Advertisement

ಕದ್ರಿ ಪಾರ್ಕ್‌: ತುಂಡಾದ ಉಯ್ಯಾಲೆ, ಮೊನಚಾದ ಜಾರುಬಂಡಿ

11:10 AM Nov 28, 2018 | |

ಕದ್ರಿ : ಮಕ್ಕಳನ್ನು ಆಟವಾಡಿಸಲು ಹೆತ್ತವರು ಸಂಜೆ ಹೊತ್ತಿನಲ್ಲಿ ಕದ್ರಿ ಪಾರ್ಕ್‌ನತ್ತ ಕರೆದೊಯ್ಯುವುದು ಸಾಮಾನ್ಯ. ಆದರೆ ಪಾರ್ಕ್‌ನಲ್ಲಿರುವ ಆಟಿಕೆಗಳಲ್ಲಿ ಕೂರಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ ಇಲ್ಲಿರುವ ಕೆಲವು ಆಟಿಕೆಗಳು ತುಂಡಾಗಿದ್ದು, ತುಕ್ಕು ಹಿಡಿದು ಮುರಿದು ಬೀಳುವ ಆತಂಕದಲ್ಲಿವೆ.

Advertisement

ಸಾಮಾನ್ಯವಾಗಿ ಮಕ್ಕಳು ಪ್ರತಿದಿನ ಆಟಕ್ಕೆಂದು ಆಗಮಿಸಿ ಖುಷಿಪಡುವ ಕದ್ರಿ ಪಾರ್ಕ್‌ನಲ್ಲಿ ಆಟಿಕೆಗಳ ಸ್ಥಿತಿಗತಿ ಹೇಗಿದೆ ಮತ್ತು ಒಟ್ಟು ಪರಿಸರ ಮಕ್ಕಳಸ್ನೇಹಿಯಾಗಿದೆಯಾ ಎಂದು ತಿಳಿದುಕೊಳ್ಳಲು ‘ಉದಯವಾಣಿ-ಸುದಿನ’ ತಂಡವು ಕದ್ರಿ ಪಾರ್ಕ್‌ಗೆ ತೆರಳಿತ್ತು. ಈ ವೇಳೆ ತುಂಡಾದ ಉಯ್ಯಾಲೆ, ತುಕ್ಕು ಹಿಡಿದಿರುವ ಹಾಗೂ ತುಂಡಾಗಿರುವ ಕಬ್ಬಿಣದ ರಾಡ್‌ಗಳು ಕಂಡು ಬಂದಿವೆ. ಆದರೆ ಈ ವಿಷಯ ತಿಳಿಯದ ಹೆತ್ತವರು ತಮ್ಮ ಮಕ್ಕಳನ್ನು ಆಟಿಕೆಗಳಲ್ಲಿ ಆಟವಾಡಿಸುತ್ತಿದ್ದರು.

ಪಾರ್ಕ್‌ನಲ್ಲಿರುವ ಹತ್ತಾರು ಉಯ್ಯಾಲೆಗಳ ಪೈಕಿ ಒಂದು ಉಯ್ನಾಲೆಯ ಕಬ್ಬಿಣದ ಚೈನ್‌ ತುಂಡಾಗಿದೆ. ದುರದೃಷ್ಟಕರ ವಿಚಾರವೆಂದರೆ, ತುಂಡಾದ ಭಾಗವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ಮೇಲಿನ ಭಾಗದ ಚೈನ್‌ಗೆ ಜೋಡಿಸಿಡಲಾಗಿದೆ. ತುಂಡಾದ ಭಾಗವು ಉಯ್ಯಾಲೆಯಲ್ಲಿ ಕುಳಿತುಕೊಳ್ಳುವ ಜಾಗಕ್ಕೆ ತಾಗಿಕೊಂಡೇ ಇರುವುದರಿಂದ ಒಮ್ಮೆಲೆ ನೋಡಿದರೆ ಗೊತ್ತೇ ಆಗುವುದಿಲ್ಲ. ಹೆತ್ತವರು ಇದನ್ನು ಗಮನಿಸದೇ, ಮಕ್ಕಳನ್ನು ಕೂರಿಸುತ್ತಾರೆ. ಅಲ್ಲದೆ, ಹೀಗೆ ಕಟ್ಟಿದ ಪ್ಲಾಸ್ಟಿಕ್‌ ತುಂಡಾಗುವ ಹಂತದಲ್ಲಿದ್ದು, ಸ್ವಲ್ಪ ಭಾರ ತಾಗಿದರೂ ಬೀಳುವ ಸಂಭವವಿದೆ. ಇದರ ಪಕ್ಕದಲ್ಲಿರುವ ಇನ್ನೊಂದು ಉಯ್ಯಾಲೆಯ ಒಂದು ಭಾಗ ಬಾಗಿದಂತಿದ್ದು, ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟಕರವಾಗಿದೆ.

