ಕಡೂರು: ಆಡು ಮುಟ್ಟದ ಸೊಪ್ಪಿಲ್ಲ ದತ್ತ ಮಾಸ್ಟರ್ ಕಲಿಯದ ವಿದ್ಯೆ ಇಲ್ಲ ಎಂಬ ನಾಣ್ಣುಡಿಯಂತೆ ಮಾಜಿ ಶಾಸಕ ವೈ.ಎಸ್. ವಿ. ದತ್ತ ಅವರು ಪ್ರಸಕ್ತ ಕೊರೊನಾದಿಂದ ಮನೆಯಲ್ಲಿಯೇ ಲಾಕ್ ಆಗಿರುವ ಎಸ್‌ಎಸ್ ಎಲ್‌ಸಿ ಮಕ್ಕಳಿಗೆ ಕಳೆದೆರೆಡು ದಿನಗಳಿಂದ ಗಣಿತ ಪಾಠವನ್ನು ಫೇಸ್‌ಬುಕ್ ಮೂಲಕ ಮಾಡಿ ಮಕ್ಕಳ ಮತ್ತು ಪೋಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನಲ್ಲಿ ಸರಿ ಸುಮಾರು 40 ವರ್ಷಗಳ ಕಾಲ ಟ್ಯೂಷನ್ ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಜೀವನ ಪಾಠ ಮಾಡಿರುವ ದತ್ತ ಮೇಷ್ಟ್ರು, ಶಾಸಕರಾಗಿ ಗುರುತಿಸಿಕೊಳ್ಳುವುದಕ್ಕಿಂತ ಒಬ್ಬ ಶಿಕ್ಷಕನಾಗಿ ಗುರುತಿಸಿಕೊಳ್ಳಲು ಹೆಚ್ಚಿಗೆ ಬಯಸುತ್ತಾರೆ. ಅವರು ಶಾಸಕರಾಗಿದ್ದ ಅವಧಿಯಲ್ಲಿ ಕಡೂರು ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಲವಾರು ಬಾರಿ ಗಣಿತ ಪಾಠವನ್ನು ಪ್ರಥಮ ಪಿಯು ಮಕ್ಕಳಿಗೆ ಬೋಧನೆ ಮಾಡಿದ್ದಾರೆ.
ಸಿಇಟಿ, ನೀಟ್ ಬರೆಯುವ ಮಕ್ಕಳಿಗೆ ಉಚಿತವಾಗಿ ಸಪ್ತಕೋಟಿ ಧನಂಜಯ ತಂಡದ ಮೂಲಕ ಕೋಚಿಂಗ್ ಕೊಡಿಸುವ ಮೂಲಕ ಎಂಜಿನಿಯರ್, ಮೆಡಿಕಲ್ ಕೋರ್ಸ್‌ಗೆ ಸೇರಲು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಮಂಗಳವಾರ, ಬುಧವಾರ ಎರಡು ದಿನ 10 ನೇ ತರಗತಿಯ ಕನ್ನಡ ಮಾಧ್ಯಮದ ಮಕ್ಕಳಿಗೆ ಗಣಿತ ವಿಷಯ ಕಬ್ಬಿಣದ ಕಡಲೆ ಆದರೆ ಅದನ್ನು ಸರಳವಾಗಿ ಕಲಿಯಲು ಪ್ರೇರಣೆ ನೀಡಿದ್ದಾರೆ.
ಸಮಾಂತರ ಶ್ರೇಢಿ ಪಾಠವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಬರುವ ಸೂತ್ರಗಳನ್ನು ಬಿಡಿಸುವುದಲ್ಲದೆ ಕ್ಲಿಷ್ಠಕರ ಲೆಕ್ಕಗಳನ್ನು ಬಿಡಿಸಿ ಮಕ್ಕಳ ಮನಗೆದ್ದರು. ದತ್ತ ಮಾಸ್ಟರ್ ಹೇಳಿಕೊಟ್ಟ ಗಣಿತ ಪಾಠವನ್ನು ಸುಮಾರು 5.5 ಲಕ್ಷ ಮಕ್ಕಳೂ ವೀಕ್ಷಿಸಿರುವುದು ಒಂದು ದಾಖಲೆಯಾಗಿದೆ. ಗಣಿತ ಬೋಧಿಸುತ್ತಿರುವ ಶಿಕ್ಷಕ ವರ್ಗ ಸಹ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ.
ನನಗೆ ಗಣಿತ ಪಾಠವನ್ನು ಮಾಡುವುದರಲ್ಲಿ ಸಿಗುವ ಸಂತೋಷ ಬೇರೆ ಯಾವ ವೃತ್ತಿಯಲ್ಲಿಯೂ ಸಿಗುವುದಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಏನಾದರೂ ಮಾಡಬೇಕೆಂಬ ಹಂಬಲವಿತ್ತು. ಕೊನೆಗೆ ಹೊಳೆದಿದ್ದು 10 ನೇ ತರಗತಿಯ ಮಕ್ಕಳಿಗೆ ಗಣಿತ ಪಾಠ ಮಾಡುವುದು. ಸಂಫುರ್ಣ ಪಾಠ ಮಾಡಲಿಕ್ಕಾಗದಿದ್ದರೂ ಮಕ್ಕಳು ಮುಂದೆ ಬರೆಯಲಿರುವ ಪರೀಕ್ಷೆಗೆ ಆತ್ಮಸ್ಥೈರ್ಯ ತುಂಬುವುದೇ ನನ್ನ ಆಶಯವಾಗಿದೆ .
ವೈ.ಎಸ್.ವಿ. ದತ್ತ ,
ಮಾಜಿ ಶಾಸಕ