Advertisement

ಕದ್ರಿ ಪಾರ್ಕ್‌ ಸಂಗೀತ ಕಾರಂಜಿ ಶೋ: ವಾರದಲ್ಲಿ ಲಕ್ಷ ರೂ. ಆದಾಯ

06:10 AM Apr 29, 2018 | |

ಮಹಾನಗರ: ತೋಟಗಾರಿಕಾ ಇಲಾಖೆಯು ಕದ್ರಿ ಪಾರ್ಕ್‌ ಪಕ್ಕದಲ್ಲಿರುವ ಜಿಂಕೆ ಪಾರ್ಕ್‌, ಸಂಗೀತ ಕಾರಂಜಿ ಹಾಗೂ ಲೇಸರ್‌ ಶೋ ವೀಕ್ಷಿಸುವುದಕ್ಕೆ ಪ್ರವೇಶ ಶುಲ್ಕ ನಿಗದಿಪಡಿಸಿ ವಾರ ಸಮೀಪಿಸುತ್ತಿದೆ. ಆದರೆ, ಒಂದು ವಾರದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ದುಡ್ಡು ಕೊಟ್ಟು ಸಂಗೀತ ಕಾರಂಜಿ-ಲೇಸರ್‌ ಶೋ ವೀಕ್ಷಣೆ ಮಾಡಿದ್ದು, ಇಲಾಖೆಗೆ ನಿರೀಕ್ಷೆಗೂ ಮೀರಿದ ಆದಾಯ ಬಂದಿದೆ. 

Advertisement

ತೋಟಗಾರಿಕಾ ಇಲಾಖೆ ಪ್ರಕಾರ ಎ. 20 ರಿಂದ 24ರ ವರೆಗೆ ಕದ್ರಿ ಸಂಗೀತ ಕಾರಂಜಿ, ಲೇಸರ್‌ ಶೋ ವೀಕ್ಷಿಸಲು 1,467 ಮಂದಿ ವಯಸ್ಕರು ಮತ್ತು 662 ಮಂದಿ ಮಕ್ಕಳು ಆಗಮಿಸಿದ್ದಾರೆ. ಅದರಂತೆಯೇ ಜಿಂಕೆ ಉದ್ಯಾನವನವನ್ನು 611 ಮಂದಿ ವಯಸ್ಕರು ಮತ್ತು 73 ಮಂದಿ ಮಕ್ಕಳು ವೀಕ್ಷಿಸಿದ್ದಾರೆ. ಒಟ್ಟಾರೆಯಾಗಿ ಐದು ದಿನದಲ್ಲಿ 2,813 ಮಂದಿಯಿಂದ 96,450 ರೂ. ಶುಲ್ಕ ಸಂಗ್ರಹವಾಗಿದೆ.
ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಇದ್ದುದರಿಂದ ಸಾಮಾನ್ಯವಾಗಿ ಹೊರ ಜಿಲ್ಲೆಯ ಪ್ರವಾಸಿಗರು ಕೂಡ ಸಂಗೀತ ಕಾರಂಜಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಕದ್ರಿ ಪಾರ್ಕ್‌ ಜಿಂಕೆ ಉದ್ಯಾನವನ, ಸಂಗೀತ ಕಾರಂಜಿ ವೀಕ್ಷಣೆಗೆ ದರ ನಿಗದಿ ಮಾಡುವ  ಸಮಯದಲ್ಲಿ ಸಾರ್ವಜನಿಕರಲ್ಲಿ ಕೆಲವು ಮಂದಿ ಅಪಸ್ವರ ಎತ್ತಿದ್ದರು. ದರ ನಿಗದಿಪಡಿಸಿದರೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರವೂ ತೋಟಗಾರಿಕೆ ಇಲಾಖೆ ಯದ್ದಾಗಿತ್ತು. ಆದರೆ ಈಗ ಮಾಮೂಲಿ ದಿನದಂತೆಯೇ ಪ್ರವಾಸಿಗರು ಆಗಮಿಸಿ ಸಂಗೀತ ಕಾರಂಜಿಯಲ್ಲಿ ನೀರಿನ ನರ್ತನದ ಜತೆಗೆ ಲೇಸರ್‌ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ.


