ಮಹಾನಗರ: ಕಂದಕೃಷ್ಣ, ಮುದ್ದುಕೃಷ್ಣ, ಬಾಲಗೋಪಾಲ, ಕಿಶೋರ ಕೃಷ್ಣ, ತುಂಟ ಕೃಷ್ಣ, ಗೋಪಾಲ ಕೃಷ್ಣ ಹೀಗೆ ಶ್ರೀಕೃಷ್ಣನ ವಿವಿಧ ಅವತಾರಗಳ ದೃಶ್ಯಗಳಿಗೆ ರವಿವಾರ ಕದ್ರಿ ಶ್ರೀ ಮಂಜುನಾಥ ದೇಗುಲ ಸಾಕ್ಷಿಯಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಏರ್ಪಡಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ ಬೆಳಗ್ಗೆ 9ರಿಂದ ರಾತ್ರಿ 9ರ ತನಕ ಏಕಕಾಲದಲ್ಲಿ 34 ವಿಭಾಗಗಳಲ್ಲಿ ಸಂಪನ್ನಗೊಂಡಿತು. ದೇವಸ್ಥಾನದ ಆವರಣದ ವಿವಿಧ ಭಾಗಗಳಲ್ಲಿ ನಡೆದ ಶ್ರೀಕೃಷ್ಣ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಜನ ಜಮಾಯಿಸಿದ್ದರು. ಊರವರ ಜತೆ ಪರವೂರಿನವರೂ ಸೇರಿ ನೂರಾರು ಮಂದಿ ತಮ್ಮ ಮುದ್ದು ಮಕ್ಕಳಿಗೆ ಕೃಷ್ಣ ವೇಷ ಹಾಕಿ ಸಂಭ್ರಮಪಟ್ಟರು. ಕೃಷ್ಣ ಹಾಗೂ ರಾಧೆಯರ ಜತೆ ಸೆಲ್ಫಿ ತೆಗೆದು ಜನರು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಮತ್ತು ಅವರ ಪ್ರತಿಭೆ ಗುರುತಿಸಿ ಬೆಳೆಸುವ ಉದ್ದೇಶದಿಂದ ಮೂರು ದಶಕಗಳಿಂದ ನಡೆಯುತ್ತಿರುವ ಈ ಉತ್ಸವ 9 ವೇದಿಕೆಗಳಲ್ಲಿ ಏಕಕಾಲದಲ್ಲಿ ಜರಗಿತು. ಮಧ್ಯಾಹ್ನ 12ರಿಂದ ರಾತ್ರಿಯವರೆಗೆ ವಿವಿಧ ಸಾಹಿತ್ಯಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಶೇಷವಾಗಿ ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸ ಪ್ರಶ್ನೆ ಸ್ಪರ್ಧೆ, ಛಾಯಾಕೃಷ್ಣ, ಶ್ರೀಕೃಷ್ಣ ವರ್ಣವೈಭವ ಚಿತ್ರಕಲಾ ಸ್ಪರ್ಧೆ ನಡೆಯಿತು. ಈ ಬಾರಿ ವಿಶೇಷವಾಗಿ ‘ಶ್ರೀಕೃಷ್ಣ ಗಾನ ವೈಭವ’ ಎಂಬ ಹೊಸ ವಿಭಾಗವನ್ನೂ ಒಳಗೊಂಡಂತೆ ಶ್ರೀ ಕೃಷ್ಣ ವೇಷ ಸ್ಪರ್ಧೆಗಳು ಕದ್ರಿ ದೇಗುಲದ ಶ್ರೀ ಮಹಾಗಣಪತಿ ದೇವಸ್ಥಾನ, ಅಭಿಷೇಕ ಮಂದಿರ, ಕದ್ರಿಕೆರೆ ಅಶ್ವತ್ಥಕಟ್ಟೆ ಬಳಿ, ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ, ಅಭಿಷೇಕ ಮಂದಿರ 1ನೇ ಮಹಡಿ, ಕಲ್ಯಾಣ ಮಂಟಪ, ಮಂಜುಶ್ರೀ, ಅಭಿಷೇಕ ಮಂದಿರ ಮತ್ತು ಪ್ರಧಾನ ವೇದಿಕೆಯಲ್ಲಿ ಜರಗಿತು.
ಎಲ್ಲ ಸ್ಪರ್ಧಾಳುಗಳಿಗೆ ಉಡುಪಿ ಕಡೆಗೋಲು ಶ್ರೀ ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸ ಪತ್ರ ಮತ್ತು ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ಆಕರ್ಷಕ ಬಟ್ಟೆ ಚೀಲದೊಂದಿಗೆ ನೀಡಲಾಯಿತು.
ಎಲ್ಲ ವಿಭಾಗದ ವಿಜೇತರಿಗೆ ಉಡುಗೊರೆಯ ಜತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು. ಮಕ್ಕಳ ಉತ್ಸವದಲ್ಲಿ ಸ್ಪರ್ಧಿಸಿದ ಮಕ್ಕಳಿಗೆ ಬಿಸಿ ಹಾಲು, ಪೇಡಾ, ಐಸ್ ಕ್ರೀಮ್, ಚಾಕಲೆಟ್ ನೀಡಲಾಯಿತು. ಸ್ಪರ್ಧಿಸಿದ ಅಶಕ್ತ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಮತ್ತು ಸಂಘಟನೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಯಿತು.
ಮಳೆಯ ಸಿಂಚನ
ಮಧ್ಯಾಹ್ನ ಶ್ರೀಕೃಷ್ಣ ಸ್ಪರ್ಧೆ ಆರಂಭಗೊಳ್ಳುತ್ತಿದ್ದಂತೆ ಕೆಲವು ಹೊತ್ತು ಮಳೆಯ ಸಿಂಚನವಾಯಿತು. ಸುಡು ಬಿಸಿಲಿನಿಂದ ತತ್ತರಿಸಿದ ಜನರಿಗೆ ಸ್ವಲ್ಪ ಆಹ್ಲಾದಕರ ಅನು ಭವ ನೀಡಿತು. ಆ ಸಮಯದಲ್ಲಿ ಸ್ಪರ್ಧೆಯನ್ನು ಕೆಲವು ಹೊತ್ತು ಸ್ಥಗಿತಗೊಳಿಸಿ ಮತ್ತೆ ಆರಂಭಿಸಲಾಯಿತು.