Advertisement

ಕದ್ರಿ ಪಾರ್ಕ್‌ ಅಭಿವೃದ್ಧಿ: ನಾಳೆ ಮಹತ್ಚದ ಸಭೆ

01:26 PM Oct 10, 2022 | Team Udayavani |

ಮಹಾನಗರ: ಕದ್ರಿ ಪಾರ್ಕ್‌ ಸಮಗ್ರ ಅಭಿವೃದ್ಧಿಗೆ ತೋಟಗಾರಿಕಾ ಇಲಾಖೆ, ದ.ಕ. ಜಿಲ್ಲಾಡಳಿತ ಮತ್ತು ಮುಡಾ ಮುಂದಾಗಿದ್ದು, ಮೊದಲನೇ ಹಂತದ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ.

Advertisement

ಮುಡಾದಿಂದ ಸದ್ಯ ಕಾರಂಜಿ ಮತ್ತು ಗಂಗನಪಳ್ಳದ ಆರಂಭಿಕ ಹಂತದ ಕಾಮಗಾರಿ ಶುರುವಾಗಿದ್ದು, ಪ್ರಥಮವಾಗಿ ಕದ್ರಿ ಹಳೆ ಪಾರ್ಕ್‌ನ ಕಾರಂಜಿ ನವೀಕರಣ ನಡೆದಿದೆ. ಈ ಹಿಂದೆ ಈ ಕಾರಂಜಿ ಸುಸ್ಥಿತಿಯಲ್ಲಿ ಇರಲಿಲ್ಲ. ಅದೇ ರೀತಿ, ಮುಂದಿನ ದಿನಗಳಲ್ಲಿ ಗಂಗನಪಳ್ಳದ ಅಭಿವೃದ್ಧಿ ಕಾಮಗಾರಿಯೂ ನಡೆಯಲಿದೆ. ಪಾರ್ಕ್‌ ಒಳಗಿರುವ ಗಂಗನಪಳ್ಳ ಅಭಿವೃದ್ಧಿ ಹಲವು ವರ್ಷಗಳಿಂದ ಮರೀಚಿಕೆಯಾಗಿತ್ತು.

ಸ್ಮಾರ್ಟ್‌ಸಿಟಿ, ತೋಟಗಾರಿಕಾ ಇಲಾಖೆಯಿಂದ ಈ ಹಿಂದೆ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪವಾಗಿತ್ತೇ ವಿನಃ ಯಾವುದೇ ರೀತಿಯ ಮುಂದುವರಿದ ಕಾಮಗಾರಿ ನಡೆದಿರಲಿಲ್ಲ. ಇದೀಗ ಅಭಿವೃದ್ಧಿಯಾಗಲಿದ್ದು, ಬಳಿಕ ಅಲ್ಲಿಂದಲೇ ಪಾರ್ಕ್‌ನ ಗಿಡಗಳಿಗೆ ನೀರುಣಿಸಬಹುದು ಎಂಬ ಚಿಂತನೆ ಮುಡಾದ್ದಾಗಿದೆ.

ಸುದಿನ ವರದಿ

ಕದ್ರಿ ಪಾರ್ಕ್‌ ಅಭಿವೃದ್ಧಿ ಮರೀಚೆಕೆ ಹಿನ್ನೆಲೆಯಲ್ಲಿ “ಉದಯವಾಣಿ ಸುದಿನ’ ಕಳೆದ ಕೆಲ ದಿನಗಳ ಹಿಂದೆ “ಕದ್ರಿ ಪಾರ್ಕ್‌ ಅಭಿವೃದ್ಧಿಗೆ ಮೀನ ಮೇಷ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಬಳಿಕ ತೋಟಗಾರಿಕಾ ಇಲಾಖೆಯಿಂದ ಪಾರ್ಕ್‌ ಸ್ವಚ್ಛತಾ ಕೆಲಸ ಆರಂಭಗೊಂಡಿತ್ತು. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಅವರ ನೇತೃತ್ವದಲ್ಲಿ ಸಭೆ ನಡೆದು ಅಭಿವೃದ್ಧಿಯ ಕುರಿತು ಚರ್ಚೆ ನಡೆಸಲಾಗಿತ್ತು.

Advertisement

ನಾಳೆ ಡಿಸಿ ನೇತೃತ್ವದಲ್ಲಿ ಸಭೆ

ಕದ್ರಿ ಪಾರ್ಕ್‌ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಅ.11ರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿಯ ಕೋರ್ಟ್‌ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಒಟ್ಟು 17.53 ಎಕರೆ ಪ್ರದೇಶದಲ್ಲಿರುವ ಕದ್ರಿ ಉದ್ಯಾನವನ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಕದ್ರಿ ಉದ್ಯಾನವನ ರಸ್ತೆಯಲ್ಲಿ ನಿರ್ಮಿಸಲಾಗಿರುವ 39 ಮಳಿಗೆ ಹಾಗೂ ಪಾರ್ಕಿಂಗ್‌ ವ್ಯವಸ್ಥೆ ಒಳಗೊಂಡಂತೆ ಸಮಗ್ರ ನಿರ್ವಹಣೆಗೆ ಟೆಂಡರ್‌ ಕರೆದು ನಿರ್ವಹಿಸುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜನಪ್ರತಿನಿಧಿಗಳು, ಸಂಘ ಸಂಸ್ಥೆ ಗಳು, ವಾಣಿಜ್ಯೋದ್ಯಮ, ವ್ಯವಹಾರಸ್ಥರು ಕೂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next