Advertisement

ಕಡಬ ತಾಲೂಕಿಗೆ ದ.ಕ.ಜಿಲ್ಲೆಯಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆ

09:42 PM Nov 12, 2020 | mahesh |

ಕಡಬ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ 2020-21ನೇ ಸಾಲಿನಲ್ಲಿ ಅತಿ ಹೆಚ್ಚು ಮಾನವ ದಿನಗಳ ಬಳಕೆ ಮತ್ತು ಅನುದಾನ ವಿನಿಯೋಗದಲ್ಲಿ ಕಡಬ ತಾಲೂಕು ಶೇ. 100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿ ದ.ಕ. ಜಿಲ್ಲೆ ಯಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆಯನ್ನು ಪಡೆದಿದೆ. 21 ಗ್ರಾ.ಪಂ.ಗಳನ್ನು ಹೊಂದಿರುವ ಕಡಬ ತಾಲೂಕು ಆರ್ಥಿಕ ವರ್ಷಕ್ಕೆ ಒಟ್ಟು 1,89,609 ಮಾನವ ದಿನಗಳ ಗುರಿಯನ್ನು ಹೊಂದಿದ್ದು, ಈಗಾಗಲೇ 1,42,050 ರಷ್ಟನ್ನು ಅಕ್ಟೋಬರ್‌ ಮಾಸದಲ್ಲೇ ಪೂರ್ಣ ಗೊಳಿಸಿ ಶೇ. 106 ಪ್ರಗತಿ ಪೂರೈಸಿದೆ.

Advertisement

ಗುರಿ ಮೀರಿದ ಸಾಧನೆ
ತಾಲೂಕಿನ 13 ಗ್ರಾ.ಪಂ.ಗಳು (ಶಿರಾಡಿ, ಬೆಳಂದೂರು, ಸವಣೂರು, ಗೋಳಿತೊಟ್ಟು, ಸುಬ್ರಹ್ಮಣ್ಯ, ಮರ್ದಾಳ, ಕುಟ್ರಾಪಾಡಿ, ಕೊçಲ, ಕೊಂಬಾರು, ಐತ್ತೂರು, ಬಳ್ಪ, ಆಲಂಕಾರು, ಪೆರಾಬೆ) ಗುರಿ ಮೀರಿದ ಸಾಧನೆಗೈದಿವೆ. ಶಿರಾಡಿ ಗ್ರಾ.ಪಂ.ಗೆ 9,146 ಮಾನವ ದಿನ ನಿಗದಿ ಯಾಗಿದ್ದು, ಅಲ್ಲಿ 13,061 ಮಾನವ ದಿನ ಬಳಸಿ ಪ್ರಗತಿ ಸಾಧಿಸಿದೆ. ಬೆಳಂದೂರು ಗ್ರಾ.ಪಂ.ಗೆ 8,799 ಮಾನವ ದಿನ ನೀಡಿದ್ದು, ಅಲ್ಲಿ 11,606 ಮಾನವ ದಿನ ಗಳನ್ನು ವಿನಿಯೋಗಿಸಲಾಗಿದೆ. ಸವಣೂರು ಗ್ರಾ.ಪಂ.ಗೆ 9,104 ಮಾನವ ದಿನ ಬಳಕೆಯ ಗುರಿ ನೀಡಿದ್ದು, ಅದರಲ್ಲಿ 9,891 ದಿನಗಳನ್ನು ವಿನಿಯೋಗಿಸಲಾಗಿದೆ.ಉಳಿದ 8 ಗ್ರಾ.ಪಂ.ಗಳು ಶೇ. 65ರಿಂದ 90 ರಷ್ಟು ಪ್ರಗತಿ ದಾಖಲಿಸಿವೆ. 2020-21ನೇ ಸಾಲಿನಲ್ಲಿ ಕಡಬ ತಾ.ಪಂ.ಗೆ ನರೇಗಾ ಯೋಜನೆಯಡಿ ಸಾಮಗ್ರಿ ವೆಚ್ಚ ಹೊರತು ಪಡಿಸಿ 1,89,609 ಮಾನವ ದಿನಗಳಿಗೆ 5.21 ಕೋಟಿ ರೂಪಾಯಿ ವಾರ್ಷಿಕ ಗುರಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ 1,42,050 ಮಾನವ ದಿನ ವಿನಿಯೋಗಿಸಿ 3.9 ಕೋಟಿ ರೂ. ಅಕ್ಟೋಬರ್‌ ತಿಂಗಳಲ್ಲೇ ಬಳಕೆ ಮಾಡಲಾಗಿದೆ.

