Advertisement

ಮಳೆಗಾಲ ಮುಗಿಯುವವರೆಗೆ ಕದ್ರಿಪಾರ್ಕ್‌ ಸಂಗೀತ ಕಾರಂಜಿ ಶೋ ಸ್ಥಗಿತ

10:27 AM Jun 29, 2018 | |

ಮಹಾನಗರ: ಕದ್ರಿಯ ಜಿಂಕೆ ಪಾರ್ಕ್‌ ಖ್ಯಾತಿಯ ಹಳೆ ಮೃಗಾಲಯದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ಐದು ತಿಂಗಳ ಹಿಂದೆ ಯಷ್ಟೇ ಉದ್ಘಾಟನೆಗೊಂಡಿದ್ದ ಸಂಗೀತ ಕಾರಂಜಿ-ಲೇಸರ್‌ ಶೋ ಪ್ರದರ್ಶನವು ವಿಪರೀತ ಮಳೆಯ ಕಾರಣದಿಂದಾಗಿ ಮೂರು ವಾರಗಳಿಂದ ಸ್ಥಗಿತಗೊಂಡಿದೆ. ಹೀಗಾಗಿ, ಇದಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಸಂಗೀತ ಕಾರಂಜಿ- ಲೇಸರ್‌ ಶೋ ವೀಕ್ಷಣೆಗೆ ಜನರಿಗೆ ಅನುಕೂಲವಾಗುವಂತೆ ಮೇಲ್ಛಾವಣಿ ನಿರ್ಮಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

Advertisement

ಕದ್ರಿಯಲ್ಲಿ ಲೇಸರ್‌ ಶೋ ಪ್ರದರ್ಶನ ತೆರೆದ ಪ್ರದೇಶದಲ್ಲಿ ನಡೆಯುತ್ತದೆ. ಅಲ್ಲಿ ಪ್ರವಾಸಿಗರಿಗೆ ಮಳೆಯಿಂದ ರಕ್ಷಣೆಗೆಂದು ಯಾವುದೇ ರೀತಿಯ ಮೇಲ್ಛಾವಣಿ ವ್ಯವಸ್ಥೆ ಇಲ್ಲ. ಆದ್ದರಿಂದ ಜೂ. 7ರಿಂದ ಮಳೆಗಾಲ ಪೂರ್ಣಗೊಳ್ಳುವ ವರೆಗೆ ಲೇಸರ್‌ ಶೋ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಆದರೂ ಪ್ರವಾಸಿಗರಿಂದ ಲೇಸರ್‌ ಶೋ ಪ್ರಾರಂಭಿಸಲು ಒತ್ತಡ ಬರುತ್ತಿದೆ. ಈ ಬಗ್ಗೆ ಪರ್ಯಾಯ ಮಾರ್ಗ ಕಂಡು ಕೊಳ್ಳುವಲ್ಲಿ ತೋಟಗಾರಿಕಾ ಇಲಾಖೆ, ಜಿಲ್ಲಾಡಳಿತ ಚಿಂತನೆ ನಡೆಸಲು ಮುಂದಾಗಿವೆ.

ಸರ್ವಋತು ವೀಕ್ಷಣೆ ಭಾಗ್ಯ ಲಭಿಸಲಿ
ಮೈಸೂರಿನ ಕೆಆರ್‌ಎಸ್‌ನಲ್ಲಿಯೂ ಸಂಗೀತ ಕಾರಂಜಿ ಪ್ರದರ್ಶನವಾಗುತ್ತಿದೆ. ಈ ಸಮಯದಲ್ಲಿ ಮಳೆ ಅಡ್ಡಿ ಬಂದು ಅನೇಕ ಬಾರಿ ಪ್ರದರ್ಶನ ರದ್ದಾಗಿದೆ. ಅದಕ್ಕೆಂದು ಕೆಲವು ತಿಂಗಳುಗಳ ಹಿಂದೆ ಅಲ್ಲಿನ ತೋಟಗಾರಿಕಾ ಇಲಾಖೆ ಸಭೆ ನಡೆಸಿದ್ದು, ಪ್ರವಾಸಿಗರಿಗೆ ಮಳೆಗಾಲದಲ್ಲೂ ಸಂಗೀತ ಕಾರಂಜಿ ವೀಕ್ಷಣೆಗೆ ಅನುಕೂಲವಾಗುವಂತೆ ಮೇಲ್ಛಾವಣಿ ನಿರ್ಮಾಣ ಮಾಡಲು ಟೆಂಡರ್‌ ಕರೆಯಲು ಮುಂದಾಗಿದೆ. ಇದೇ ವ್ಯವಸ್ಥೆಯನ್ನು ಕದ್ರಿಯ ಪಾರ್ಕ್‌ನಲ್ಲಿಯೂ ಅಳವಡಿಸಲು ಮುಂದಾದರೆ ಸರ್ವಋತುವಿನಲ್ಲಿಯೂ ಲೇಸರ್‌ ಶೋ ವೀಕ್ಷಣೆಯ ಭಾಗ್ಯ ಪ್ರವಾಸಿಗರಿಗೆ ಸಿಗಲಿದೆ.

