Advertisement

ಕಡಬ: ಮಳೆ ಹಾನಿ ಪ್ರದೇಶಕ್ಕೆ ಸುಳ್ಯ ಶಾಸಕ ಎಸ್‌. ಅಂಗಾರ ಭೇಟಿ

11:29 AM Aug 19, 2018 | |

ಕಡಬ : ಅತಿವೃಷ್ಟಿಯ ಹಿನ್ನಲೆಯಲ್ಲಿ ಕಡಬ ಪರಿಸರದ ನೂಜಿಬಾಳ್ತಿಲ, ಇಚಿಲಂಪಾಡಿ, ಮೂರಾಜೆ ಪಟ್ನ ಪ್ರದೇಶದಲ್ಲಿ ಕೃಷಿ ಹಾಗೂ ಆಸ್ತಿಪಾಸ್ತಿ ಹಾನಿಯಾದ ಪ್ರದೇಶಗಳಿಗೆ ಸುಳ್ಯ ಶಾಸಕ ಎಸ್‌.ಅಂಗಾರ ಅವರು ಶನಿವಾರ ಭೇಟಿ ನೀಡಿ ಹಾನಿಗೊಳಗಾದ ವರದಿಯೊಂದಿಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವಿಶೇಷ ಪರಿಹಾರಕ್ಕೆ ಆಗ್ರಹಿಸಲಾಗುವುದೆಂದು ಭರವಸೆ ನೀಡಿದರು.

Advertisement

ಶಾಸಕರು ನೆರೆನೀರಿನಲ್ಲಿ ಮುಳುಗಡೆಯಾಗಿದ್ದ ಇಚಿಲಂಪಾಡಿಯ ಶ್ರೀ ಗಂಗಾ ಧರೇಶ್ವರ ದೇವಸ್ಥಾನದ ಹತ್ತಿರ ಹಾಗೂ ಇಚಿಲಂಪಾಡಿಯ ಮಾನಡ್ಕ ಶ್ಯಾಮಲದೇವಿ, ವಿನೋದ್‌ ಕುಮಾರ್‌, ಲಕ್ಷ್ಮೀ ಕುಟ್ಟಿ, ಜಯಾನಂದ ಶೆಟ್ಟಿ ಮೊದಲಾದವರಿಂದ ತಮ್ಮ ಮನೆ ಕೃಷಿ ಹಾಗೂ ಇನ್ನಿತರ ನಷ್ಟಗಳ ಬಗ್ಗೆ ಮಾಹಿತಿ ಪಡೆದರು. ಶ್ರೀ ಗಂಗಾಧರೇಶ್ವರ ದೇವಾಲಯದ ಸುತ್ತ ಸುಮಾರು 500ಕ್ಕೂ ಹೆಚ್ಚು ಅಡಿಕೆ ಗಿಡ, ಪಂಪ್‌ ಸೆಟ್‌, ಬೈಕ್‌ ಸೆಟ್‌ ಹಾನಿಯಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು.

ಬಳಿಕ ಇಚಿಲಂಪಾಡಿ ಓರ್ಥಡೋಕ್ಸ್‌ ಸಿರಿಯನ್‌ ಚರ್ಚ್‌ ಬಳಿಯಿರುವ ನೇರ್ಲ ಸುದೆಗಂಡಿ ಎಂಬಲ್ಲಿ ರವೀಶ್‌ ಜೈನ್‌ ಅವರ ಹಾನಿಯಾದ ಮನೆಯನ್ನು ಪರಿಶೀಲನೆ ನಡೆಸಿದರು. ಬಳಿಕ ಕಡಬ ತಹಶೀಲ್ದಾರ್‌ ಕಚೇರಿ ಆಗಮಿಸಿದ ಶಾಸಕರು ಕಡಬ ಭಾಗದಲ್ಲಿ ಮಳೆಯಿಂದಾಗಿ ಆದ ಹಾನಿಯ ಬಗ್ಗೆ ವರದಿ ಪಡೆದುಕೊಂಡರು. ಅನಂತರ ಕೋಡಿಂಬಾಳ ಗ್ರಾಮದ ಮೂರಾಜೆ ಪಟ್ನಕ್ಕೆ ತೆರಳಿ ನೆರೆಯಿಂದಾಗಿ ಮನೆ ಕಳೆದುಕೊಂಡ ಜಲಜಾಕ್ಷಿ ಅವರಿಗೆ ಸಾಂತ್ವನ ಹೇಳಿ ಹೆಚ್ಚಿನ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದರು.