ಹಲವು ಕಾಮಗಾರಿಗಳಿಗೆ ವಿನಿಯೋಗ
ಯೋಜನೆಯಡಿ ಸುಮಾರು 41ವಿಧದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು , ಆ ಪೈಕಿ 59 ಬಾವಿ ರಚನೆ, 550 ತೋಟಗಾರಿಕೆ ಅಭಿವೃದ್ಧಿ, 159 ದನದ ಹಟ್ಟಿ ನಿರ್ಮಾಣ, 13 ವಸತಿ ನಿರ್ಮಾಣ, 113 ಇಂಗು ಗುಂಡಿ ನಿರ್ಮಾಣ ಕಾಮಗಾರಿಗಳು ನಡೆದಿವೆ. ಉಳಿದಂತೆ ಕೋಳಿ/ಹಂದಿ ಸಾಕಣೆ ಕೇಂದ್ರ, ಕಾಲು ಸಂಕ ನಿರ್ಮಾಣ, ಕೊಳವೆಬಾವಿ ಮರುಪೂರಣ ಘಟಕ, ಕೃಷಿ ಹೊಂಡ ನಿರ್ಮಾಣ, ಶೌಚಾಲಯ ನಿರ್ಮಾಣ, ಬಚ್ಚಲು ಗುಂಡಿ ನಿರ್ಮಾಣ, ಕಾಂಕ್ರೀಟ್‌ರಸ್ತೆ, ಶ್ಮಶಾನ ಅಭಿವೃದ್ಧಿ, ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಜಲ ಸಂರಕ್ಷಣೆಗೆ ಆದ್ಯತೆ
ಯೋಜನೆಯಡಿ ಜಲ ಸಂರಕ್ಷಣೆ ಕಾಮ ಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇಂಗು ಗುಂಡಿ ನಿರ್ಮಾಣ, ತೆರೆದ ಬಾವಿ ರಚನೆ, ತೋಡಿನ ಹೂಳೆತ್ತುವ ಕಾರ್ಯ, ಜಲ ಮರು ಪೂರಣ ಘಟಕ, ಮಳೆ ನೀರುಕೊಯ್ಲು, ಕೃಷಿ ಹೊಂಡ ನಿರ್ಮಾಣ ಹೀಗೆ ಹತ್ತು ಹಲವು ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ನೀರನ್ನು ಸಂರಕ್ಷಿಸಲಾಗುತ್ತಿದೆ.

ದ.ಕ. ಜಿಪಂ.ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಮತ್ತು ಪುತ್ತೂರು ತಾ.ಪಂ. ಕಾರ್ಯಾನಿರ್ವಹಣಾಧಿಕಾರಿ ಅವರ ಮಾರ್ಗ ದರ್ಶನದಲ್ಲಿ ನರೇಗಾ ಯೋಜ ನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಗುರಿ ಸಾಧನೆಗೆ ಶ್ರಮಿಸಿದ ಗ್ರಾ.ಪಂ. ಆಡಳಿತಾಧಿಕಾರಿಗಳು, ಅಭಿ ವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ಡಾಟಾ ಎಂಟ್ರಿ ಸಿಬಂದಿಯ ಶ್ರಮದ ಜತೆಗೆ ಕ್ಲಪ್ತ ಸಮಯಕ್ಕೆ ನರೇಗಾ ಯೋಜನೆಯ ಅಂದಾಜು ಪಟ್ಟಿ ಹಾಗೂ ಮೌಲ್ಯಮಾಪನವನ್ನು ಮಾಡಿದ ನರೇಗಾ ಎಂಜಿನಿಯರ್‌ಗಳು, ಯೋಜನೆಯ ಮಾಹಿತಿಯನ್ನು ತಲುಪಿಸಿದ ನರೇಗಾ ಸಿಬಂದಿಯ ಸಂಘಟಿತ ಶ್ರಮದಿಂದ ಈ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

Advertisement

ಬಡತನ ನಿರ್ಮೂಲನೆಗೆ ಒತ್ತು
ಕೊರೊನಾ ಸಂಕಷ್ಟದ ಸಮಯದಲ್ಲಿ ತಾಲೂಕಿನಾದ್ಯಂತ ಜನರ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವ ಸಲುವಾಗಿ ನರೇಗಾ ಯೋಜನೆಯಲ್ಲಿ ಜಲ ಸಂರಕ್ಷಣ ಅಭಿಯಾನ ಹಮ್ಮಿಕೊಂಡು ಇಂಗು ಗುಂಡಿ ನಿರ್ಮಿಸುವ ಕಾರ್ಯ ನಡೆದಿದೆ.ಅದರಿಂದ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ.ಜತೆಗೆ ರೈತರ ಆರ್ಥಿಕ ಸಂಪನ್ಮೂಲಕ್ಕೆ ಪೂರಕವಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಬಡತನ ನಿರ್ಮೂಲನೆಗೆ ಒತ್ತು ನೀಡಲಾಗಿದೆ.
-ಚೆನ್ನಪ್ಪ ಗೌಡ ಕಜೆಮೂಲೆ, ಸಹಾಯಕ ನಿರ್ದೇಶಕರು, ಗ್ರಾಮೀಣ ಉದ್ಯೋಗ, ಕಡಬ ತಾ.ಪಂ.

ಶ್ರಮ ಶ್ಲಾಘನೀಯ
ತಾಲೂಕಿನ ಹೆಚ್ಚಿನ ಗ್ರಾ.ಪಂ.ಗಳಲ್ಲಿ ಅರ್ಹ ಫಲಾನುಭವಿಗಳು ನರೇಗಾ ಯೋಜನೆಯ ಮೂಲಕ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಯೋಜನೆಯ ಪೂರ್ಣ ಫಲವನ್ನು ಪಡೆದುಕೊಂಡಿದ್ದಾರೆ. ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸಹಕರಿಸಿದ ತಾಲೂಕು ಹಾಗೂ ಎಲ್ಲ ಗ್ರಾ.ಪಂ.ಅಧಿಕಾರಿಗಳು ಮತ್ತು ಸಿಬಂದಿ ಶ್ರಮ ಶ್ಲಾಘನೀಯ.
-ನವೀನ್‌ ಕುಮಾರ್‌ ಭಂಡಾರಿ ಎಚ್‌., ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next