ತುಂಡಾದ ಕಬ್ಬಿಣದ ರಾಡ್‌
ಆಟದ ಸ್ಥಳದಲ್ಲಿ ಹತ್ತಾರು ಉಯ್ನಾಲೆಗಳಿದ್ದು, ಒಂದು ರಾಡ್‌ನ‌ಲ್ಲಿ ನಾಲ್ಕು ಉಯ್ಯಾಲೆಗಳನ್ನು ಜೋಡಿಸಲಾಗಿದೆ. ಈ ಪೈಕಿ ಒಂದು ಉಯ್ನಾಲೆ ಸಂಪೂರ್ಣ ಕಿತ್ತು ಹೋಗಿದ್ದು, ರಾಡ್‌ ಮಾತ್ರ ಉಳಿದಿದೆ. ಆದರೆ ಇದು, ಮಕ್ಕಳಿಗೆ ಎಟುಕದ ಸ್ಥಳದಲ್ಲಿದ್ದರೂ, ತುಕ್ಕು ಹಿಡಿದುಕೊಂಡಿರುವುದರಿಂದ ಇದರ ವಿಲೇವಾರಿ ಅಗತ್ಯವಾಗಿದೆ. ಈ ಹಿಂದೆ ಬೆಂಗಳೂರಿನ ಮಹಾದೇವಪುರದಲ್ಲಿ 13 ವರ್ಷದ ಬಾಲಕಿಯೋರ್ವಳು ಸಾರ್ವಜನಿಕ ಪಾರ್ಕ್‌ನಲ್ಲಿ ಆಟವಾಡುತ್ತಿದ್ದ ಸಂದರ್ಭ ರಾಡ್‌ ತಲೆಗೆ ತಾಗಿ ಸಾವನ್ನಪ್ಪಿರುವ ಘಟನೆ ನಮ್ಮ ಕಣ್ಣ ಮುಂದಿದೆ. ಆದ್ದರಿಂದ ಮುನ್ನೆಚ್ಚರಿಕೆ ಅಗತ್ಯ.

