Advertisement

Kadaba: ಮನೆಯಿಂದ ಲಕ್ಷಾಂತರ ರೂ. ಚಿನ್ನ, ನಗದು ಕಳ್ಳತನ

12:04 AM Mar 12, 2024 | Team Udayavani |

ಕಡಬ: ರಾಮಕುಂಜ ಗ್ರಾಮದ ಗೋಳಿತ್ತಡಿಯ ಮನೆಯಿಂದ ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ನಗದು ಕಳವುಗೊಂಡಿರುವ ಘಟನೆ ಮಾ. 11ರಂದು ಸಂಜೆ ವೇಳೆ ಬೆಳಕಿಗೆ ಬಂದಿದೆ.

Advertisement

ಉಪ್ಪಿನಂಗಡಿ ‘ವಿವಾ’ ವಸ್ತ್ರ ಮಳಿಗೆ ಮಾಲಕ ಇಮ್ತಿಯಾಜ್‌ ಅವರ ತಾಯಿ ನೆಬಿಸಾ ವಾಸ್ತವ್ಯವಿದ್ದ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿನ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಮನೆಯಲ್ಲಿ ನೆಬಿಸಾ, ಅವರ ಪುತ್ರಿ ನಸೀಮಾ, ಅಳಿಯ ನಾಸೀರ್‌, ನಸೀಮಾ-ನಾಸೀರ್‌ ದಂಪತಿಯ ಮಕ್ಕಳು ಹಾಗೂ ಸಂಬಂಧಿಕೆ ಯುವತಿ ಪಾಯಿಜಾ ವಾಸವಿದ್ದರು. ನಸೀಮಾ ಕಳೆದ ಗುರುವಾರ ಹೆರಿಗೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ನೆಬಿಸಾ ಹಾಗೂ ನಾಸೀರ್‌ ಅವರೂ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು. ಮಕ್ಕಳು ಇಮ್ತಿಯಾಜ್
ಅವರ ಮನೆಯಲ್ಲಿ ಉಳಿದುಕೊಂಡಿದ್ದರು.

ಸಂಬಂಧಿಕೆ ಯುವತಿ ಪಾಯಿಜಾ ತನ್ನ ಮನೆಗೆ ತೆರಳಿದ್ದರು. ಈ ಮನೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಯಾರೂ ಇರಲಿಲ್ಲ. ಮಾ. 10ರಂದು ಪಾಯಿಜಾ ಮನೆಗೆ ಬಂದು ಮನೆಯನ್ನು ಶುಚಿಗೊಳಿಸಿ ತನ್ನ ಮನೆಗೆ ತೆರಳಿದ್ದವರು ಮಾ. 11ರಂದು ಸಂಜೆ 4ಕ್ಕೆ ವೇಳೆಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಹಿಂಬಾಗಿಲ ಮೂಲಕ ಪ್ರವೇಶ: ಮನೆಯ ಹಿಂಬಾಗಿಲಿಗೆ ಅಳವಡಿಸಿದ್ದ ಕಬ್ಬಿಣದ ಗೇಟನ್ನು ಮುರಿದು ಒಳಪ್ರವೇಶಿಸಿದ್ದ ಕಳ್ಳರು ಮನೆಯೊಳಗಿದ್ದ ಕಪಾಟಿನ ಬೀಗ ಮುರಿದು ಚಿನ್ನ ಹಾಗೂ ನಗದು ಕಳವುಗೈದಿದ್ದಾರೆ. ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ. ಅಂದಾಜು 10 ಪವನ್‌ ಚಿನ್ನ ಹಾಗೂ 1 ಲಕ್ಷ ರೂ. ನಗದು ಕಳವುಗೊಂಡಿದೆ ಎಂದು ಹೇಳಲಾಗಿದ್ದು ನೆಬಿಸಾ ಅವರು ಮನೆಗೆ ಬಂದು ಪರಿಶೀಲನೆ ನಡೆಸಿದ ಬಳಿಕವಷ್ಟೇ ಕಳವುಗೊಂಡಿರುವ ಸೊತ್ತುಗಳ ಬಗ್ಗೆ ನಿಖರ ಮಾಹಿತಿ ತಿಳಿಯಬೇಕಾಗಿದೆ.

Advertisement

ಸ್ಥಳಕ್ಕೆ ಪುತ್ತೂರು ಡಿವೈಎಸ್‌ಪಿ ಅರುಣ್‌ ನಾಗೈಗೌಡ, ಕಡಬ ಠಾಣಾ ಸಬ್‌ಇನ್ಸ್‌ಪೆಕ್ಟರ್‌ಗಳಾದ ಅಭಿನಂದನ್‌, ಅಕ್ಷಯ್‌ ಢವಗಿ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

2ನೇ ಬಾರಿ ಕಳ್ಳತನ: ಈ ಮನೆಯಲ್ಲಿ ಇದು 2ನೇ ಬಾರಿ ನಡೆದ ಕಳ್ಳತನ ಆಗಿದೆ. 10 ವರ್ಷದ ಹಿಂದೆ ನೆಬಿಸಾ ಅವರ ಪುತ್ರ ಸಿದ್ದೀಕ್‌ ಅವರ ಕುಂಡಾಜೆಯಲ್ಲಿರುವ ಮನೆಯಲ್ಲಿ ಚಿನ್ನ ಹಾಗೂ ನಗದು ಕಳ್ಳತನ ನಡೆದಿತ್ತು. ಇದರ ಮರುದಿನವೇ ಗೋಳಿತ್ತಡಿಯಲ್ಲಿ ನೆಬಿಸಾ ಅವರ ಮನೆಯಲ್ಲೂ ಚಿನ್ನ, ನಗದು ಕಳವುಗೊಂಡಿತ್ತು. ಈ ಎರಡೂ ಕಳ್ಳತನ ಪ್ರಕರಣಗಳೂ ಈ ತನಕ ಪತ್ತೆಗೊಂಡಿಲ್ಲ. ಇದೀಗ ಮತ್ತೆ ಕಳ್ಳತನಗೊಂಡಿರುವುದು ಮನೆಯವರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಸಿಸಿಟಿವಿಯಲ್ಲಿ ಸೆರೆ: ಕಳ್ಳತನ ನಡೆದ ನೆಬಿಸಾ ಅವರ ಮನೆಯಲ್ಲಿ ಸಿಸಿಟಿವಿ ಇದ್ದರೂ ಅದು ಚಾಲೂ ಸ್ಥಿತಿಯಲ್ಲಿ ಇಲ್ಲ. ಇವರ ಎದುರಿನ ಮನೆಯವರ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮಾ. 11ರ ಮುಂಜಾನೆ 2.30ರ ವೇಳೆಗೆ ಸ್ವಿಫ್ಟ್ ಕಾರಿನಲ್ಲಿ ಬಂದ ಇಬ್ಬರು ಹೆದ್ದಾರಿ ಪಕ್ಕ ಮನೆಯೊಂದರ ಗೇಟ್‌ನ ಮುಂಭಾಗದಲ್ಲಿ ಕಾರು ನಿಲ್ಲಿಸಿ ಇಳಿದು ಹೋಗಿದ್ದು ಸುಮಾರು ಅರ್ಧ ತಾಸಿನ ಬಳಿಕ ಮತ್ತೆ ಕಾರಿನಲ್ಲಿ ತೆರಳಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next