ಅಧಿಕಾರಿಗಳಿಂದ ಮಾಹಿತಿ
ಈಗಿನ ನಿಯಮಾವಳಿಯ ಪ್ರಕಾರ ಮನೆಗಳು ಭಾಗಶಃ ಹಾನಿಯಾದರೆ 75 ಸಾವಿರ ರೂ., ಸಂಪೂರ್ಣ ನಾಶವಾದರೆ 95 ಸಾವಿರ ರೂ. ಪರಿಹಾರ ನಿಗದಿಯಾಗಿದೆ. ಆದರೆ ಈ ಪರಿಹಾರದ ಮೊತ್ತ ತೀರ ಕಡಿಮೆಯಾಗಿದೆ. ಆದ್ದರಿಂದ ಸಂಪೂರ್ಣ ಮನೆ ಹಾನಿಯಾದರೆ ಸರಕಾರ ಕನಿಷ್ಟ 5ಲಕ್ಷ ರೂ. ಹಾಗೂ ಭಾಗಶಃ ಹಾನಿಯಾದರೆ 2.5 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಸರಕಾರದ ಮಟ್ಟದಲ್ಲಿ ಒತ್ತಡ ತರಲಾಗುವುದು ಎಂದರು. ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕವಾದ ವರದಿಯನ್ನು ನೀಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅವರು ಸೂಚಿಸಿದರು.

ವಸತಿ ಯೋಜನೆಯಲ್ಲಿ ಅನುದಾನ
ಇಚಿಲಂಪಾಡಿಯ ರವಿರಾಜ್‌ ಶೆಟ್ಟಿ ಹಾಗೂ ಮೂರಾಜೆ ಪಟ್ನ ಜಲಜಾಕ್ಷಿಯವರ ಮನೆ ಹಾನಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕಂದಾಯ ಇಲಾಖೆಯಿಂದ ಸಿಗುವ ಪರಿಹಾರದೊಂದಿಗೆ ಪಂಚಾಯತ್‌ನಿಂದ ನೂತನ ಮನೆ ನಿರ್ಮಾಣಕ್ಕೆ ವಸತಿ ಯೋಜನೆಯಲ್ಲಿ ಅನುದಾನ ನೀಡುವುದಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

Advertisement

ಇಚಿಲಂಪಾಡಿಯಲ್ಲಿ ಶಾಸಕರನ್ನು ಭೇಟಿಯಾದ ತಾ. ಪಂ. ಸದಸ್ಯೆ ಕೆ.ಟಿ. ವಲ್ಸಮ್ಮ ಅವರು ಇಚಿಲಂಪಾಡಿ ಭಾಗದಲ್ಲಿ ಮಳೆಯಿಂದಾಗಿ ಅತೀ ಹೆಚ್ಚು ಹಾನಿ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಪರಿಹಾರವನ್ನು ಈ ಭಾಗಕ್ಕೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಮನೆ ಹಾನಿಗೊಳಗಾದ ಮೂರಾಜೆ ಪಟ್ನ ಜಲಜಾಕ್ಷಿಯವರು ಸೂಕ್ತ ಪರಿಹಾರ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ಕೃಷ್ಣ ಶೆಟ್ಟಿ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಭಾಸ್ಕರ ಗೌಡ, ಕಡಬ ಬಿಜೆಪಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಎನ್‌.ಕೆ., ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಮಾಧವ, ಮೋಹಿನಿ, ಪಿ.ವಿ .ಅನ್ನಮ್ಮ , ಬಿಜೆಪಿ ಮುಖಂಡರಾದ ಸತೀಶ್‌ ನಾಯಕ್‌ ಕಡಬ, ಫಯಾಝ್ ಕೆನರಾ, ಮಾಧವ, ಹರ್ಷ ಕೋಡಿ, ಜಾನಕಿ, ಕೃಷ್ಣಪ್ಪ ಶಾಸಕರ ಜತೆಗಿದ್ದರು.

ಶೀಘ್ರ ಸಿಎಂ ಭೇಟಿ
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಪರೀತ ಮಳೆಯ ಪರಿಣಾಮವಾಗಿ ಸುಮಾರು 24 ರಸ್ತೆಗಳು ಹಾಗೂ 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 6ಮನೆಗಳು ಪೂರ್ತಿ ನೆಲಸಮವಾಗಿದೆ. ಅಪಾರ ಕೃಷಿ, ತೋಟಗಳು ನಾಶವಾಗಿವೆ. ಈ ಎಲ್ಲಾ ಘಟನೆಗಳ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್‌ ರವರಿಂದ ವರದಿಯನ್ನು ತರಿಸಿಕೊಂಡು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಶೀಘ್ರದಲ್ಲೇ ಭೇಟಿಯಾಗಿ ವಿಶೇಷ ಪರಿಹಾರ ನೀಡುವುದಕ್ಕಾಗಿ ಆಗ್ರಹಿಸಲಾಗುವುದು ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next