Advertisement

Kadaba ನಾಪತ್ತೆಯಾಗಿರುವ ವ್ಯಕ್ತಿಗಾಗಿ ಹುಡುಕಾಟ

12:40 AM Aug 27, 2023 | Team Udayavani |

ಕಡಬ: ಎಡಮಂಗಲ ಗ್ರಾಮದ ಪಾದೆ ಮನೆ ನಿವಾಸಿ, ಕೂಲಿ ಕಾರ್ಮಿಕ ಬಾಲಕೃಷ್ಣ ಗೌಡ (56) ಅವರು ಕಳೆದ 25 ದಿನಗಳ ಹಿಂದೆ ನಾಪತ್ತೆಯಾಗಿದ್ದು, ಅವರು ಕುಮಾರಧಾರ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆಯಿಂದ ಕಡಬ ಸಮೀಪದ ಪಿಜಕಳ ಬಳಿ ನದಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರು ಶನಿವಾರ ಹುಡುಕಾಟ ನಡೆಸಿದರು.

Advertisement

ಬಾಲಕೃಷ್ಣ ಗೌಡ ಅವರು ಜು. 31ರಂದು ಮನೆಯಿಂದ ಹೊರ ಹೋದವರು ನಾಪತ್ತೆಯಾಗಿದ್ದರು. ಅಂದು ಮಧ್ಯಾಹ್ನ ಕಡಬದ ಪಿಜಕಳ ಬಳಿ ಅಂಗಡಿಯೊಂದಕ್ಕೆ ಹೋಗಿದ್ದ ಅವರು ಬಳಿಕ ಪಿಜಕಳ ಪಾಲೋಳಿ ಕಡೆ ತೆರಳಿರುವುದನ್ನು ಅಂಗಡಿ ಮಾಲಕರು ಗಮನಿಸಿದ್ದರು. ಪಾಲೋಳಿಯಲ್ಲಿ ಕುಮಾರಧಾರ ನದಿಗೆ ಬೃಹತ್‌ ಸೇತುವೆ ನಿರ್ಮಾಣವಾಗುತ್ತಿದ್ದು, ಅದರ ಕೆಳ ಭಾಗದಲ್ಲಿ ಕೆಲವರು ನೀರು ಕಡಿಮೆ ಇದ್ದಾಗ ನದಿ ದಾಟಿ ಎಡಮಂಗಲ ಭಾಗಕ್ಕೆ ಹೋಗುತ್ತಾರೆ. ಬಾಲಕೃಷ್ಣ ಗೌಡರು ಕೂಡ ಪಾಲೋಳಿ ಕಡೆ ಹೆಜ್ಜೆ ಹಾಕಿರುವುದರಿಂದ ಅವರು ಕೂಡ ನದಿ ದಾಟಿ ಹೋಗಲು ಯತ್ನಿಸಿ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ. ಅದಕ್ಕೆ ಪೂರಕವೆಂಬಂತೆ ಅವರ ಬಳಿ ಇದ್ದ ಕೈ ಚೀಲವೊಂದು ನಾಡೋಳಿ ಎಂಬಲ್ಲಿ ಕುಮಾರಧಾರ ನದಿ ತಟದಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ ಈಗಾಗಲೇ ಬೆಳ್ಳಾರೆ ಪೊಲೀಸರು ನದಿ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ.

ಶನಿವಾರ ಶೌರ್ಯ ತಂಡದ 8 ಜನ ಪರಿಣತಿ ಪಡೆದ ಈಜುಗಾರರು ಕುಮಾರಧಾರ ನದಿಯ ಪಾಲೋಳಿಯಿಂದ ಕೂಡಿಗೆ ತನಕ ಹುಡುಕಾಟ ನಡೆಸಿದರು. ಬೆಳಗ್ಗೆಯಿಂದ ಸಂಜೆಯ ತನಕ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಮನೆಯವರು ಬಾಲಕೃಷ್ಣ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next