ವಿಜಯಪುರ: ವಿದ್ಯಾರ್ಥಿ ವಸತಿ ನಿಲಯಗಳಿಗೆ ಮೂಲ ಸೌಕರ್ಯ, ಪಿಜಿಸಿಎಲ್ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ| ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಶುಕ್ರವಾರ ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಸಂಘಟನೆ ಕಾರ್ಯಕರ್ತರು ಡಿಸಿ ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, ದಲಿತರ ಶ್ರೇಯೋಭಿವೃದ್ಧಿ ಇಂದಿಗೂ ಸಾಧ್ಯವಾಗಿಲ್ಲ. ಕೇವಲ ಆಳುವ ಸರ್ಕಾರಗಳು ದಲಿತರ ಶ್ರೇಯೋಭಿವೃದ್ಧಿಗೆ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ತಜ್ಞರಲ್ಲದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕಗಳನ್ನು ರದ್ದುಗೊಳಿಸಿ ಹಿಂದಿನ ಬರಗೂರ ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪರಿಷ್ಕರಣೆ ಗೊಂಡಿರುವ ಪುಸ್ತಕಗಳನ್ನು ಶಾಲೆಗಳಿಗೆ ಒದಗಿಸಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಕಾಯ್ದಿರಿಸಿರುವ ಎಸ್‌ಸಿ, ಎಸ್‌ಟಿ-ಟಿಎಸ್‌ಪಿ ಹಣದ ದುರುಪಯೋಗ ತಡೆಗಟ್ಟಬೇಕು. ಕಾಯ್ದೆಯಲ್ಲಿರುವ ದಲಿತ ವಿರೋಧಿ ಸೆಕ್ಷನ್ 7 (ಡಿ) ರದ್ದಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ತಡೆ ಹಿಡಿದಿರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ನ್ಯಾ| ನಾಗಮೋಹನ ದಾಸ ನೀಡಿರುವ ವರದಿಯಂತೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಪರಿಶಿಷ್ಟ ಜಾತಿ ವರ್ಗದವರ ಮೇಲಿನ ನಿರಂತರ ದೌರ್ಜನ್ಯ ಕೊಲೆ ಅತ್ಯಾಚಾರ ಪ್ರಕರಣ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿದೆ. ಕಾರಣ ನಿಷ್ಕಾಳಜಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹೊರ ಗುತ್ತಿಗೆ ಹಾಗೂ ದಿನಗೂಲಿ ಪೌರ ಕಾರ್ಮಿಕರ ಸೇವೆಯನ್ನು ಕೂಡಲೇ ಕಾಯಂ ಮಾಡಬೇಕು. ವಸತಿ ಹೀನ ಬಡವರಿಗೆ ಹಾಗೂ ದಲಿತ ವರ್ಗದವರಿಗೆ ಉಚಿತ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಶಂಕರ ಚಲವಾದಿ, ಯಲ್ಲಪ್ಪ ಕಾಂಬಳೆ, ಹುಚ್ಚಪ್ಪ ಲೊಕುರ, ಚೇತನ ತೊರವಿ, ಸಂಗಪ್ಪ ಪಡಗಾರ, ಸೋಮು ರಣದೇವಿ, ಪರಶುರಾಮ ಚಲವಾದಿ, ವಿಠ್ಠಲ ಕಡೆಮನಿ, ಮಲ್ಲು ಮಡ್ಡಿಮನಿ, ಸುನೀತಾ ಒಗ್ಗರ, ಸುನಂದಾ ದೊಡ್ಡಮನಿ, ನಕುಶಾ ಕಾಂಬಳೆ, ಚಂದಪ್ಪ ಹರಿಜನ, ಭಾಸ್ಕರ್ ಬೋರಗಿ, ವಿಜು ಹಿಟ್ಟಿನಹಳ್ಳಿ, ಮುತ್ತಪ್ಪ ಹೊಸಮನಿ, ಜ್ಯೋತಿ ತೊರವಿ, ಮರೆಪ್ಪ ಶಾಹಿಪುರ ಇತರರು ಇದ್ದರು.