Advertisement

ಹೊಸ ವರ್ಷದಿಂದ ಕಡಬ ಹೊಸ ತಾಲೂಕು

10:12 AM Dec 29, 2017 | Team Udayavani |

ಕಡಬ: ಜನರ ಬಹುಕಾಲದ ಬೇಡಿಕೆಯಾದ ತಾಲೂಕು ಅನುಷ್ಠಾನ ಜನವರಿ ಒಂದರಿಂದ ಆರಂಭವಾಗಲಿದೆ. ರಾಜ್ಯ ಸರಕಾರ ಈ ಸಂಬಂಧ ಈಗಾಗಲೇ ಸೂಚನೆ ನೀಡಿದ್ದು, ಕಡಬ ಸೇರಿದಂತೆ ಎಲ್ಲ ಹೊಸ ತಾಲೂಕುಗಳು ಹೊಸ ವರ್ಷದ ಮೊದಲ ದಿನದಿಂದಲೇ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವ ಸಂಭವವಿದೆ.

Advertisement

ಕಡಬ ತಾಲೂಕಿಗೆ 42 ಗ್ರಾಮಗಳನ್ನು ಸೇರ್ಪಡೆಗೊಳಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ನಾಗರಿಕರು ಅಂತಿಮ ಅಧಿಸೂಚನೆಯ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜ. 1ರಿಂದ ಕಡಬವು ಪೂರ್ಣಪ್ರಮಾಣದ ತಾಲೂಕಾಗಿ ಕಾರ್ಯಾರಂಭ ಮಾಡಲಿದೆ.

ಈ ಹಿಂದೆ ಪ್ರಸ್ತಾವನೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಕೈಬಿಟ್ಟು ಪುತ್ತೂರು ತಾಲೂಕಿನ 35 ಗ್ರಾಮಗಳು, ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಸೇರಿಸಲಾಗಿದೆ. ಒಟ್ಟು 42 ಗ್ರಾಮಗಳ ವ್ಯಾಪ್ತಿ ಹೊಸ ತಾಲೂಕಿನದ್ದಾಗಲಿದೆ. ಹೊಸ ತಾಲೂಕಿನ ಒಟ್ಟು ಜನಸಂಖ್ಯೆ (2011ರ ಜನಗಣತಿಯಂತೆ) 1,20,086 ಆಗಿದ್ದು, ಒಟ್ಟು 149159.8 ಎಕ್ರೆ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದೆ.

ಹೊಸ ತಾಲೂಕು ಈಗಾಗಲೇ ಕೆಲವು ಮೂಲ ಸೌಲಭ್ಯಗಳನ್ನು ಹೊಂದಿದ್ದು, ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಸಮುದಾಯ ಆರೋಗ್ಯ ಕೇಂದ್ರವಿದ್ದರೂ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣವಾಗಬೇಕಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿ, ಶಿಕ್ಷಣ ಇಲಾಖೆಯ ಕಚೇರಿ ಸೇರಿದಂತೆ ಹಲವಾರು ಮಹತ್ವದ ಇಲಾಖೆಗಳ ಕಚೇರಿಗಳು ಇನ್ನಷ್ಟೇ ಆರಂಭವಾಗಬೇಕಿದೆ. 

ತಾಲೂಕಿಗೆ ಸೇರುವ ಗ್ರಾಮ
ಪ್ರಸ್ತುತ ಪುತ್ತೂರು ತಾಲೂಕಿನಲ್ಲಿರುವ ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು, ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಹಳೆನೇರೆಂಕಿ, ಕೊಯಿಲ, ದೋಳ್ಪಾಡಿ, ಕಾಣಿಯೂರು, ಚಾರ್ವಾಕ, ಬೆಳಂದೂರು, ಕಾಯಿಮಣ, ಕುದ್ಮಾರು, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕೊಣಾಜೆ, ಶಿರಿಬಾಗಿಲು, ಗೋಳಿತ್ತೂಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ ಹಾಗೂ ಸುಳ್ಯ ತಾಲೂಕಿನ ಯೇನೆಕಲ್ಲು, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಮತ್ತು ಎಡಮಂಗಲ ಗ್ರಾಮಗಳು ಹೊಸ ತಾಲೂಕಿನ ವ್ಯಾಪ್ತಿಗೆ ಸೇರಲಿವೆ.

Advertisement

ಆಗಬೇಕಾಗಿರುವುದು
ಸುಸಜ್ಜಿತ ಮಿನಿ ವಿಧಾನಸೌಧ,  ನ್ಯಾಯಾಲಯ, ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಟ್ರೆಜರಿ (ಖಜಾನೆ), ಅಗ್ನಿಶಾಮಕ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತೋಟಗಾರಿಕೆ ಇಲಾಖೆ ತಾಲೂಕು ಮಟ್ಟದ ಕಚೇರಿ, ಕೃಷಿ ಇಲಾಖೆ ತಾಲೂಕು ಮಟ್ಟದ ಕಚೇರಿ, ಜಿಪಂ ಇಂಜಿನಿಯರಿಂಗ್‌ ವಿಭಾಗದ ಕಚೇರಿ,  ಲೋಕೋಪಯೋಗಿ ಇಲಾಖೆ ಕಚೇರಿ,  ಆಹಾರ ನಿರೀಕ್ಷಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ, ಸರಕಾರಿ ಪದವಿ ಕಾಲೇಜು, ಪ್ರತ್ಯೇಕ ಎಪಿಎಂಸಿ, ಪ್ರತ್ಯೇಕ ತಾಲೂಕು ಪಂಚಾಯತ್‌ ವ್ಯವಸ್ಥೆ ಮತ್ತು ಕಚೇರಿ.

ಏನೇನಿದೆ?
ಸಮುದಾಯ ಆರೋಗ್ಯ ಕೇಂದ್ರ, ಪ್ರವಾಸಿ ನಿರೀಕ್ಷಣ ಮಂದಿರ (ದುರಸ್ತಿ ಸ್ಥಿತಿ), ವಿಶೇಷ ತಹಶೀಲ್ದಾರ್‌, ವಿವಿಧ ಇಲಾಖೆಗೆ ಜಾಗ ಕಾದಿರಿಸಲಾಗಿದೆ, ರಸ್ತೆ, ಸೇತುವೆಗಳು ಮೇಲ್ದರ್ಜೆಗೆ, ಎಪಿಎಂಸಿ ಉಪ ಪ್ರಾಂಗಣ.

ತಯಾರಿ ನಡೆದಿದೆ
ನೂತನ ತಾಲೂಕು ಅನುಷ್ಠಾನದ ಸಿದ್ಧತೆಗಳಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿವೆ. ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳು ತೆರೆಯಬೇಕಾಗಿದ್ದು, ಈ ದಿಕ್ಕಿನಲ್ಲೂ ತಯಾರಿ ನಡೆದಿದೆ. ಸರಕಾರದಿಂದ ನೂತನ ತಾಲೂಕಿನ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಅಂತಿಮ ಅಧಿಸೂಚನೆ ಬರಬೇಕಿದೆ.
 ಜಾನ್‌ಪ್ರಕಾಶ್‌ ರೋಡ್ರಿಗಸ್‌,
   ಕಡಬ ತಹಶೀಲ್ದಾರ್‌

ನಾಗರಾಜ್‌ ಎನ್‌. ಕೆ. ಕಡಬ

Advertisement

Udayavani is now on Telegram. Click here to join our channel and stay updated with the latest news.

Next