Advertisement

ಕಡಲ ತೀರದ ಭಾರ್ಗವ ಚಿತ್ರ ವಿಮರ್ಶೆ: ಕಡಲ ತೀರದ ಭಾವಯಾನ

12:51 PM Mar 04, 2023 | Team Udayavani |

ಮನುಷ್ಯನ ಮನಸ್ಸು ಕಡಲಿನಂತೆ. ಅದರ ಆಳ-ಅಗಲ ತಿಳಿದವರಿಗಷ್ಟೇ ಗೊತ್ತು. ಅದರೊಳಗೆ ಏನಿದೆ, ಏನಿಲ್ಲ ಎಂಬುದನ್ನು ಬಲ್ಲವರಾರು? ಆದರೆ ಮನಸ್ಸಿನಲ್ಲಿ ಏನಿರಬಹುದು ಎಂದು ಹುಡುಕುತ್ತಾ ಅದರಾಳಕ್ಕೆ ಇಳಿದರೆ, ಒಂದಷ್ಟು ನಿಗೂಢಗಳು, ಕೌತುಕ, ವಿಸ್ಮಯ, ಅಚ್ಚರಿ ಎಲ್ಲವೂ ಎದುರಾಗುವುದು ಖಚಿತ. ನೋಡುಗರನ್ನು “ಕಡಲ ತೀರದ’ಲ್ಲಿ ಕೂರಿಸಿ, ಅಂಥ ಒಂದಷ್ಟು ಅಚ್ಚರಿಗಳನ್ನು ತೆರೆಮೇಲೆ ತೆರೆದಿಡುವ ಸಿನಿಮಾ “ಕಡಲ ತೀರದ ಭಾರ್ಗವ’

Advertisement

ಕಥಾನಾಯಕ ಭರತ್‌ ಮತ್ತು ಭಾರ್ಗವ ಇಬ್ಬರೂ ಬಾಲ್ಯದಿಂದಲೂ “ಕಡಲ ತೀರದ’ ಸ್ನೇಹಿತರು. ವಿಶಾಲವಾದ ಕಡಲ ತೀರದಿಂದ ಶುರುವಾದ, ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಇಬ್ಬರ ಸ್ನೇಹದ ನಡುವೆ ಭವಿಷ್ಯದಲ್ಲಿ ಇಂಪನಾ ಎಂಬ ಮತ್ಸ್ಯಕನ್ಯೆಯೊಬ್ಬಳು ಪ್ರವೇಶವಾಗುತ್ತಾಳೆ. ಮುಂದೆ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

ಸಿನಿಮಾದಲ್ಲಿ ಮನುಷ್ಯನ ಮನಸ್ಸಿನ ತುಮುಲ, ತಲ್ಲಣಗಳನ್ನು ಪಾತ್ರಗಳ ಮೂಲಕ, ಸೈಕಾಲಜಿಕಲ್‌ ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ತಂದಿರುವುದು ನಿರ್ದೇಶಕರ ಹೆಗ್ಗಳಿಕೆ. ಮೂರು ಪ್ರಮುಖ ಪಾತ್ರಗಳನ್ನು ಇಟ್ಟುಕೊಂಡು ಅದರ ಸುತ್ತ ಇಡೀ ಸಿನಿಮಾದ ಕಥೆಯನ್ನು ತೆರೆದಿಡಲಾಗಿದ್ದು, ಅನಿರೀಕ್ಷಿತ ತಿರುವುಗಳು ನೋಡುಗರಿಗೆ ಅಲ್ಲಲ್ಲಿ ಥ್ರಿಲ್ಲಿಂಗ್‌ ಅನುಭವ ನೀಡುವಂತಿದೆ. ಚಿತ್ರಕಥೆ, ನಿರೂಪಣೆಗೆ ಇನ್ನಷ್ಟು ವೇಗ ಸಿಕ್ಕಿದ್ದರೆ ಭಾರ್ಗವ ಮತ್ತು ಸಂಗಡಿಗರು ಕಡಲ ತೀರದಲ್ಲಿ ಇನ್ನಷ್ಟು ಬೇಗ ಪ್ರಯಾಣ ಮುಗಿಸುವ ಸಾಧ್ಯತೆಗಳಿದ್ದವು.

ನವ ನಟರಾದ ಭರತ್‌, ವರುಣ್‌, ಶ್ರುತಿ ಪ್ರಕಾಶ್‌ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಇನ್ನು ತಾಂತ್ರಿಕವಾಗಿ ಛಾಯಾಗ್ರಹಣ, ಸಂಕಲನ, ಕಲರಿಂಗ್‌, ಹಿನ್ನೆಲೆ ಸಂಗೀತ ಸಿನಿಮಾದ ಇನ್ನಿತರ ಹೈಲೈಟ್ಸ್‌ ಎನ್ನಬಹುದು.

 ಜಿಎಸ್‌ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next