Advertisement

ತ್ರಿಶಂಕು ಸ್ಥಿತಿಯಲ್ಲಿ ಕಡಬ ತಾಲೂಕು

05:48 AM Dec 30, 2018 | |

ಕಡಬ : ನೂತನ ಕಡಬ ತಾಲೂಕನ್ನು ಲೋಕಾರ್ಪಣೆಗೊಳಿಸಲು ದಿನ ನಿಗದಿಪಡಿಸಿದ್ದರೂ ಪದೇ ಪದೇ ಎದುರಾದ ವಿಘ್ನಗಳಿಂದಾಗಿ ಅಧಿಕೃತವಾಗಿ ಉದ್ಘಾಟನೆಗೊಳ್ಳದೆ ಕಾರ್ಯಕಲಾಪಗಳು ಅನುಷ್ಠಾನಗೊಳ್ಳದೆ ತ್ರಿಶಂಕು ಸ್ಥಿತಿಯಲ್ಲಿದೆ. ಉದ್ಘಾಟನ ಸಮಾರಂಭ ರದ್ದಾಗುತ್ತಿರುವುದರಿಂದಾಗಿ ಸ್ವತಂತ್ರ ತಾಲೂಕಿನ ಕಾರ್ಯಕಲಾಪಗಳು ಅನುಷ್ಠಾನಗೊಳ್ಳುವುದು ಮತ್ತಷ್ಟು ವಿಳಂಬವಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ ಹಾಗೂ ಕಾಪು ನೂತನ ತಾಲೂಕುಗಳು ಉದ್ಘಾಟನೆಯಾಗಿ ವರ್ಷವೇ ಕಳೆದಿದೆ. ಆದರೆ ಕಡಬ ತಾಲೂಕು ಉದ್ಘಾಟನೆಗೆ ಮಾತ್ರ ಸೂಕ್ತ ಮುಹೂರ್ತ ಕೂಡಿಬರಲೇ ಇಲ್ಲ. ಕಡಬ ತಾಲೂಕನ್ನು ಅಧಿಕೃತವಾಗಿ ಶೀಘ್ರ ಉದ್ಘಾಟಿಸುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಮನಸ್ಸಿನಲ್ಲಿರುವ ಅನಿಶ್ಚಿತತೆಯನ್ನು ಹೋಗಲಾಡಿಸಬೇಕಿದೆ.

ಜನವರಿಯಲ್ಲಿ ಉದ್ಘಾಟನೆ?
ಜನವರಿ ತಿಂಗಳಲ್ಲಿ ಕಡಬ ತಾ| ಉದ್ಘಾಟನೆಯ ದಿನ ನಿಗದಿಪಡಿಸಲು ಸಿದ್ಧತೆಗಳು ನಡೆಯುತ್ತಿವೆ. ಜ. 5 ಅಥವಾ 19ರಂದು ಕಂದಾಯ ಸಚಿವರು ಆಗಮಿಸಿ ತಾಲೂಕು ಉದ್ಘಾಟನೆ ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನ. 25ರಂದು ತಾಲೂಕು ಉದ್ಘಾಟನೆಗೆ ಎಲ್ಲ ರೀತಿಯ ಸಿದ್ಧತೆಗಳು ನಡೆದಿದ್ದವು. ತಾಲೂಕು ಉದ್ಘಾಟನೆಗಾಗಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಹಿಂದಿನ ದಿನವೇ ಮಂಗಳೂರಿಗೆ ಆಗಮಿಸಿದ್ದರು. ಖ್ಯಾತ ಚಲನಚಿತ್ರ ನಟ, ಮಾಜಿ ಸಚಿವ ಅಂಬರೀಶ್‌ ಅವರ ನಿಧನದ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಕಡಬ ತಾಲೂಕು ಉದ್ಘಾಟನ ಸಮಾರಂಭ ರದ್ದಾಗಿತ್ತು.

ತಾಲೂಕು ಉದ್ಘಾಟನೆಯ ಸೂಚನೆಗಳು ಕಂಡುಬರುತ್ತಿವೆ. ಈಗಾಗಲೇ 4 ಬಾರಿ ತಾಲೂಕು ಉದ್ಘಾಟನೆಗೆ ದಿನ ನಿಗದಿಯಾಗಿದ್ದರೂ ಉದ್ಘಾಟನೆಯ ಭಾಗ್ಯ ಕೈಗೂಡಿಲ್ಲ. ಈ ಬಾರಿಯಾದರೂ ಯಾವುದೇ ವಿಘ್ನಗಳು ಎದುರಾಗದೆ ಕಡಬದ ಜನರ ಹಲವು ದಶಕಗಳ ಕನಸಾಗಿರುವ ಕಡಬ ತಾಲೂಕಿನ ಉದ್ಘಾಟನೆ ವಿಧ್ಯುಕ್ತವಾಗಿ ನೆರವೇರಲಿ ಎನ್ನುವುದು ಎಲ್ಲರ ಆಶಯ.