ಹೆಚ್ಚುವರಿ ಪ್ರದರ್ಶನಕ್ಕೆ ಚಿಂತನೆ
ತೋಟಗಾರಿಕೆ ಇಲಾಖೆಯ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ಪ್ರತಿ ಕ್ರಿಯಿಸಿ ಸಂಗೀತ ಕಾರಂಜಿ ವೀಕ್ಷಿಸಲು ದಿನಂಪ್ರತಿ ಹೆಚ್ಚಿನ ಪ್ರವಾಸಿಗರು ಆಗಮಿ ಸುತ್ತಿದ್ದಾರೆ. ಈಗಾಗಲೇ ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ ಸೇರಿದಂತೆ ಕರಾವಳಿ ಸಂಸ್ಕೃತಿಯ ಬಗೆಗಿನ ಒಂದು ವಸ್ತುವಿಷಯದ ಬಗ್ಗೆ ಸಂಗೀತ ಕಾರಂಜಿ ಪ್ರದರ್ಶನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ ಎರಡರಿಂದ ಮೂರು ವಸ್ತು ವಿಷಯಗಳ ಜತೆಗೆ ಹೆಚ್ಚುವರಿ ಪ್ರದರ್ಶನದ ಚಿಂತನೆ ಕೂಡ ತೋಟಗಾರಿಕೆ ಇಲಾಖೆಯ ಮುಂದಿದ್ದು, ಚುನಾವಣೆ ಬಳಿಕ ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯದಲ್ಲೇ ಪುಟಾಣಿ ರೈಲಿಗೂ ದರ ನಿಗದಿ
ಕದ್ರಿ ಪಾರ್ಕ್‌ನಲ್ಲಿ ಸದ್ಯ ಪುಟಾಣಿ ರೈಲು “ಬಾಲಮಂಗಳ ಎಕ್ಸ್‌ಪ್ರೆಸ್‌’ ಪ್ರಾಯೋಗಿಕವಾಗಿ ಓಡುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೂ ಅವಕಾಶ ಕಲ್ಪಿಸಾಗಿದೆ. ಸಾಮಾನ್ಯವಾಗಿ ಪ್ರತೀ ದಿನ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಕದ್ರಿಪಾರ್ಕ್‌ ಸುತ್ತ ಅಂದರೆ ಸುಮಾರು 1.50 ಕಿ.ಮೀ. ರೈಲು ಸಂಚರಿಸುತ್ತದೆ. ಒಂದು ಟ್ರಿಪ್‌ನಲ್ಲಿ 60 ಮಂದಿ ಮಕ್ಕಳು ಸಂಚರಿಸುತ್ತಾರೆ.

 ಸಭೆಯಲ್ಲಿ ತೀರ್ಮಾನ
ಲೇಸರ್‌ ಶೋ ವೀಕ್ಷಣೆಗೆ ಹೆಚ್ಚಿನ ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕದ್ರಿಪಾರ್ಕ್‌ ಬಳಿಕ ಜಿಂಕೆ ಉದ್ಯಾನವನ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ಬಗ್ಗೆ ಚುನಾವಣೆಯ ಬಳಿಕ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ಸೇರಿ ತೀರ್ಮಾನ ನಡೆಸುತ್ತೇವೆ. ಸದ್ಯ ಕರಾವಳಿಗೆ ಸಂಬಂಧಪಟ್ಟಂತಹ ವಸ್ತುವಿಷಯ ಹೊಂದಿದ ಸಂಗೀತ ಕಾರಂಜಿ ಪ್ರದರ್ಶನಗೊಳ್ಳುತ್ತಿದ್ದು, ಥೀಮ್‌ ಹೆಚ್ಚಿಸುವ, ಹೆಚ್ಚುವರಿ ಶೋ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
 - ಜಾನಕಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ

ಐದು ದಿನದ ವೀಕ್ಷಣೆ
ಕಾರ್ಯ ಕ್ರಮ            ವಯಸ್ಕರು     ಮಕ್ಕಳು   ಒಟ್ಟು
ಸಂಗೀತ ಕಾರಂಜಿ/
ಲೇಸರ್‌ ಶೋ             1,467          662      2,129
ಜಿಂಕೆ ಉದ್ಯಾನವನ         611          73        684 
ಐದು ದಿನದಲ್ಲಿ ಸಂಗ್ರಹವಾದ ಒಟ್ಟು ಶುಲ್ಕ:  96,450 ರೂ.

Advertisement

– ನವೀನ್‌ ಭಟ್‌  ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next