Advertisement

ಕಡಂಬಳ್ಳಿ ಗುಡ್ಡದಲ್ಲಿ ಮತ್ತೆ ಬೆಂಕಿ; ನಿಯಂತ್ರಣಕ್ಕೆ ಸಾಹಸ

10:45 PM Mar 04, 2023 | Team Udayavani |

ಬೆಳ್ತಂಗಡಿ: ಮುಂಡಾಜೆಯ ಕಡಂಬಳ್ಳಿಯ ಗುಡ್ಡದಲ್ಲಿ ಮತ್ತೆ ಬೆಂಕಿ ಹರಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Advertisement

ಮಧ್ಯಾಹ್ನದ ವೇಳೆ ವಿ.ಜಿ.ಪಟವರ್ಧನ್‌ ಅವರ ರಬ್ಬರ್‌ ತೋಟದ ಸಮೀಪ ಇರುವ ಗುಡ್ಡಕ್ಕೆ ವಿದ್ಯುತ್‌ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಬೆಂಕಿ ನಿರ್ಮಾಣವಾಗಿ ಪರಿಸರದಲ್ಲಿ ವ್ಯಾಪಿಸಿ ರಬ್ಬರ್‌ ತೋಟಕ್ಕೂ ನುಗ್ಗಿತ್ತು. ಸ್ಥಳೀಯರ ನೆರವಿನಿಂದ ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಳ್ಳಲಾಯಿತು. ಇದರಿಂದ ಪರಿಸರದಲ್ಲಿದ್ದ ಮನೆಗಳಿಗೂ ಯಾವುದೇ ಹಾನಿಯಾಗಿಲ್ಲ. ಅಗ್ನಿಶಾಮಕ ದಳದ ವಾಹನ ಇತರೆಡೆಗೆ ತೆರಳಿದ್ದ ಕಾರಣ ಬೆಂಕಿ ಅನಾಹುತ ಉಂಟಾದ ಮೂರು ಗಂಟೆಗಳ ಬಳಿಕ ಆಗಮಿಸಿ ಸುತ್ತಲೂ ನೀರನ್ನು ಹಿಡಿದು ಸಂಜೆ 6ರ ಸುಮಾರಿಗೆ ಹಿಂದಿರುಗಿತು.

ಗುಡ್ಡದ ಇನ್ನೊಂದು ಭಾಗದಲ್ಲಿದ್ದ ಬೆಂಕಿ ಗಮನಕ್ಕೆ ಬರದೆ ಸಂಜೆ 7ರ ಬಳಿಕ ವ್ಯಾಪಿಸಿ ಗುಡ್ಡ ಮತ್ತೆ ಹೊತ್ತಿ ಉರಿಯಲಾರಂಭಿಸಿತು. ಈ ಸಮಯ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ಅದು ಇನ್ನೊಂದು ಸ್ಥಳಕ್ಕೆ ತೆರಳಿರುವ ಕುರಿತು ಮಾಹಿತಿ ಸಿಕ್ಕಿತು. ಮತ್ತೆ ಸಹಕರಿಸಿದ ಸ್ಥಳೀಯರು ಸುಮಾರು 3 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಅಗತ್ಯ ಸಮಯಕ್ಕೆ ಸಿಗದ ಅಗ್ನಿಶಾಮಕ ವಾಹನದ ಸೇವೆ, ಮುಂದೆ ಬೆಂಕಿ ಪ್ರಕರಣ ಉಂಟಾಗದಂತೆ ಪರಿವರ್ತಕ ಹಾಗೂ ಗುಡ್ಡದ ಸುತ್ತ ಹಿಟಾಚಿ ಮೂಲಕ ಬೆಂಕಿ ನಿಯಂತ್ರಣ ರೇಖೆಯನ್ನು ಶುಕ್ರವಾರ ರಾತ್ರಿಯೇ ಕೃಷಿ ತೋಟದ ಮಾಲಕರು ನಿರ್ಮಿಸಿದ್ದಾರೆ. ಮುನ್ನೆಚ್ಚರಿಕೆ ಕೈಗೊಂಡರೂ ಕಿಡಿ ಕಾರುವ ಇಲ್ಲಿನ ವಿದ್ಯುತ್‌ ಪರಿವರ್ತಕದಿಂದ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next