ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕದ್ರಾ ಮತ್ತು ಕೊಡಸಳ್ಳಿ ಜಲಾಶಯದಿಂದ ನೀರನ್ನು ನದಿಗೆ ಹರಿಸುವ ಸೂಚನೆಯನ್ನು ಕೆಪಿಸಿ ಮುಖ್ಯ ಎಂಜಿನಿಯರ್ ನಿಂಗಣ್ಣ ಬುಧವಾರ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.
ಅಣೆಕಟ್ಟು ತುಂಬಲು ಇನ್ನು ಮೂರು ಮೀಟರ್ ಇದ್ದರೂ ಸಹ ಸತತ ಮಳೆ ಜಲಾಶಯಗಳ ಹಿನ್ನೀರಿನಲ್ಲಿ ಬೀಳುತ್ತಿದೆ. ಕದ್ರಾ ಜಲಾಶಯ 31 ಮೀಟರ್‌ಗೆ ನೀರಿನ ಮಟ್ಟ ತಲುಪುತ್ತಿದ್ದು, 32.50 ಮೀಟರ್‌ಗೆ ಬರುತ್ತಿದ್ದಂತೆ ಕ್ರಸ್ಟಗೇಟ್ ತೆಗೆಯಲು ಕೆಪಿಸಿ ನಿರ್ಧರಿಸಿದೆ. ಜಿಲ್ಲಾಡಳಿತದ ಜೊತೆ ಸತತ ಸಂಪರ್ಕದಲ್ಲಿರುವ ಕೆಪಿಸಿ, ನದಿ ದಂಡೆಯ ಜನರು ಮನೆಗಳನ್ನು ತೊರೆಯುವುದನ್ನು ತಡೆಯಲು ಯತ್ನಿಸುತ್ತಿದೆ.
ಕೊಡಸಳ್ಳಿ ಜಲಾಶಯ 70 ಮೀಟರ್ ಎತ್ತರಕ್ಕೆ ನೀರಿನ ಮಟ್ಟ ತಲುಪುತ್ತಿದೆ. ಹಾಗಾಗಿ 72.50 ಮೀಟರ್ ಎತ್ತರಕ್ಕೆ ಜಲಾಶಯದ ಮಟ್ಟ ಬರಲು ಹೆಚ್ಚು ತಡವಾಗುವುದಿಲ್ಲ. ಸತತವಾಗಿ ಇನ್ನೆರಡು ದಿನ ಮಳೆ ಬಿದ್ದರೆ ಕೊಡಸಳ್ಳಿ ಜಲಾಶಯದ ಕ್ರಸ್ಟ್ ಗೇಟ್ ಸಹ ತೆರೆಯಲಾಗುವುದು ಎಂದು ಕೆಪಿಸಿ ಹೇಳಿದೆ.
ನದಿಯಲ್ಲಿ ಮೀನು ಹಿಡಿಯುವ ಅಥವಾ ದೋಣಿಯಲ್ಲಿ ಸಂಚರಿಸಬೇಡಿ ಎಂದು ಕೆಪಿಸಿ ಹೇಳಿದೆ. ಜನ ಜಾನುವಾರುಗಳ ಬಗ್ಗೆ ಕಾಳಜಿ ವಹಿಸಿ ಎಂದೂ ಹೇಳಿದೆ. ಈಗಾಗಲೇ ಕದ್ರಾದಿಂದ 4729 ಕ್ಯೂಸೆಕ್ ನೀರು ಹೊರಗೆ ಹರಿಯುತ್ತಿದೆ. ಒಳ ಹರಿವು 10 ಕ್ಯೂಸೆಕ್ ಗೂ ಹೆಚ್ಚಿದೆ.
ದಾಂಡೇಲಿಯಲ್ಲಿ ಅತೀಯಾದ ಮಳೆಯಾಗುತ್ತಿದ್ದು, ಕದ್ರಾ ಕೊಡಸಳ್ಳಿ ಜಲಾಶಯಗಳು ಇನ್ನೆರಡು ದಿನಗಳಲ್ಲಿ ಭರ್ತಿಯಾಗಲಿವೆ. ಕಂದಾಯ ಮತ್ತು ಪೊಲೀಸ್ ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಸಹಾಯಕ ಕಮಿಷನರ್ ಸತತವಾಗಿ ಕದ್ರಾ ಭಾಗದಲ್ಲಿ ಸಂಚರಿಸುತ್ತಿದ್ದು, ತಹಶೀಲ್ದಾರರು ಸಹ ಪರಿಸ್ಥಿತಿ ಬಗ್ಗೆ ನಿಗಾ ಇಟ್ಟಿದ್ದಾರೆ. ಜನರ ಸ್ಥಳಾಂತರ ಸನ್ನಿವೇಶ ಬಂದರೆ ಅದನ್ನು ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾದಲ್ಲಿ 94.2 ಮಿ.ಮೀ, ಭಟ್ಕಳ 52.8 ಮಿ.ಮೀ, ಹಳಿಯಾಳ 62.2 ಮಿ.ಮೀ, ಹೊನ್ನಾವರ 106.9 ಮಿ.ಮೀ, ಕಾರವಾರ 107.1 ಮಿ.ಮಿ, ಕುಮಟಾ 44.2 ಮಿ.ಮೀ, ಮುಂಡಗೋಡ 34.4 ಮಿ.ಮೀ, ಸಿದ್ದಾಪುರ 108.6 ಮಿ.ಮೀ. ಶಿರಸಿ 105.0 ಮಿ.ಮೀ, ಜೋಯಿಡಾ 88.4 ಮಿ.ಮೀ, ಯಲ್ಲಾಪುರ 74.6 ಮಿ.ಮೀ. ಮಳೆಯಾಗಿದೆ. ಇನ್ನೆರಡು ದಿನ ಭಾರೀ ಮಳೆಯ ಮುನ್ಸೂಚನೆ ಇದೆ.