Advertisement

ನ. 25: ನೂತನ ಕಡಬ ತಾಲೂಕು ಉದ್ಘಾಟನೆ

02:30 AM Nov 20, 2018 | Team Udayavani |

ಕಡಬ: ನೂತನ ಕಡಬ ತಾಲೂಕು ಉದ್ಘಾಟನೆಗೆ ನ. 25ರಂದು ದಿನ ನಿಗದಿಯಾಗಿದ್ದು, ಉದ್ಘಾಟನ ಸಮಾರಂಭದ ಪೂರ್ವಸಿದ್ಧತೆಗಾಗಿ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕಡಬದ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ ಎಚ್‌.ಕೆ. ಮಾತನಾಡಿ, ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಕಡಬ ತಾಲೂಕನ್ನು ನ. 25ರಂದು ಉದ್ಘಾಟಿಸುವರು ಎನ್ನುವ ಮಾಹಿತಿ ಬಂದಿದೆ. ಸಿದ್ಧತೆಗೆ ಹೆಚ್ಚಿನ ಕಾಲಾವಕಾಶ ಇಲ್ಲದ ಕಾರಣ ವ್ಯವಸ್ಥೆಗಳು ತುರ್ತಾಗಿ ಆಗಬೇಕಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು, ಸಂಘಟನೆಗಳು, ಜನರ ಸಹಕಾರ ಅಗತ್ಯ ಎಂದರು.

Advertisement

ಉದ್ಘಾಟನೆಯ ವೇಳೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿ ಗಳನ್ನು ಕಡಬದಲ್ಲಿ ತೆರೆಯಬೇಕಾಗಿದ್ದು, ಹೆಚ್ಚಿನ ಇಲಾಖೆಗಳಿಗೆ ಕಟ್ಟಡಗಳನ್ನು ಗುರುತಿಸಲಾಗಿದೆ. ಕಟ್ಟಡಗಳು ಲಭ್ಯ ವಿಲ್ಲದ  ಇಲಾಖೆಗಳು ತಾತ್ಕಾಲಿಕ ನೆಲೆಯಲ್ಲಿ ಲಭ್ಯವಿರುವ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಿ ಮುಂದಿನ ದಿನಗಳಲ್ಲಿ ಕಚೇರಿ ಕಟ್ಟಡ ನಿರ್ಮಿಸಲು ಸೂಕ್ತ ಭೂಮಿ ಗುರುತಿಸಬೇಕು ಎಂದರು. ಆಯಾ ಕಚೇರಿಗೆ ಅಧಿಕಾರಿ ಮತ್ತು ಸಿಬಂದಿಯನ್ನು ನಿಯೋಜಿಸಬೇಕು. ಪೂರ್ಣಪ್ರಮಾಣದ ಅಧಿಕಾರಿ ಇಲ್ಲದಿದ್ದರೆ ಪ್ರಭಾರ ವ್ಯವಸ್ಥೆ ಮಾಡಬೇಕು ಎಂದು ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ವಿವಿಧ ಇಲಾಖೆಗಳ ಕಚೇರಿಗಳು ಇರಬೇಕು ಎನ್ನುವ ಸರಕಾರದ ಆಶಯದಂತೆ ನೂತನ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅಂದಾಜುಪಟ್ಟಿ ತಯಾರಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಕಳುಹಿಸಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣವಾದ ಬಳಿಕ ಹೆಚ್ಚಿನ ಸರಕಾರಿ ಕಚೇರಿಗಳಿಗೆ ಸ್ಥಳಾವಕಾಶ ಸಿಗಲಿದೆ ಎಂದು ಹೇಳಿದರು.

ಸುಳ್ಯ ತಹಶೀಲ್ದಾರ್‌ ಕುಂಞಮ್ಮ, ಪುತ್ತೂರು ತಾಲೂಕು ಪಂಚಾಯತ್‌ ಇಒ ಜಗದೀಶ್‌ ಎಸ್‌., ಪುತ್ತೂರು ಸಿಡಿಪಿಒ ಶಾಂತಿ ಹೆಗಡೆ, ಜಿಲ್ಲಾ ಪಂಚಾಯತ್‌ ಸದಸ್ಯ ಪಿ.ಪಿ. ವರ್ಗೀಸ್‌, ತಾಲೂಕು ಪಂಚಾಯತ್‌  ಸದಸ್ಯರಾದ ಗಣೇಶ್‌ ಕೈಕುರೆ, ಫಝಲ್‌ ಕೋಡಿಂಬಾಳ, ಆಶಾ ಲಕ್ಷ್ಮಣ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಸಹಿತ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌, ಕಡಬ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಸ್‌. ಅಬ್ದುಲ್‌ ಖಾದರ್‌ ಉಪಸ್ಥಿತರಿದ್ದು, ಸಮಾರಂಭದ ಸಿದ್ಧತೆಯ ಕುರಿತು ಸಲಹೆ-ಸೂಚನೆ ನೀಡಿದರು. ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿಗಸ್‌ ಸ್ವಾಗತಿಸಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ವಂದಿಸಿದರು.