ಜನರ ಕಾರ್ಯಕ್ರಮವಾಗಲಿ
ನೂತನ ತಾಲೂಕಿನ ಬೇಡಿಕೆಯನ್ನು ಮುಂದಿರಿಸಿಕೊಂಡು ಸುಮಾರು 6 ದಶಕಗಳ ಹೋರಾಟ ನಡೆದಿತ್ತು. ಸುದೀರ್ಘ‌ ಹೋರಾಟದ ಫಲವಾಗಿ ನೂತನ ತಾಲೂಕು ಅಸ್ತಿತ್ವಕ್ಕೆ ಬರುತ್ತಿದೆ. ಜನರ ಕಾರ್ಯಕ್ರಮವಾಗಿ ತಾಲೂಕು ಉದ್ಘಾಟನ ಕಾರ್ಯಕ್ರಮವಾಗಬೇಕಿದೆ. ಈ ಸಂಭ್ರಮದಲ್ಲಿ ಜನರೂ ಕೂಡ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಊರಿನ ಹಾಗೂ ನೂತನ ತಾಲೂಕಿನ ವ್ಯಾಪ್ತಿಯ ಜನರನ್ನು ಹಾಗೂ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವ ಅಗತ್ಯವಿದೆ. ಎನ್ನುವುದು ಎಲ್ಲರ ಅಭಿಪ್ರಾಯ.

Advertisement

ಕಾಯುತ್ತಿವೆ ಕಚೇರಿಗಳು
ಕಂದಾಯ ಇಲಾಖೆ, ಭೂಮಾಪನ, ಆಹಾರೆ, ಉಪ ನೋಂದಣಿ ಕಚೇರಿ, ಪತ್ರಾಂಕಿತ ಉಪ ಖಜಾನೆ, ಕಾನೂನು ಮಾಪನಶಾಸ್ತ್ರ, ತಾಲೂಕು ಪಂಚಾಯತ್‌, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಆರೋಗ್ಯ, ಶಿಕ್ಷಣ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಲೋಕೋಪಯೋಗಿ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌, ಅಬಕಾರಿ, ವಾಣಿಜ್ಯ ತೆರಿಗೆ, ಗ್ರಂಥಾಲಯ ಹಾಗೂ ಅಗ್ನಿಶಾಮಕ ದಳ ಹೀಗೆ ತಾಲೂಕು ಮಟ್ಟದ ಇಲಾಖಾ ಕಚೇರಿಗಳು ಕಡಬದಲ್ಲಿ ತೆರೆಯಬೇಕಾಗಿದೆ. ಬಹುತೇಕ ಇಲಾಖೆಗಳು ತಾಲೂಕು ಮಟ್ಟದ ನೂತನ ಕಚೇರಿಗಳನ್ನು ತೆರೆಯಲು ನಾಮಫಲಕ ಅಳವಡಿಸಿಕೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿವೆ.

ತಾಲೂಕಾಗಿ ಕಾರ್ಯನಿರ್ವಹಣೆ
ಕಡಬ ಈಗಾಗಲೇ ಸ್ವತಂತ್ರ ತಾಲೂಕಾಗಿ ಕಾರ್ಯ ನಿರ್ವಹಿಸುತ್ತಿದೆ. ಕಡಬಕ್ಕೆ ವಿಶೇಷ ತಹಶೀಲ್ದಾರರು ಇದ್ದಾರೆ. ಪಹಣಿ ಪತ್ರ ಹಾಗೂ ಮ್ಯುಟೇಶನ್‌ ಪ್ರಕ್ರಿಯೆಗಳಲ್ಲಿ ಕಡಬ ತಾಲೂಕು ಎಂದೇ ದಾಖಲಾಗುತ್ತಿದೆ. ಇತರ ಇಲಾಖೆಗಳು ಇದೇ ರೀತಿ ತಾಲೂಕು ಮಟ್ಟದ ಕಚೇರಿಗಳನ್ನು ತೆರೆದು ಕಾರ್ಯನಿರ್ವಹಿಸಲು ಅವಕಾಶವಿದೆ. ತಾಲೂಕಿನ ಸಾಂಪ್ರದಾಯಿಕ ಉದ್ಘಾಟನೆ ಮಾತ್ರ ಬಾಕಿ ಉಳಿದಿರುವುದು. ಮುಂದಿನ ತಿಂಗಳು ಕಡಬ ತಾಲೂಕು ಉದ್ಘಾಟನೆಗೊಳ್ಳುವ ನಿರೀಕ್ಷೆ ಇರಿಸಲಾಗಿದೆ.
-ಕೃಷ್ಣಮೂರ್ತಿ ಎಚ್‌.ಕೆ.,
ಸಹಾಯಕ ಆಯುಕ್ತರು, ಪುತ್ತೂರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next