ಅಜೆಕಾರು: ಕಡ್ತಲ, ಮರ್ಣೆ ಗ್ರಾಮ ಪಂಚಾಯತ್‌ಗಳ ನಡುವೆ ಸಂಪರ್ಕ ಕಲ್ಪಿಸುವ ದರ್ಬುಜೆ ಸೇತುವೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ಸ್ಥಳೀಯರಿಗೆ ಸಂಕಷ್ಟ ಉಂಟಾಗಿದೆ. ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಇನ್ನೂ ಪಿಲ್ಲರ್ ಹಂತದಲ್ಲಿಯೇ ಸೇತುವೆ ಕಾಮಗಾರಿ ಇದ್ದು ಸ್ಥಳೀಯರ ಬಹುದಿನದ ಬೇಡಿಕೆ ಇನ್ನೂ ಈಡೇರುವ ಹಂತದಲ್ಲಿಲ್ಲ.
2016-17ನೇ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ದಬುìಜೆ ಸೇತುವೆಗೆ
1 ಕೋ.ರೂ. ಅನುದಾನ ಮಂಜೂರು ಗೊಂಡಿತ್ತಾದರೂ ಕೆಲ ಸಮಯ ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ಕಾಮಗಾರಿ ಆರಂಭಗೊಂಡಿರಲಿಲ್ಲ. 2018ರ ಡಿಸೆಂಬರ್ ವೇಳೆಗೆ ಸೇತುವೆಯ ಕಾಮಗಾರಿ ಆರಂಭಗೊಂಡು ಪಿಲ್ಲರ್ ಅಳವಡಿಸಲಾಗಿತ್ತಾದರೂ ಅನಂತರದ ಕಾಮಗಾರಿ ನಡೆಯದೇ ಸೇತುವೆ ಅರ್ಧಕ್ಕೆ ಸ್ಥಗಿತಗೊಂಡಿದೆ.
ಕಡ್ತಲ ಗ್ರಾ.ಪಂ.ನ ದರ್ಬುಜೆ ಭಾಗ, ಮರ್ಣೆ ಗ್ರಾಮ ಪಂಚಾಯತ್‌ನ ದೆಪ್ಪುತ್ತೆ ಭಾಗದ ಸುಮಾರು 500ರಷ್ಟು ಮನೆ ಗಳಿಗೆ ಅತ್ಯಾವಶ್ಯಕವಾಗಿರುವ ಈ ಸೇತುವೆ ಇನ್ನೂ ಸಹ ಮರೀಚಿಕೆಯಾಗಿದೆ ಅಲ್ಲದೆ ಅಜೆಕಾರು ಭಾಗದಿಂದ ಕಡ್ತಲ ಕೈಕಂಬ ಮಾರ್ಗವಾಗಿ ಪೆರ್ಡೂರು, ಉಡುಪಿ ಸಂಪರ್ಕಿಸಲು ಅತಿ ಹತ್ತಿರದ ರಸ್ತೆ ಇದಾಗಿದ್ದು ಸೇತುವೆ ಇಲ್ಲದ ಪರಿಣಾಮ ಸುತ್ತುಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಇಲ್ಲಿಯವರದ್ದಾಗಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ವಿದ್ಯಾರ್ಥಿಗಳಿಗೂ ಶಾಲೆಗೆ ತೆರಳಲು ಸಮಸ್ಯೆಯಾಗಿದೆ. ಸ್ಥಳೀಯರು ದಬುìಜೆ ಸೇತುವೆ ನಿರ್ಮಾಣಕ್ಕೆ ದಶಕಗಳಿಂದ ಮನವಿ ಮಾಡುತ್ತಾ ಬಂದಿದ್ದು 2016-17ನೇ ಸಾಲಿನಲ್ಲಿ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಅನುದಾನ ಮಂಜೂರುಗೊಳಿಸಿದ್ದರು.
