Advertisement

ಕಡಬ ತಾಲೂಕಿಗೆ ಪಂಜ ಗ್ರಾಮ ಸೇರ್ಪಡೆಗೆ ಒತ್ತಾಯ

05:17 PM Dec 29, 2017 | Team Udayavani |

ಸುಬ್ರಹ್ಮಣ್ಯ : ಪಂಜ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಐವತ್ತೂಕ್ಲು, ಕೂತ್ಕುಂಜ ಕಂದಾಯ ಗ್ರಾಮಗಳನ್ನು ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಪಂಜದಲ್ಲಿ ಗುರುವಾರ ಪಕ್ಷಾತೀತವಾಗಿ ನಾಗರಿಕರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಕಡಬಕ್ಕೆ 6 ಕಿ.ಮೀ ದೂರ ಸುಳ್ಯಕ್ಕೆ 36 ಕಿ.ಮೀ.
ಪಂಜದ ಮುಖ್ಯ ಪೇಟೆಯ ಬಸ್‌ ನಿಲ್ದಾಣದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಲೋಕೇಶ್‌ ಬರ ಮೇಲು ಮಾತನಾಡಿ, ಪಂಜದ ಐವತ್ತೂಕ್ಲು ಗ್ರಾಮದಿಂದ ಕಡಬಕ್ಕೆ ಕೇವಲ 6 ಕಿ.ಮೀ. ದೂರವಿದೆ.

ಸುಳ್ಯಕ್ಕೆ 36 ಕಿ.ಮೀ. ದೂರವಾಗುತ್ತದೆ. ಆದರೂ ಪಂಜ ಗ್ರಾ. ಪಂ.ನ ಐವತ್ತೂಕ್ಲು, ಕೂತ್ಕುಂಜ ಗ್ರಾಮಗಳು ಸುಳ್ಯ ತಾಲೂಕಿನಲ್ಲಿ ಉಳಿಯುವ ನಕ್ಷೆ ಸಿದ್ಧಪಡಿಸಿದ್ದು ಸರಿಯಲ್ಲ. ಭೌಗೋಳಿಕವಾಗಿ ಪಂಜ ಹೋಬಳಿಯಾಗಿ ಗುರುತಿಸಿಕೊಂಡಿದೆ. ಹಲವು ಕಂದಾಯ ಗ್ರಾಮಗಳಿಗೆ ಅನು ಕೂಲ ಎನಿಸಿದ ಪಂಜ ಗ್ರಾಮವನ್ನು ಹೋಬಳಿಯಾಗಿ ಉಳಿ ಸಿಕೊಳ್ಳುವುದರ ಜತೆಗೆ ಕೂತ್ಕುಂಜ ಐವತ್ತೂಕ್ಲು ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆ ಮಾಡುವಂತೆ ಅವರು ಒತ್ತಾಯಿಸಿದರು.

ಅಧಿಕಾರಿಗಳ ಲೋಪದಿಂದ ಹತ್ತಿರದ ಗ್ರಾಮ ಕೈತಪ್ಪಿದೆ
ಪಂಜ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರೀ ಮಾತನಾಡಿ, ಕಡಬ ತಾಲೂಕು ರಚನೆಗಾಗಿ ಗ್ರಾಮಗಳನ್ನು ವಿಂಗಡಿಸುವ ವೇಳೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಅಧಿಕಾರಿಗಳು ಲೋಪ ಎಸಗಿದ್ದರ ಪರಿಣಾಮ ಕಡಬಕ್ಕೆ ಹತ್ತಿರದ ಗ್ರಾಮಗಳು ಸೇರ್ಪಡೆ ಪಟ್ಟಿಯಿಂದ ಕೈತಪ್ಪಿವೆ. ಆಗಿರುವ ಎಡವಟ್ಟನ್ನು ಅಧಿಕಾರಿಗಳು ತತ್‌ಕ್ಷಣ ಸರಿಪಡಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ತಾ.ಪಂ. ಸದಸ್ಯ ಅಬ್ದುಲ್‌ ಗಫ‌ೂರ್‌ ಅವರು ರಾಜಕೀಯದ ಲವಲೇಶವಿಲ್ಲದೆ ಪಕ್ಷಾತೀತ ಹೋರಾಟಕ್ಕೆ ನಾವೆಲ್ಲರೂ ಇಳಿದಿದ್ದೇವೆ. ಇದರಲ್ಲಿ ಎಲ್ಲ ಪಕ್ಷದವರು ಇದ್ದಾರೆ. ಗ್ರಾಮಗಳ ಜನತೆಯ ಹಿತ ಕಾಪಾಡಲು ನಾವೆಲ್ಲರು ಬದ್ಧರಿದ್ದೇವೆ ಎಂದರು.

