Advertisement

ಅಹಿಂಸೆ-ಸದ್ಭಾವನೆಯಿಂದ ಶುದ್ಧ ಜೀವನ

05:00 PM Dec 13, 2019 | Naveen |

ಕಡೂರು: ಸದ್ಭಾವನೆ, ನೌತಿಕತೆ ಮತ್ತು ನಶಾಮುಕ್ತಿಯಿಂದ ಬಿಡುಗಡೆಗೆ ಅಹಿಂಸಾ ಯಾತ್ರೆ ನಡೆಸಲಾಗುತ್ತಿದೆ. ಧರ್ಮ ಗುರುವಿನ ಮಾರ್ಗದರ್ಶನದಿಂದ ಮನುಷ್ಯ ಪೂಜನೀಯ ವ್ಯಕ್ತಿಯಾಗುತ್ತಾನೆ ಎಂದು ಜೈನ ಸಮುದಾಯದ ತೇರಾಪಂಥ ಸಂಘದ 11ನೇ ಆಚಾರ್ಯ ಶ್ರೀ ಶ್ರಮಣ್‌ ಜೀ ಮಹಾರಾಜ್‌ ಅಭಿಪ್ರಾಯಪಟ್ಟರು.

Advertisement

ಕಡೂರಿನಲ್ಲಿ ಜೈನ್‌ ಶ್ವೇತಾಂಬರ ಸಕಲ ಸಂಘ ಗುರುವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಅಹಿಂಸಾ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾದಕ ವಸ್ತುಗಳ ನಶೆಯಿಂದ ನಮ್ಮ ಜೀವನ ಹಾಳಾಗುವುದು ಖಚಿತ. ನಮಗೆ ಬೇಕಿರುವುದು ಆ ನಶೆಯಲ್ಲ. ಜ್ಞಾನದ ಅಹಿಂಸೆಯ ನಶೆ ನಮ್ಮನ್ನು ಆವರಿಸಬೇಕಿದೆ. ಈ ಅಹಿಂಸೆಯ ದಾರಿಯಲ್ಲಿ ಮನಃಶಾಂತಿ ದೊರೆಯುತ್ತದೆ. ಹಿಂಸೆಯ ಆಚರಣೆ ಯಾವ ಧರ್ಮದಲ್ಲಿಯೂ ಇಲ್ಲ. ಅಹಿಂಸೆಯೇ ಪರಮ ಧರ್ಮ. ನಶೆರಹಿತ ಸಾತ್ವಿಕ ಆಹಾರ ಸೇವನೆಯಿಂದ ಅಹಿಂಸೆ ಮತ್ತು ಸದ್ಭಾವನೆಯಿಂದ ಕೂಡಿದ ಜೀವನ ಅನುಕರಣೀಯವಾಗುತ್ತದೆ. ಇದನ್ನು ಪ್ರಜ್ಞಾಪೂರ್ವಕವಾಗಿ ಪ್ರತಿಯೊಬ್ಬರೂ ಆಚರಿಸಿದರೆ ನಮ್ಮ ಮತ್ತು ಸುತ್ತಮುತ್ತಲಿನ ಪರಿಸರ ಸುಂದರವಾಗಿರುತ್ತದೆ ಎಂದರು.

ಅಹಿಂಸೆ, ಸದ್ಭಾವನೆ ಮತ್ತು ನಶಾ ಮುಕ್ತಿಯಿಂದ ಶುದ್ಧ ಜೀವನ ಈ ಮೂರೂ ವಿಚಾರಗಳ ಪ್ರಚಾರಕ್ಕಾಗಿಯೇ ಅಹಿಂಸಾ ಯಾತ್ರೆ ಏರ್ಪಡಿಸಲಾಗಿದೆ. ಪ್ರಾಪಂಚಿಕ ಮತ್ತು ಲೌಕಿಕ ಜಗತ್ತಿನಲ್ಲಿ ಜೀವಿಸುತ್ತಲೇ ಅಹಿಂಸೆಯನ್ನು ಆಚರಿಸಬೇಕು. ಅಳವಡಿಸಿಕೊಳ್ಳಬೇಕು ಎಂದರು.

