Advertisement
ಕಾಮಗಾರಿಗೆ ತಡೆಯಾದ ಜಮೀನಿನ ತಕರಾರುಸೇತುವೆ ಕಾಮಗಾರಿ 4 ವರ್ಷಗಳ ಹಿಂದೆಯೇ ಆರಂಭಗೊಂಡಿದ್ದರೂ, ಸಂಪರ್ಕ ರಸ್ತೆಗೆ ಅಗತ್ಯವಿದ್ದ ಜಮೀನಿನ ತಕರಾರಿನಿಂದಾಗಿ ಪೂರ್ಣಗೊಂಡಿರಲಿಲ್ಲ. ಈ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದಿತ್ತು. ಸಂಪರ್ಕ ರಸ್ತೆಗೆ ಭೂಮಿ ಬಿಟ್ಟುಕೊಡಬೇಕಿದ್ದ ಭೂ ಮಾಲಕರು ಸೂಕ್ತ ಪರಿಹಾರ ಸಿಗದೆ ಭೂಮಿ ನೀಡಲು ಒಪ್ಪದೇ ಇದ್ದುರಿಂದ ಸಂಪರ್ಕ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದು ಸಂಪರ್ಕ ರಸ್ತೆ ನಿರ್ಮಾಣವಾಗುತ್ತಿದೆ. ಸಂಪರ್ಕ ರಸ್ತೆಯ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ತಡೆಗೋಡೆ ಕಾಮಗಾರಿ ಮುಗಿದು ಸಂಪರ್ಕ ರಸ್ತೆಗೆ ಡಾಮರು ಹಾಕಿ ಫೆಬ್ರವರಿ ಕೊನೆಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸೇತುವೆ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಭಾರತದ ಅತೀ ದೊಡ್ಡ ಯಾತ್ರಾಸ್ಥಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಹಳೆಯ ಮುಳುಗು ಸೇತುವೆ ಮೈಸೂರು ರಾಜ್ಯ ಆಡಳಿತಾವಧಿಯಲ್ಲಿ 1955ರಲ್ಲಿ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನ ತನಕ ಮಳೆಗಾಲದಲ್ಲಿ ನೆರೆನೀರಿಗೆ ಮುಳುಗಿ ಅನೇಕ ದುರಂತ ಗಳಿಗೆ ಸಾಕ್ಷಿಯಾಗಿರುವ ಈ ಸೇತುವೆ ಮಂದಿನ ದಿನಗಳಲ್ಲಿ ಕೇವಲ ನೆನಪಾಗಿ ಉಳಿಯಲಿದೆ. ಇಲ್ಲಿ ನೂತನ ಸೇತುವೆ ನಿರ್ಮಿಸಲು ಏಳು ವರ್ಷಗಳ ಹಿಂದೆ ರಾಜ್ಯ ಸರಕಾರ 7.5 ಕೋಟಿ ರೂ. ಅನುದಾನ ಒದಗಿಸಿತ್ತು. ಬಳಿಕ ಹಲವು ಎಡರುತೊಡರುಗಳ ನಡುವೆ 4 ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಹಳೆಯ ಸೇತುವೆಯಿಂದ ಸುಮಾರು 4 ಮೀ. ಎತ್ತರದಲ್ಲಿ 125 ಮೀ. ಉದ್ದ ಹಾಗೂ 12 ಮೀ. ಅಗಲದಲ್ಲಿ ಹೊಸ ಸೇತುವೆ ಎದ್ದುನಿಂತಿದೆ. ಹಳೆ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಸಂಪರ್ಕ ರಸ್ತೆಯ ಪಕ್ಕದ ತಡೆಗೊಡೆ ಇತ್ಯಾದಿ ಹೆಚ್ಚುವರಿಯಾಗಿ ಸೇರಿ ಸೇತುವೆಯ ಒಟ್ಟು ನಿರ್ಮಾಣ ವೆಚ್ಚ 9.18 ಕೋಟಿ ರೂ.ಗಳಿಗೆ ಏರಿದೆ.
Related Articles
ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೃಹತ್ ಸೇತುವೆಗಳಾದ ಶಾಂತಿಮೊಗರು, ಸುಬ್ರಹ್ಮಣದ ಕುಮಾರಧಾರ ಹಾಗೂ ಕಡಬದ ಹೊಸಮಠ ಸೇತುವೆಗಳಿಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತದಲ್ಲಿದ್ದಾಗ ಅನುದಾನ ಮಂಜೂರು ಮಾಡಲಾಗಿತ್ತು. ಹೊಸಮಠ ಸೇತುವೆ ಕಾಮಗಾರಿ ಮಾತ್ರ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿತ್ತು. ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಫೆಬ್ರವರಿ ಅಂತ್ಯದೊಳಗೆ ಸೇತುವೆಯ ಎಲ್ಲ ಕೆಲಸ ಕಾರ್ಯಗಳು ಮುಗಿದು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
– ಎಸ್. ಅಂಗಾರ,
ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ
Advertisement
•ನಾಗರಾಜ್ ಎನ್.ಕೆ.