Advertisement

ಗೊಂದಿ ಅಣೆಕಟ್ಟು ಯೋಜನೆಯಲ್ಲಿ ಅನ್ಯಾಯ

04:48 PM Nov 18, 2019 | Naveen |

ಕಡೂರು: ತಾಲೂಕಿಗೆ ಹಂಚಿಕೆಯಾಗಿದ್ದ 1.45 ಟಿಎಂಸಿ ನೀರನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿರುವುದಕ್ಕೆ ಸಿಂಗಟಗೆರೆ ಮತ್ತು ಪಂಚನಹಳ್ಳಿ ಭಾಗದ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಮಾಜಿ ಶಾಸಕ ವೈ.ಎಸ್‌.ವಿ.ದತ್ತ ತಿಳಿಸಿದರು.

Advertisement

ಯಗಟಿ ಗ್ರಾಮದ ಶ್ರೀ ಆಂಜನೇಯ ಸಮುದಾಯ ಭವನದಲ್ಲಿ ರೈತರು, ವಿವಿಧ ಪಕ್ಷಗಳ ಮುಖಂಡರನ್ನು ಒಳಗೊಂಡ ನೀರಾವರಿ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 1.583 ಟಿಎಂಸಿ ನೀರಿನ ಲಭ್ಯತೆ ತಾಲೂಕಿಗಿದ್ದು, ಹೆಬ್ಬೆ ಹಳ್ಳ ಯೋಜನೆಯ ಕನಸು ಹೊರ ಬಂದಾಗ ಈ ನೀರಿನ ಲಭ್ಯತೆಯ ಸರ್ವೆಯಾಗಿ ಇದರಲ್ಲಿ 1.45 ಟಿಎಂಸಿ ನೀರಿನ ಹಂಚಿಕೆ ತಾಲೂಕಿಗೆ ಲಭಿಸಿತ್ತು ಎಂದರು.

ಈ ನೀರಿನ ಹಂಚಿಕೆಯಲ್ಲಿ ಬಿಜೆಪಿ ನೇತೃತ್ವದ ಸರಕಾರದ ಅಂದಿನ ಭಾರೀ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಪಾತ್ರ ಪ್ರಮುಖವಾಗಿದೆ. ಇದಕ್ಕಾಗಿ ತಾಲೂಕಿನ ಜನರು ಮತ್ತು ತಾವು ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಇದೀಗ ಹೆಬ್ಬೆ ಯೋಜನೆ ಕಾರ್ಯ ಸಾಧುವಲ್ಲ ಎಂದು ಸರಕಾರ ತಿಳಿಸಿದ್ದರಿಂದ ಗೊಂದಿ ಅಣೆಕಟ್ಟು ಯೋಜನೆಗೆ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿತ್ತು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ತಾವು ವೈಯಕ್ತಿಕವಾಗಿ ಮುತುವರ್ಜಿ ತೆಗೆದುಕೊಂಡು ಗೊಂದಿ ಅಣೆಕಟ್ಟು ಯೋಜನೆ ಸರ್ವೆ ನಡೆಸಿದ್ದು, ಮೊದಲು ಯೋಜನೆಯಲ್ಲಿ ಮದಗದಕೆರೆ ಮತ್ತು ವಿಷ್ಣುಸಮುದ್ರ ಕೆರೆ ತುಂಬಿಸುವ ಉದ್ದೇಶವಿತ್ತು.

ತದನಂತರ ಅಯ್ಯನಕೆರೆಯನ್ನು ಸರ್ವೆ ವ್ಯಾಪ್ತಿಗೆ ತರಲಾಯಿತು ಎಂದು ತಿಳಿಸಿದರು. ಈ ಮೂರೂ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದರೆ ಕೆಳಗಿನ ಹಲವು ಕೆರೆಗಳು ತುಂಬುವುದರಿಂದ ಗೊಂದಿ ಅಣೆಕಟ್ಟು ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾತ್ವಿಕ ಒಪ್ಪಿಗೆಯನ್ನೂ ನೀಡಿದ್ದರು. ಅಲ್ಲದೇ, ಸರಕಾರದ ಮಟ್ಟದಲ್ಲಿ ಒಂದಿಷ್ಟು ಕಡತ ವ್ಯವಹಾರ ಕೂಡ ನಡೆದಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಾವು ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಬಳಿಕ ಯೋಜನೆ ಕುರಿತಂತೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ ಎಂದರು.

Advertisement

ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ. ರವಿ, ಕಡೂರು ಶಾಸಕ ಬೆಳ್ಳಿಪ್ರಕಾಶ್‌, ತರೀಕೆರೆ ಶಾಸಕ ಡಿ.ಎಸ್‌. ಸುರೇಶ್‌ ಅವರು ಮತ್ತು ಅಧಿಕಾರಿಗಳನ್ನು ಒಳಗೊಂಡ ಸಭೆಯೊಂದು ನಡೆದು, ಅದರಲ್ಲಿ ಗೊಂದಿ ಅಣೆಕಟ್ಟು ಯೋಜನೆಗೆ ಮಾರ್ಪಾಡು ಮಾಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಲಕ್ಯಾ ಮತ್ತು ಆವುತಿ ಹೋಬಳಿ, ಜಾವಗಲ್‌ ಕೆರೆ ಒಳಗೊಂಡಂತೆ ಮರು ಸರ್ವೆ ನಡೆಸಲು ತೀರ್ಮಾನಿಸಿರುವ ಬಗ್ಗೆ ತಮಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.

