ಮಂಗಳೂರು: ಡಾ| ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ಡಿ. 23ರಂದು ನಡೆಯಲಿರುವ “ಕದ್ರಿ ಸಂಗೀತ ಸೌರಭ 2023’ದ ಸಂದರ್ಭದಲ್ಲಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ “ಡಾ| ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ 2023′ ನೀಡಿ ಗೌರವಿಸಲಾಗುವುದು.
ಉರ್ವ ಸ್ಟೋರ್ನ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾರಂಭ ನಡೆಯಲಿದೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ, ಭವ್ಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ ನಡೆಯಲಿರುವ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಬೆಳ್ಳಿಯ ಫಲಕ ಹೊಂದಿರುತ್ತದೆ. ಅನಂತರ ಪಂ. ಕುಮಾರ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ವರ್ಷ ಕದ್ರಿ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಂಗೀತ ಕಲಾವಿದರಿಗೆ ಜೀವ ಹಾಗೂ ಆರೋಗ್ಯ ವಿಮೆ ಮಾಡಿಸುವುದು, 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಹಾಗೂ ನಿವೃತ್ತ ಕಲಾವಿದರಿಗೆ ಮಾಸಿಕ ಪಿಂಚಣಿ ನೀಡುವ ಹಾಗೂ ಇದರೊಂದಿಗೆ ಉತ್ತಮವಾಗಿ ಓದುತ್ತಿರುವ ಐವರು ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಶಿಕ್ಷಣ ವೆಚ್ಚವನ್ನು ಭರಿಸುವ ಯೋಜನೆ ಯನ್ನು ಸಿದ್ಧಗೊಳಿಸಲಾಗಿದೆ. ಮುಂದಿನ ವರ್ಷದಿಂದ ಜಾರಿಗೊಳಿಸ ಲಾಗುವುದು ಎಂದರು.
ಮುಂದಿನ ವರ್ಷ ಡಾ| ಕದ್ರಿ ಗೋಪಾಲನಾಥ್ ಅವರ 75ನೇ ಹುಟ್ಟುಹಬ್ಬವಾಗಿದ್ದು, ಅದರ ಅಂಗವಾಗಿ 15 ದಿನ ನಿರಂತರ ಸಂಗೀತ ಕಾರ್ಯಕ್ರಮ ನಡೆಸುವ ಉದ್ದೇಶ ಹಾಕಿಕೊಳ್ಳಲಾಗಿದೆ. ಉದಯೋನ್ಮುಖ ಸಂಗೀತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಲ್ಲದೆ ತಂದೆಯವರ ಕನಸಾಗಿರುವ ಮಂಗಳೂರನ್ನು ಸಂಗೀತದ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನೂ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಕಾಡೆಮಿಯ ಅಂಬಿಕಾ ಮೋಹನ್, ಕದ್ರಿ ರಮೇಶ್‌ನಾಥ್, ಪಮ್ಮಿ ಕೊಡಿಯಾಲ್ ಬೈಲ್, ಜಗದೀಶ್ ಉಪಸ್ಥಿತರಿದ್ದರು.