ಮಂಗಳೂರು: ನಗರದ ಕದ್ರಿ ಪಾರ್ಕ್‌ನಲ್ಲಿ ಎಂಡಿಎಂಎ ಡ್ರಗ್ಸ್‌ನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಪಾವೂರು ಗ್ರಾಮ ಮಚ್ಚಂಪಾಡಿಯ ನವಾಜ್(40) ಮತ್ತು ಫರಂಗಿಪೇಟೆ ಜುಮಾದಿಗುಡ್ಡೆ ಮನೆಯ ಅಜರುದ್ದೀನ್ ಆಲಿಯಾಸ್ ಅಜರ್(38) ಬಂಧಿತ ಆರೋಪಿಗಳು.
ಆರೋಪಿಗಳಿಂದ 120 ಗ್ರಾಂ ತೂಕದ 6 ಲ.ರೂ. ಮೌಲ್ಯದ ಎಂಡಿಎಂಎ, 3 ಮೊಬೈಲ್ ಪೋನ್‌ಗಳು, ಡಿಜಿಟಲ್ ತೂಕ ಮಾಪನ, ಸುಝುಕ್ ಆಕ್ಸಿಸ್ ಸೇರಿದಂತೆ 6,83,120 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾಗಿತ್ತು.
ಆರೋಪಿಗಳ ಪೈಕಿ ನವಾಜ್ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಇನ್ನೋರ್ವ ಆರೋಪಿ ಅಜರುದ್ದೀನ್ ವಿರುದ್ದ ಈ ಹಿಂದೆ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ 2 ಕಳ್ಳತನ ಪ್ರಕರಣಗಳು ದಾಖಲಾಗಿವೆ.