ಮುಚ್ಚಿದ ಅಂಗಡಿ ಮುಂಗಟ್ಟುಗಳು
ನಾಡಕಚೇರಿಗೆ ತೆರಳಿದ ಪತ್ರಿಭಟನಕಾರರು ಐವತ್ತೂಕ್ಲು, ಕೂತ್ಕುಂಜ ಗ್ರಾಮವನ್ನು ಕಡಬಕ್ಕೆ ಸೇರ್ಪಡೆ ಗೊಳಿಸುವಂತೆ
ಒತ್ತಾಯಿಸುವ ಮನವಿಯನ್ನು ಕಂದಾಯ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಿ ಕೊಟ್ಟರು. ಕಡಬ ತಾಲೂಕಿಗೆ ಗ್ರಾಮಗಳ ಸೇರ್ಪಡೆಗೆ ಸಂಬಂದಿಸಿ ನಡೆದ ಪ್ರತಿಭಟನೆಯನ್ನು ಹಲವು ಸಂಘಟನೆಗಳು ಬೆಂಬಲಿಸಿದ್ದವು. ಪಂಜದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಅರ್ಧ ತಾಸು ಮುಚ್ಚಿದ್ದರು.

Advertisement

ಡಿ. 27ರಂದು ಪಂಜ ಗ್ರಾ.ಪಂ.ನಲ್ಲಿ ಆಡಳಿತ ಮಂಡಳಿಯ ತುರ್ತು ಸಭೆ ನಡೆದಿದೆ. ಸಭೆಯಲ್ಲಿ ಎರಡು ಗ್ರಾಮಗಳ
ಸೇರ್ಪಡೆಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂದಿಸಿ ಡಿ. 30ರಂದು ಪಂಜದಲ್ಲಿ ವಿಶೇಷ ಗ್ರಾಮ ಸಭೆ ಕೂಡ ಕರೆಯಲಾಗಿದೆ. ಹೋರಾಟ ಸಮಿತಿ ಸಂಚಾಲಕರಾದ ಮೋನಪ್ಪ ಗೌಡ ಬೊಳ್ಳಾಜೆ, ವಿಜಯ ಕುಮಾರ್‌ ಬೇರ್ಯ, ಗಂಗಾಧರ ಗುಂಡಡ್ಕ, ಲಕ್ಷ್ಮಣ ಗೌಡ ಬೊಳ್ಳಾಜೆ, ಜಗದೀಶ ಕುರಿಯ, ರವಿ ನಾಗತೀರ್ಥ ಹಾಗೂ ಊರವರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಸಂಚಾಲಕರಾದ ಲಿಗೋಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಡಿಸಿ ಕಚೇರಿಗೆ ನಿಯೋಗ
ಪ್ರತಿಭಟನೆ ದಿನ ಗುರುವಾರ ನಿಯೋಗವೊಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಗ್ರಾಮಗಳ ಸೇರ್ಪಡೆ ಕುರಿತಂತೆ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಸಂಚಾಲಕರಾದ ಸವಿತಾ ಮುಡೂರು, ಸೋಮಶೇಖರ ನೇರಳ, ಪಂಚಶ್ರೀ ಜೇಸಿಐ ಅಧ್ಯಕ್ಷ ಗುರುಪ್ರಸಾದ ತೋಟ, ದೇವಿಪ್ರಸಾದ್‌ ಜಾಕೆ, ದಯಾಪ್ರಸಾದ್‌ ಚೀಮುಳ್ಳು, ವಾಸುದೇವ ಮೇಲ್ಪಾಡಿ, ವಚನ ಕೆರೆಮೂಲೆ ಇದ್ದರು.

ನ್ಯಾಯಲಯದ ಮೊರೆ
ಗ್ರಾಮಗಳ ಸೇರ್ಪಡೆಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇಲ್ಲಿ ತನಕ ಯಾವುದೇ ಸ್ಪಂದನೆ ದೊರೆತಿಲ್ಲ. ನೋಟಿಫಿಕೇಶನ್‌ ಜಾರಿಯಾಗಿದ್ದು, ಕರಡು ಮಸೂದೆ ಅಂತಿಮವಾಗಲು ಇನ್ನು ಕೆಲ ದಿನಗಳು ಮಾತ್ರ ಬಾಕಿ ಇವೆ. ಇದರ ಒಳಗೆ ಯಾವುದೇ ಸ್ಪಂದನೆ ಬರದಿದ್ದಲ್ಲಿ ಅಧಿಸೂಚನೆಯಲ್ಲಿ ಆಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಿರುವ ಪ್ರಕಾರ ಹೈಕೋರ್ಟ್‌ ಮೆಟ್ಟಿಲೇರಲು ಹೋರಾಟ ಸಮಿತಿ ಚಿಂತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next