ಈ ಬಾರಿ ಸಮಾರಂಭ ರದ್ದಾಗದಿರಲಿ
ಈ ಹಿಂದೆ ಹಲವು ಬಾರಿ ನೂತನ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲು ದಿನ ನಿಗದಿಪಡಿಸಿದರೂ ಪದೇ ಪದೇ ವಿಘ್ನಗಳು ಎದುರಾಗಿ ಉದ್ಘಾಟನ ಸಮಾರಂಭ ರದ್ದಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಮಾರಂಭ ರದ್ದಾಗದೆ ತಾಲೂಕು ಉದ್ಘಾಟನೆಯ ಭಾಗ್ಯ ಈಡೇರಲಿ ಎನ್ನುವ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು.

Advertisement

ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಘೋಷಣೆಯಾಗಿದ್ದ ಕಡಬ ನೂತನ ತಾಲೂಕು ಬಳಿಕ ಅನುಷ್ಠಾನವಾಗದೆ ಭ್ರಮನಿರಸನಗೊಂಡಿದ್ದ ಕಡಬ ಜನತೆ, ಬಳಿಕ ಸಿದ್ದರಾಮಯ್ಯ ನೇತೃತ್ವದ ಸರಕಾರವೂ ಈ ಕುರಿತು ಗಮನಹರಿಸದೇ ಇದ್ದಾಗ ತೀವ್ರ ಅಸಮಾಧಾನಗೊಂಡಿದ್ದರು. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ಇತರ ನೂತನ ತಾಲೂಕುಗಳೊಂದಿಗೆ ಕಡಬವನ್ನೂ ಮತ್ತೆ ಘೋಷಣೆ ಮಾಡಿದಾಗಲೂ ಜನರಲ್ಲಿ ಹಿಂದಿನ ಉತ್ಸಾಹ ಕಂಡುಬರಲಿಲ್ಲ. ಈ ಮಧ್ಯೆ ಬೈಂದೂರು, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳ ಉದ್ಘಾಟನೆ ನಡೆದು ಕಡಬ ತಾಲೂಕು ಬಾಕಿ ಉಳಿದಾಗ ಮತ್ತೆ ಆತಂಕ ಶುರುವಾಗಿತ್ತು. ಮೂರು ಬಾರಿ ಉದ್ಘಾಟನೆಗೆ ದಿನ ನಿಗದಿಮಾಡಿ ಮುಂದೂಡಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು.

ಸಮಾರಂಭದ ಸ್ಥಳ ಪರಿಶೀಲನೆ
ಉದ್ಘಾಟನ ಸಮಾರಂಭ ನಡೆಸುವುದಕ್ಕಾಗಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ. ಫಿಲಿಪ್‌ ಅವರ ಮಾಲಕತ್ವದ ಕಡಬದ ಅನುಗ್ರಹ ಸಭಾಭವನ ಸೂಕ್ತ ಎನ್ನುವ ಸಭೆಯ ತೀರ್ಮಾನದಂತೆ ಸಭಾಭವನಕ್ಕೆ ತೆರಳಿದ ಸಹಾಯಕ ಆಯುಕ್ತರು, ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ವಾಹನ ನಿಲುಗಡೆಗೆ ಅವಕಾಶ ಸಹಿತ ಎಲ್ಲ ವ್ಯವಸ್ಥೆಗಳು ಇರುವುದರಿಂದ ಇದೇ ಸೂಕ್ತ. ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರ ಮಾಲಕತ್ವದ ಸಭಾಭವನದಲ್ಲಿ ನೂತನ ತಾಲೂಕಿನ ಉದ್ಘಾಟನೆ ನಡೆದರೆ ಊರ ಜನರಿಗೂ ಸಂತೋಷವಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next