ಕಡಬ : ತಾಲೂಕಿನ ಹಲವೆಡೆ ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕೃಷಿ ಹಾಗೂ ಸೊತ್ತುಗಳಿಗೆ ಅಪಾರ
ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ಪುಟ್ಟಣ್ಣ ಗೌಡ ಎಂಬವರ ಮನೆಯ ಛಾವಣಿ ಗಾಳಿಗೆ ಕಿತ್ತು ಹೋಗಿದ್ದು, ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸುಂಕದಕಟ್ಟೆಯ ಎಸ್. ಅಬ್ದುಲ್ ರಹಿಮಾನ್ ಮೂಜೂರು, ಅಬ್ದುಲ್ ಜಲೀಲ್, ಎಸ್.ಆದಂ, ಆದಂ ಹಾಜಿ, ಸೌದಾ ಎಂಬವರ ಮನೆಗಳಿಗೆ ಹಾನಿಯಾಗಿದೆ. ಸುಂಕದಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾವಣಿ ಭಾಗಶಃ ಹಾನಿಯಾಗಿದ್ದು, ಗೋಡೆ ಬಿರುಕು ಬಿಟ್ಟಿದೆ. ಕಲ್ಲಾಜೆ ಹಾಗೂ ನೆಟ್ಟಣ ಪರಿಸರದಲ್ಲಿ ಹಲವು ಭಾರೀ ಗಾತ್ರದ ಮರಗಳು ವಿದ್ಯುತ್ ಲೈನ್‌ಗಳ ಮೇಲೆರಗಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪರಿಣಾಮ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಕಡಬ ಸಮೀಪದ ಕೇವಳ ಎಂಬಲ್ಲಿ ವಿಶ್ವನಾಥ ಗೌಡ ಎಂಬವರ ಮನೆಯ ಮೇಲೆ ಪಕ್ಕದ ಭಾರೀ ಗಾತ್ರದ ಮಾವಿನ
ಮರವೊಂದು ಉರುಳಿ ಬಿದ್ದು ಮನೆಯ ಛಾವಣಿ ಹಾನಿಯಾಗಿದೆ. ಮಾತ್ರವಲ್ಲದೆ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಅಟೋರಿಕ್ಷಾ ಹಾಗೂ ಬೈಕ್ ಸಂಪೂರ್ಣ ಜಖಂಗೊಂಡಿವೆ. ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ವಿಶ್ವನಾಥ ಗೌಡರಿಗೆ 1 ಲಕ್ಷ ರೂ. ನಷ್ಟ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.