ಕಡಬ: ಕಡಬ ಪೊಲೀಸ್ ಠಾಣೆಯ ಗಸ್ತು ವಾಹನದ ಚಾಲಕ ಪ್ರದೀಪ್ ಅವರು ಯಾವುದೇ ಕೋಚಿಂಗ್ ಪಡೆಯದೆ ತನ್ನ ಕರ್ತವ್ಯದ ವೇಳೆ ಬಿಡುವು ಸಿಕ್ಕಾಗ ತನ್ನ ಮೊಬೈಲ್ನಲ್ಲೇ ಅಭ್ಯಾಸ ಮಾಡಿ ಪಿಎಸ್ಐ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಇವರೊಂದಿಗೆ ಬಂಟ್ವಾಳ ಠಾಣೆಯ ಸಿಬಂದಿ ಮುತ್ತಪ್ಪ ಕೂಡ ಪಿಎಸ್ಐ ಪರೀಕ್ಷೆ ತೇರ್ಗಡೆ ಆಗಿದ್ದಾರೆ. ನೇಮಕಾತಿ ಆದೇಶ ಇನ್ನಷ್ಟೇ ಬರಬೇಕಿದೆ.
ಇವರಿಬ್ಬರೂ 2021ರಲ್ಲಿ ಪಿಎಸ್ಐ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು, ಪ್ರದೀಪ್ ರಾಜ್ಯಕ್ಕೆ 13ನೇ ರ್ಯಾಂಕ್ ಗಳಿಸಿದ್ದರು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು ಎನ್ನುವ ಕಾರಣದಿಂದಾಗಿ ಅವರ ನೇಮಕ ರದ್ದಾಗಿತ್ತು. ಆದರೆ ಎದೆಗುಂದದೆ ಮತ್ತೂಮ್ಮೆ ಪರೀಕ್ಷೆ ಬರೆದಿದ್ದಾರೆ.
ಇವರಿಬ್ಬರೂ ಕರ್ತವ್ಯದ ನಡುವೆ ಪರೀಕ್ಷೆಗೆ ಪೂರ್ವಸಿದ್ಧತೆ ಮಾಡಲು ಹರಸಾಹಸಪಡುತ್ತಿದ್ದರು. ಪಿಎಸ್ಐ ಪರೀಕ್ಷೆಗೆ ಬೇಕಾದ ಪಠ್ಯದ ಭಾಗಗಳನ್ನು ಸಂಗ್ರಹಿಸಿ ಕರ್ತವ್ಯದ ವೇಳೆ ಬಿಡುವು ಸಿಕ್ಕಾಗ ಅಭ್ಯಾಸ ಮಾಡಿದ್ದರು. ಇದಕ್ಕಾಗಿ ಯಾವುದೇ ಕೋಚಿಂಗ್ ಪಡೆದಿರಲಿಲ್ಲ.
ಪ್ರದೀಪ್ ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ಆವಿನಮಾರನ ಗ್ರಾಮೀಣ ಭಾಗದವರು. ಹೆತ್ತವರ ಮೂವರು ಮಕ್ಕಳಲ್ಲಿ ಎರಡನೆಯವರು. ಪರೀಕ್ಷೆ ಬರೆಯುವಲ್ಲಿ ಪತ್ನಿಯ ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ಇವರು.
ಮುತ್ತಪ್ಪ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸೂಳೆಬಾವಿ ಗ್ರಾಮದವರು. ಮುತ್ತಪ್ಪ ಅವರು ಕೂಲಿ ಕಾರ್ಮಿಕ ದಂಪತಿಯ ಐದನೇ ಪುತ್ರ.