ಈ ಹಿಂದಿನ ಸರ್ವೆ ಪ್ರಕಾರ ಕಡೂರು ತಾಲೂಕಿನ ವಿಷ್ಣುಸಮುದ್ರ ಕೆರೆಗೆ 0.85 ಟಿಎಂಸಿ ನೀರಿನ ಅಳವಡಿಕೆ ಇತ್ತು. ಪ್ರಸ್ತುತ ಸಭೆಯ ಚರ್ಚೆಯಂತೆ ಅದೀಗ 0.2
ಟಿಎಂಸಿಗೆ ಇಳಿಕೆಯಾಗಲಿದೆ. ಇದು ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆಯಂತೆ ಎನ್ನುವಂತಾಗಿದೆ. ಅಷ್ಟಕ್ಕೂ ಕಡೂರು ತಾಲೂಕಿಗೆ ಮಂಜೂರಾಗಿರುವ ನೀರಿನ ಹಂಚಿಕೆಯನ್ನು ಚಿಕ್ಕಮಗಳೂರು ಕ್ಷೇತ್ರಕ್ಕೂ ವಿಸ್ತರಿಸುವ ಹುನ್ನಾರ ನಡೆದಿದೆ.

ಗೊಂದಿ ಅಣೆಕಟ್ಟು ಯೋಜನೆಯ ಕುರಿತಂತೆ ವಿಷಯ ಮಂಡಿಸಿದಾಗ ತಮ್ಮನ್ನು ಲೇವಡಿ ಮಾಡಲಾಗಿತ್ತು. ಈಗ ನೋಡಿದರೆ ಆ ಯೋಜನೆಗೆ ಬಹಳಷ್ಟು ಜನ ವಾರಸುದಾರರೇ ಹುಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ನೂತನ ಯೋಜನೆ ಏನಾದರೂ ಜಾರಿಗೊಂಡಿದ್ದೇ ಆದಲ್ಲಿ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯನ್ನು ಕೈಬಿಡುವ ವ್ಯವಸ್ಥಿತ ಸಂಚು ನಡೆಯುತ್ತದೆ. ಈ ಬಗ್ಗೆ ರೈತಾಪಿ ಜನ ಸಚಿವರನ್ನು ಪ್ರಶ್ನಿಸಿದಾಗ ಹೆಚ್ಚಿನ ನೀರಿನ ಅಳವಡಿಕೆಯನ್ನು ಮಾಡಿಸಿಕೊಂಡು ಬರುವುದಾಗಿ ಭರವಸೆ ನೀಡುತ್ತಿದ್ದಾರೆ ಎಂಬ ಮಾಹಿತಿಯೂ ತಮಗಿದೆ.

ನೀರಿನ ಹಂಚಿಕೆ ಸರಕಾರದ ಮಟ್ಟದಲ್ಲಿ ಆಗುವುದಿಲ್ಲ. ಅದಕ್ಕಾಗಿ ಟ್ರಿಬ್ಯುನಲ್‌ ಸಮಿತಿ ಇದೆ ಎಂಬ ತಿಳಿವಳಿಕೆ ಸಚಿವರಿಗೆ ಇದೆ ಎಂದು ಭಾವಿಸುತ್ತೇನೆ. ಇಲ್ಲಿ ನೀರಿನ ಹಂಚಿಕೆ ಮಾಡಿಸಬೇಕಾದರೆ ಎಷ್ಟು ಸರ್ಕಸ್‌ ಮಾಡಬೇಕು, ಎಷ್ಟು ವರ್ಷ ಕಾಯಬೇಕು ಎಂಬ ಬಗ್ಗೆ ಆಲೋಚಿಸಲಿ ಎಂದು ಕುಟುಕಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನೀರಾವರಿ ಇಂಜಿನೀಯರ್‌ ರಾಜಕುಮಾರ್‌ ನೀರಾವರಿ ಯೋಜನೆಗಳು ಮತ್ತು ತಾಲೂಕಿಗೆ ಹಂಚಿಕೆಯಾದ ನೀರಿನ ಕುರಿತು ಮಾಹಿತಿ ನೀಡಿದರು. ವಿಷ್ಣು ಸಮುದ್ರ ಹೋರಾಟ ಸಮಿತಿ ಸದಸ್ಯ ಮಲ್ಲಾಘಟ್ಟ ಶರತ್‌, ಪಂಚನಹಳ್ಳಿ ಪಾಪಣ್ಣ, ಸಿ.ಟಿ. ನಾರಾಯಣಮೂರ್ತಿ, ಬಿದರೆ ಜಗದೀಶ್‌, ವೈ.ಎಸ್‌.ರವಿಪ್ರಕಾಶ್‌, ಶೂದ್ರ ಶ್ರೀನಿವಾಸ್‌, ಯಗಟಿಪುರ ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next