ಕಮಲ್‌ವುುನಿ ಮಹಾರಾಜ್‌ ಮಾತನಾಡಿ, ಅಹಿಂಸಾ ಧರ್ಮವನ್ನು ಬೋಧಿಸಿದ ಮಹಾವೀರರು ಮತ್ತಿತರ ತೀರ್ಥಕರರು ಸದಾ ಪ್ರಾಂತಃಸ್ಮರಣೀಯರು. ಪ್ರಸ್ತುತ ನಡೆಯುತ್ತಿರುವ ಹಿಂಸೆಯ ಘಟನಾವಳಿಗಳು ಆತಂಕಕಾರಿಯಾಗಿವೆ. ಆದರೆ, ಹಿಂಸೆಯನ್ನೂ ಅಹಿಂಸೆಯಿಂದ ಗೆಲ್ಲಬಹುದು ಎಂಬುದು ವಾಸ್ತವಿಕ ಸತ್ಯ. ತೇರಾಪಂಥ್‌ ಸಂಘದ ಮೂಲ ಉದ್ದೇಶವೇ ಅಹಿಂಸೆಯನ್ನು ಪ್ರಚುರಪಡಿಸುವುದಾಗಿದೆ ಎಂದರು.

ಸ್ವಾ ಪ್ರಮುಖ್‌ ಕನಕಪ್ರಭಾಜಿ, ಮಹಾವೀರ ಮುನಿ, ದಿನೇಶ್‌ ಮುನಿಗಳು ಸೇರಿದಂತೆ ಶ್ರಮಣ್‌ ಜೀಯವರ ಶಿಷ್ಯರು, ಮಹಾವೀರ ಸುರಾನಾ, ತರುಣ್‌ಕುಮಾರ್‌, ಶಿವರತನ್‌ ಸಂಚೇತಿ ಇತರರು ಉಪಸ್ಥಿತರಿದ್ದರು. ಜೈನ್‌ ಮುನಿ ಶ್ರಮಣ್‌ ಜೀ ಮತ್ತು ಸ್ವಾದ್ವಿಯರ ತಂಡ ಬುಧವಾರ ಸಂಜೆ ಸರಸ್ವತೀಪುರದ ಮೊರಾರ್ಜಿ ಶಾಲೆಯಲ್ಲಿ ವಾಸ್ತವ್ಯ ಮಾಡಿ ಗುರುವಾರ ಬೆಳಿಗ್ಗೆ ಕಡೂರಿಗೆ ಆಗಮಿಸಿದಾಗ ಜೈನ್‌ ಸಮುದಾಯದವರು ಕನಕವೃತ್ತದ ಬಳಿ ಸಾಂಪ್ರದಾಯಕವಾಗಿ ಸ್ವಾಗತಿಸಿದರು. ಶಾಸಕ ಬೆಳ್ಳಿ ಪ್ರಕಾಶ್‌ ದತ್ತ ಮಾಲಾಧಾರಿಯಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಕ್ರಮದಲ್ಲಿ ಕುಳಿತು ಪ್ರವಚನ ಕೇಳಿದರು. ನಂತರ ಮಾತನಾಡಿ ಭಾರತ ಧರ್ಮಗಳ ದೇಶವಾಗಿದೆ. ಜೈನ ಮುನಿಗಳು ಪಾದಯಾತ್ರೆ ಮಾಡುವ ಮೂಲಕ ಬರದ ನಾಡಾಗಿರುವ ಕಡೂರು ಪಟ್ಟಣಕ್ಕೆ ಆಗಮಿಸಿದ್ದು ಸಂಭೃದ್ಧಿಯ ಸಂಕೇತವಾಗಿದೆ. ಗುರುಗಳ ಆಶೀರ್ವದ ಮತ್ತು ಅಹಿಂಸಾ ಯಾತ್ರೆಯ ಧರ್ಮ ಸಂದೇಶಗಳು ಇಂದಿನ ಜನರಿಗೆ ಪ್ರಸ್ತುತವಾಗಿವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next