ಚೂಪಾಗಿರುವ ಜಾರುಬಂಡಿ
ಜಾರುಬಂಡಿ ಮಕ್ಕಳ ಪ್ರಿಯ ಆಟಿಕೆಗಳ ಪೈಕಿ ಒಂದು. ಆದರೆ ಜಾರುಬಂಡಿಯಲ್ಲಿ ಕುಳಿತರೆ ಚರ್ಮವೇ ಜಾರಿ ಹೋಗುವ ಸಾಧ್ಯತೆ ಕದ್ರಿ ಪಾರ್ಕ್‌ನಲ್ಲಿದೆ. ಸಾಮಾನ್ಯವಾಗಿ ಜಾರು ಬಂಡಿಯ ಕೆಳಭಾಗವನ್ನು ಸಮ ತಟ್ಟಾಗಿ ನಿರ್ಮಿಸಲಾಗುತ್ತದೆ. ಮಕ್ಕಳು ಮೇಲಿನಿಂದ ಜಾರುತ್ತಾ ಬಂದು ಸಮತಟ್ಟಿನ ಜಾಗದಲ್ಲಿ ಕುಳಿತುಕೊಳ್ಳುವಂತಾಗಲು ಈ ಕ್ರಮ. ಆದರೆ ಇಲ್ಲಿ ಜಾರುಬಂಡಿಯ ಕೆಳಗಿನ ಭಾಗ ಚೂಪಾಗಿದ್ದು, ಚರ್ಮವೇ ಕುಯ್ದು ಹೋಗುವಂತಿದೆ. ಅಲ್ಲದೆ, ಜಾರುಬಂಡಿಯಿಂದ ಕೆಳಭಾಗದಲ್ಲಿ ಗುಂಡಿಯಾಕಾರವಿದ್ದು, ಹೊಯಿಗೆ ಹಾಕದೆ ಹಾಗೇ ಬಿಡಲಾಗಿದೆ. ಇದು ಮಕ್ಕಳಿಗೆ ಇನ್ನಷ್ಟು ಅಪಾಯ ತಂದೊಡ್ಡುತ್ತದೆ ಎನ್ನುತ್ತಾರೆ ಮಗುವನ್ನು ಆಟವಾಡಲು ಕರೆ ತಂದ ಕೋಡಿಕಲ್‌ ನಿವಾಸಿ ಸುಶ್ಮಿತಾ.

Advertisement

ಕುಳಿತುಕೊಳ್ಳಬೇಡಿ ಎಂದೆವು
‘ಸುದಿನ’ ತಂಡ ಪಾರ್ಕ್‌ನಲ್ಲಿರುವಾಗಲೇ ನಾಲ್ವರು ಹೆತ್ತವರು ತಮ್ಮ ಮಕ್ಕಳನ್ನು ಕರೆ ತಂದು ತುಂಡಾದ ಉಯ್ಯಾಲೆ, ಅವ್ಯವಸ್ಥಿತವಾಗಿರುವ ಜಾರುಬಂಡಿಯಲ್ಲಿ ಆಡಲು ಬಿಡುತ್ತಿದ್ದರು. ಆದರೆ ತುಂಡಾದ ಭಾಗ ಅವರ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ನಾವು ಎಚ್ಚರಿಸಿದ ಬಳಿಕವಷ್ಟೇ, ಅವರೂ ಅದರ ಅಪಾಯವನ್ನರಿತು ಮಕ್ಕಳನ್ನು ಅದರಲ್ಲಿ ಆಟವಾಡದಂತೆ ತಡೆಯುತ್ತಿದ್ದರು. ಹಲವು ಮಂದಿ ನಿತ್ಯ ತಮ್ಮ ಮಕ್ಕಳನ್ನು ಆಟವಾಡಿಸಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.

ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಮಕ್ಕಳ ಆಟಿಕೆಗಳಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಆಡಲು ಅವಕಾಶವೆಂದು ಸೂಚನಾ  ಫಲಕವನ್ನೂ ಹಾಕಲಾಗಿದೆ. ಆದರೆ ಮಕ್ಕಳೊಂದಿಗೆ ಬಂದವರು ಕೂಡ ಉಯ್ಯಾಲೆಯಲ್ಲಿ ಕುಳಿತು ಆಟವಾಡುತ್ತಾರೆ. ಇದರಿಂದಾಗಿ ಭಾರ ತಡೆಯಲಾಗದೆ ಉಯ್ಯಾಲೆ ತುಂಡಾಗುತ್ತಿದೆ.

