ಮಂಗಳೂರು : ಕದ್ರಿಯ ಸುಮಾರು 40 ವರ್ಷ ಹಳೆಯ ಶಿಥಿಲಾವಸ್ಥೆಯಲ್ಲಿದ್ದ ಮಾರುಕಟ್ಟೆ ಕಟ್ಟಡವನ್ನು ಕೆಡವಿ 14.71 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ವ್ಯಾಪಾರಿಗಳಿಗೆ ತಾತ್ಕಾಲಿಕ ಮಳಿಗೆ ನಿರ್ಮಾಣ ಕಾಮಗಾರಿ ಹಳೆ ಮಾರುಕಟ್ಟೆ ಮುಂಭಾಗದಲ್ಲಿ ಭಾಗಶಃ ಮುಕ್ತಾಯಗೊಂಡಿದೆ. ತಿಂಗಳೊಳಗಾಗಿ ವ್ಯಾಪಾರಿಗಳು ತಾತ್ಕಾಲಿಕ ಮಳಿಗೆಗೆ ಸ್ಥಳಾಂತರಗೊಳ್ಳಲಿದ್ದಾರೆ.
ಪಾಲಿಕೆ ಅಧೀನದಲ್ಲಿರುವ ಕದ್ರಿ ಮಾರುಕಟ್ಟೆಯಲ್ಲಿ ಒಟ್ಟು 45 ಮಳಿಗೆಗಳು ವ್ಯಾಪಾರ ನಡೆಸುತ್ತಿದ್ದು, ಹೊಸ ಕಟ್ಟಡ ಕಾಮಗಾರಿ ಆರಂಭ ಗೊಂಡು ಮುಗಿಯುವವರೆಗೆ ವ್ಯಾಪಾರಿಗಳಿಗೆ ವ್ಯವಹಾರ ನಡೆಸಲು ಅನುಕೂಲವಾಗುವಂತೆ ವ್ಯಾಪಾರಿಗಳಿಗೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಕೊನೆ ಹಂತದ ಪ್ಲಂಬ್ಲಿಂಗ್ ಕೆಲಸಗಳು ನಡೆಯುತ್ತಿವೆ.
ಕದ್ರಿ ಮಾರುಕಟ್ಟೆಯ ಮೂಲ ಸಮಸ್ಯೆಗಳನ್ನು ಮನಗಂಡ ಮಾಜಿ ಶಾಸಕ ಜೆ.ಆರ್. ಲೋಬೋ ಅವರು ಹೊಸ ಮಾರುಕಟ್ಟೆ ನಿರ್ಮಿಸಲು ಕ್ರಮ ವಹಿಸುವಂತೆ ಸೂಚಿಸಿದ್ದರು. ಇದರಂತೆ ಈಗಿನ ಮಾರುಕಟ್ಟೆ ಕಟ್ಟಡದ ಭಾಗದಲ್ಲಿ (25 ಸೆಂಟ್ಸ್)ಹಾಗೂ ಪಕ್ಕದಲ್ಲಿ ಲಭ್ಯವಿರುವ ಪಾಲಿಕೆಯ 45 ಸೆಂಟ್ಸ್ ಜಾಗವನ್ನು ಉಪ ಯೋಗಿಸಿ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.
ಹೊಸ ಮಾರುಕಟ್ಟೆಯೊಳಗೆ..!
ಒಟ್ಟು 6,920 ಚದರ ಮೀಟರ್ ವಿಸ್ತೀರ್ಣದಲ್ಲಿ ಮೂರು ಅಂತಸ್ತುಗಳ ಸುಸಜ್ಜಿತ ಸಂಕೀರ್ಣ ನಿರ್ಮಾಣವಾಗಲಿದೆ. ಕೆಳಮಟ್ಟದ ತಳ ಅಂತಸ್ತು 1,090 ಚ.ಮೀ., ಮೇಲ್ಮಟ್ಟದ ತಳ ಅಂತಸ್ತು 924.29 ಚ.ಮೀ. ವಿಸ್ತೀರ್ಣವಿರಲಿದ್ದು, ಇದರಲ್ಲಿ ವಾಹನ ನಿಲುಗಡೆ, ಸರ್ವಿಸ್‌ಗೆ ಅವಕಾಶವಿದೆ. ಉಳಿದಂತೆ 957.17 ಚ.ಮೀ. ವಿಸ್ತೀರ್ಣದ ಕೆಳ ಮಟ್ಟದ ನೆಲ ಅಂತಸ್ತುವಿನಲ್ಲಿ ನಾನ್‌ವೆಜ್ ಮಳಿಗೆಗಳು/ ಶಾಪ್‌ಗ್ಳು, 989.54 ಚ.ಮೀ. ಮೇಲ್ಮಟ್ಟದ ನೆಲ ಅಂತಸ್ತುವಿನಲ್ಲಿ ವೆಜಿಟೇಬಲ್ ಮಳಿಗೆಗಳು/ ಶಾಪ್‌ಗ್ಳಿಗೆ ಅವಕಾಶವಿದೆ. 985.97 ಚ.ಮೀ. ವಿಸ್ತೀರ್ಣದ ಮೊದಲನೇ ಅಂತಸ್ತು, 986 ಚ.ಮೀ.ನ ಎರಡನೇ ಅಂತಸ್ತು ಹಾಗೂ 987.23 ಚ.ಮೀ.ನ ಮೂರನೇ ಅಂತಸ್ತಿನಲ್ಲಿ ಆಫೀಸ್ ಕಚೇರಿಗಳು ಇರಲಿವೆ.
ಹಾಲಿ ಅಂಗಡಿಯವರಿಗೆ ತಾತ್ಕಾಲಿಕ ವ್ಯವಸ್ಥೆ
ಹೊಸದಾಗಿ ರಚಿಸಲು ಉದ್ದೇಶಿಸಿರುವ ಕದ್ರಿ ಮಾರುಕಟ್ಟೆ/ ವಾಣಿಜ್ಯ ಸಂಕೀರ್ಣ ಸ್ಥಳದಲ್ಲಿ ಹಾಲಿ ಇರುವ ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ, ಗ್ರಾಹಕ ರಿಗೆ ಸೂಕ್ತ ವ್ಯವಸ್ಥೆಯನ್ನು ಪ್ರತ್ಯೇಕ ವಾಗಿ ಕಲ್ಪಿಸಲು ಪಾಲಿಕೆ ಮುಂದಾಗಿದೆ.
ತಾತ್ಕಾಲಿಕ ವ್ಯವಸ್ಥೆಯಲ್ಲಿ 30 ಮಳಿಗೆ ಗಳಿಗೆ ಅವಕಾಶವಿದ್ದು, ಶೌಚಾಲಯ ಸಹಿತ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.
12 ತಿಂಗಳೊಳಗೆ ಈ ಕಾಮಗಾರಿ ಮುಗಿಸಬೇಕಾಗಿರುವುದರಿಂದ, ಕಾಮಗಾರಿ ಆರಂಭವಾದ ದಿನದಿಂದ 1 ವರ್ಷದವರೆಗೆ ತಾತ್ಕಾಲಿಕವಾಗಿ ಈಗಿನ ಮಾರುಕಟ್ಟೆಯ ಮುಂಬಾಗಕ್ಕೆ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಲು ಯೋಚಿಸಲಾಗಿದೆ.