ಶೋ ದರ ಕಡಿಮೆ ಮಾಡಲು ಚಿಂತನೆ
ಜನವರಿ 7ರಂದು ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಂಗೀತ ಕಾರಂಜಿ-ಲೇಸರ್‌ ಶೋಗೆ ಚಾಲನೆ ನೀಡಿದ್ದರು. ಆ ಬಳಿಕ 3 ತಿಂಗಳುಗಳ ಕಾಲ ಪ್ರವೇಶ ದರ ನಿಗದಿ ಪಡಿಸಿರಲಿಲ್ಲ. ಆದರೆ ಎ. 20ರಿಂದ ಏಕಾಏಕಿ ಸಂಗೀತ ಕಾರಂಜಿ-ಲೇಸರ್‌ ಶೋಗೆ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ಮತ್ತು ಕೇವಲ ಉದ್ಯಾನವನ ವೀಕ್ಷಣೆಗೆ 10 ರೂ. ನಿಗದಿಪಡಿಸಲಾಯಿತು. ಆದರೂ ಶೋ ನೋಡಲು ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿವೆಯಾಗಲಿಲ್ಲ. ದರ ನಿಗದಿಪಡಿಸಿದ ಐದು ದಿನಗಳಲ್ಲಿ 96,450 ರೂ. ಇಲಾಖೆಯ ಬೊಕ್ಕಸಕ್ಕೆ ಬಂದಿತ್ತು.

ಮೈಸೂರು ಕೆಆರ್‌ಎಸ್‌ನಲ್ಲಿ ಸಂಗೀತ ಕಾರಂಜಿ ವೀಕ್ಷಣೆಗೆ ಪ್ರವೇಶ ದರ ಕಡಿಮೆ ಇದೆ. ಮೈಸೂರಿನಲ್ಲಿ ವಯಸ್ಕರಿಗೆ 20 ರೂ. ಮತ್ತು ಮಕ್ಕಳಿಗೆ 5 ರೂ.ದರ ನಿಗದಿ ಪಡಿಸಲಾಗಿದೆ. ಇದಕ್ಕೆ ಹೋಲಿಕೆ ಮಾಡಿದರೆ ಕದ್ರಿ ಜಿಂಕೆ ಉದ್ಯಾನವನದಲ್ಲಿ ದುಪ್ಪಟ್ಟು ಹಣ ಇದ್ದು ಪ್ರವಾಸಿಗರಿಂದ ಆಕ್ಷೇಪ ಕೂಡ ವ್ಯಕ್ತವಾಗಿದೆ.

Advertisement

ಈ ಬಗ್ಗೆ ಉದಯವಾಣಿ ಸುದಿನಕ್ಕೆ ಪ್ರತಿಕ್ರಿಯೆ ನೀಡಿದ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಮುಂದಿನ ದಿನಗಳಲ್ಲಿ ಲೇಸರ್‌ ಶೋ ವಿಕ್ಷಣೆಗೆ ಆಗಮಿಸುವವರ ಸಂಖ್ಯೆಗೆ ಅನುಗುಣವಾಗಿ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಚರ್ಚೆ ನಡೆಸುತ್ತೇವೆ
ಕದ್ರಿಯ ಲೇಸರ್‌ ಶೋ ಸಂಗೀತ ಕಾರಂಜಿಯನ್ನು ಮಳೆಗಾಲದ ಕಾರಣದಿಂದಾಗಿ ಕೆಲವು ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಮೇಲ್ಛಾವಣಿ ನಿರ್ಮಾಣ ಮಾಡುವ ಕುರಿತಂತೆ ಮುಂಬರುವ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. 
– ಶಶಿಕಾಂತ್‌ ಸೆಂಥಿಲ್‌
ದ.ಕ. ಜಿಲ್ಲಾಧಿಕಾರಿ

ಮೂಲ ಸೌಕರ್ಯಕ್ಕೆ ಒತ್ತು
ಕದ್ರಿಯ ಜಿಂಕೆ ಪಾರ್ಕ್‌ ಖ್ಯಾತಿಯ ಹಳೆ ಮೃಗಾಲಯವು ಮತ್ತಷ್ಟು ಅಭಿವೃದ್ಧಿಯಾಗಬೇಕಿದೆ. ಈ ಪ್ರದೇಶದಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಮೇಲ್ಛಾವಣಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳಲ್ಲಿ ಮತ್ತು ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚೆ ನಡೆಸಲಾಗುವುದು.
– ಜಾನಕಿ, ಹಿರಿಯ ಸಹಾಯಕಿ
ತೋಟಗಾರಿಕಾ ಇಲಾಖೆ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next