಾವಿರ ದಾಟಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧಿಕಾರಿ ಪೂರ್ಣಿಮಾ ಅವರು ಭೇಟಿ ನೀಡಿ ಇಲ್ಲಿನ ಕುಂದುಕೊರತೆಗಳನ್ನು ಬಗೆಹರಿಸಿ ಓದುಗರ ಸಂಖ್ಯೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವರೇ ಎಂದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next