ರಸ್ತೆ ಉಬ್ಬು ಅವಶ್ಯ
ಕದ್ರಿ ಪಾರ್ಕ್‌ನ ಹೊರಭಾಗದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಇಲ್ಲಿ ರಸ್ತೆ ಉಬ್ಬು ಇಲ್ಲದಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಬಿಜೈ, ನಂತೂರನ್ನು ಸಂಪರ್ಕಿಸಲು ಸನಿಹದ ಮಾರ್ಗ ಇದಾಗಿದ್ದು, ಅತಿ ವೇಗದ ಚಾಲನೆ ಇಲ್ಲಿ ಮಾಮೂಲಿ. ಪಾರ್ಕ್‌ಗೆ ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಈ ಸಂದರ್ಭ ಕೆಲವೊಮ್ಮೆ ಮಕ್ಕಳು ಆಟವಾಡುತ್ತಾ ಅಥವಾ ಹೆತ್ತವರ ಕೈಯಿಂದ ತಪ್ಪಿಸಿಕೊಂಡು ರಸ್ತೆಯಂಚಿಗೆ ಬಂದಲ್ಲಿ ಅಪಾಯವಾಗುವ ಸಂಭವವಿದೆ. ಹಾಗಾಗಿ ರಸ್ತೆ ಉಬ್ಬು ತೀರಾ ಅಗತ್ಯವಿದೆ.

 ಹೊಸತು ಅಳವಡಿಸುವ  ಯೋಜನೆ
ಪ್ರತಿ ವರ್ಷ ಇಲ್ಲಿನ ಆಟಿಕೆಗಳನ್ನು ರಿಪೇರಿ ಮಾಡಲಾಗುತ್ತದೆ. ಆದರೆ ಮಕ್ಕಳೊಂದಿಗೆ ಆಗಮಿಸುವ ಹೆತ್ತವರು ಮತ್ತು ಸಂಬಂಧಿಕರು ಕೂಡ ಉಯ್ನಾಲೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದ ಪದೇ ಪದೆ ಉಯ್ಯಾಲೆ ತುಂಡಾಗುತ್ತಿದೆ. ಇಲ್ಲಿನ ಆಟಿಕೆ ಸಾಮಗ್ರಿಗಳನ್ನು ಎಲ್ಲ ತೆಗೆದು ಹೊಸದಾಗಿ ಅಳವಡಿಸುವ ಯೋಜನೆಯಿದೆ.
– ಜಾನಕಿ, ಹಿರಿಯ ಸಹಾಯಕ
ನಿರ್ದೇಶಕಿ, ತೋಟಗಾರಿಕೆ ಇಲಾಖೆ

 ಗಮನಕ್ಕೆ ತರುವೆ
ಕದ್ರಿ ಪಾರ್ಕ್‌ನಲ್ಲಿರುವ ಆಟಿಕೆಗಳ ನಿರ್ವಹಣೆ ಪಾಲಿಕೆ ಮತ್ತು ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆಟಿಕೆಗಳು ತುಂಡಾಗಿರುವ ಬಗ್ಗೆ ತೋಟಗಾರಿಕಾ ಇಲಾಖೆಯ ಪ್ರಮುಖರಿಗೆ ಪತ್ರ ಬರೆದು ಅವರ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು.
-ಸುಂದರ ಪೂಜಾರಿ, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ 

ತುಂಡಾಗಿರುವುದು ತಿಳಿಯಿತು
ಮಕ್ಕಳ ಆಟಕ್ಕಾಗಿರುವ ಉಯ್ಯಾಲೆ ತುಂಡಾಗಿದೆ. ನಾನೂ ಇದರಲ್ಲಿ ಕುಳಿತುಕೊಳ್ಳಲು ಬಂದೆ. ಆಗ ತುಂಡಾಗಿರುವುದು ಗೊತ್ತಾಯಿತು. ಹಾಗಾಗಿ ಬೇರೆ ಉಯ್ನಾಲೆಯಲ್ಲಿ ಆಡಲು ಹೋದೆ.
 - ದಿಯಾ ಕದ್ರಿ,ಪಾರ್ಕ್‌ಗೆ ಆಡಲು ಬಂದ ಪುಟಾಣಿ

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next