ಸ್ಥಳೀಯಾಡಳಿತವು ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿತ್ತಾದರೂ ಅಧಿಕಾರಿಗಳು, ಗುತ್ತಿಗೆದಾರರ ವಿಳಂಬ ಧೋರಣೆಯಿಂದಾಗಿ ಕಾಮಗಾರಿ ಅಪೂರ್ಣಗೊಂಡಿದೆ. 2019ರ ಫೆಬ್ರವರಿಯಲ್ಲಿ ಪಿಲ್ಲರ್ ಹಾಕುವ ಕಾಮಗಾರಿ ಪ್ರಾರಂಭಗೊಂಡಿದ್ದು ಎಪ್ರಿಲ್, ಮೇ ತಿಂಗಳಿನಲ್ಲಿ ಸ್ಥಗಿತಗೊಂಡ ಸೇತುವೆ ಕಾಮಗಾರಿ ಈವರೆಗೆ ಆರಂಭಗೊಂಡಿಲ್ಲ. 2020ರ ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಕ್ತಾಯಗೊಳಿಸುವ ಅವಧಿ ಯಾಗಿದೆ. ಅವಧಿ ಮುಕ್ತಾಯಗೊಳ್ಳಲು ಕೇವಲ ಎರಡು ತಿಂಗಳು ಬಾಕಿಯಿದ್ದು ಕಾಮಗಾರಿ ಇನ್ನೂ ಆರಂಭಗೊಳ್ಳದೇ ಇರುವುದರಿಂದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯವಾಗಿದೆ. ಕಾಮಗಾರಿ ಶೀಘ್ರ ಆರಂಭಿಸಿ ಸೇತುವೆ ಪೂರ್ಣಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯರಿಗೆ ಸಂಕಷ್ಟ
ಹಲವು ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಸ್ಥಳಿಯರು ಮನವಿ ಮಾಡುತ್ತಾ ಬಂದಿದ್ದು ಮನವಿಗೆ ಸ್ಪಂದಿಸಿದ ಜನಪ್ರತಿನಿಧಿಗಳು ಅನುದಾನ ಒದಗಿಸಿದ್ದರೂ ಗುತ್ತಿಗೆದಾರರು, ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದು ಸ್ಥಳೀಯರಿಗೆ ಸಂಕಷ್ಟ ಉಂಟಾಗಿದೆ.
-ಸಂಜೀವ ನಾಯ್ಕ, ಸ್ಥಳೀಯರು
ಪಿಲ್ಲರ್ ಹಂತದಲ್ಲೇ ಸ್ಥಗಿತ
ಅನುದಾನ ಮಂಜೂರುಗೊಂಡು ಎರಡು ವರ್ಷ ಕಳೆದರೂ ಇಲಾಖಾಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸೇತುವೆ ಕಾಮಗಾರಿ ಪಿಲ್ಲರ್ ಹಂತದಲ್ಲೇ ಸ್ಥಗಿತಗೊಂಡಿದೆ. ಸ್ಥಳೀಯರ ಸಮಸ್ಯೆ ಮನಗಂಡು ಶೀಘ್ರ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕಿದೆ.
-ಅರುಣ್ ಕುಮಾರ್ ಹೆಗ್ಡೆ,, ಅಧ್ಯಕ್ಷರು, ಗ್ರಾಮಪಂಚಾಯತ್, ಕಡ್ತಲ
ಕಾಮಗಾರಿ ಶೀಘ್ರ ಪೂರ್ಣ
2016-17ರ ಕ್ರಿಯಾ ಯೋಜನೆಯಲ್ಲಿ ಅನುದಾನ ಮಂಜೂರುಗೊಂಡಿದ್ದರೂ ಟೆಂಡರ್ ವಿಳಂಬದಿಂದಾಗಿ 2019ರ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಗೊಂಡಿದೆ. ಅನಂತರ ಮಳೆ ಬಂದ ಕಾರಣ ಕಾಮಗಾರಿ ಸ್ಥಗಿತಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ ಸೇತುವೆ ಪೂರ್ಣಗೊಳಿಸಲಾಗುವುದು.
-ನಾಗರಾಜ ನಾಯಕ್, ಎಂಜಿನಿಯರ್
– ಜಗದೀಶ ಅಜೆಕಾರು