ಕಡಬ: ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರ ಸಂಘ ಹಾಗೂ ಒಡಿಯೂರು ವಿವಿಧ್ದೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯಲ್ಲಿ ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸಿರುವ ಆರೋಪಿ ನೆಲ್ಯಾಡಿಯ ಸೆಬಾಸ್ಟಿಯನ್ (47) ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆಯಲ್ಲೂ ನಕಲಿ ಬಳೆಗಳನ್ನು ಅಡವಿಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ. ಕಡಬದಲ್ಲೂ ವಂಚನೆ ಮಾಡಿರುವುದು ತಿಳಿದು ಬಂದಿದೆ.
ನೆಲ್ಯಾಡಿ ನಿವಾಸಿಯಾಗಿರುವ ಸೆಬಾಸ್ಟಿಯನ್ ಹಾಗೂ ಕೇರಳ ಮೂಲದ ಡಾನಿಶ್ ಜ. 27ರಂದು ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಾರದ 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡಮಾನವಿರಿಸಿ ಸಂಘದಿಂದ 1.40 ಲಕ್ಷ ರೂ. ಪಡೆದಿದ್ದರು. ಅನುಮಾನದ ಮೇರೆಗೆ ಚಿನ್ನವನ್ನು ಪರಿಶೀಲಿಸಿದಾಗ ನಕಲಿಯೆಂದು ತಿಳಿದು ಬಂದಿದ್ದು ಸಂಘದ ವ್ಯವಸ್ಥಾಪಕಿ ಚೈತನ್ಯ ಸಿ. ಎಚ್. ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಬಾಸ್ಟಿಯನ್ ಜ. 30ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಆಲಂಕಾರು ಶಾಖೆಗೆ ಬಂದು ಇದೇ ರೀತಿ 4 ಚಿನ್ನದ ಬಳೆಗಳನ್ನು ಅಡಮಾನವಿರಿಸಿ 1.35 ಲಕ್ಷ ರೂ. ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಘದ ಆಲಂಕಾರು ಶಾಖಾ ಪ್ರಬಂಧಕಿ ರೇವತಿ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಅದೇ ಆರೋಪಿಗಳು ಜ. 31ರಂದು ಒಡಿಯೂರು ಶ್ರೀ ವಿವಿಧ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪ್ಪಿನಂಗಡಿ ಶಾಖೆಗೆ ಬಂದು 40 ಗ್ರಾಮ್ ತೂಕದ 5 ನಕಲಿ ಬಳೆಗಳನ್ನು ಅಡಮಾನವಿರಿಸಿ, 1.70 ಲಕ್ಷ ರೂ. ಸಾಲ ಪಡೆದು ವಂಚಿಸಿರುವುದಾಗಿ ಶಾಖಾ ವ್ಯವಸ್ಥಾಪಕಿ ಕಮಲ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೂಂದು ಪ್ರಕರಣ ದಾಖಲಾಗಿದೆ.
ಆರೋಪಿಗಳು ಇನ್ನಷ್ಟು ಸಹಕಾರ ಸಂಘಗಳಲ್ಲಿ ನಕಲಿ ಬಳೆಗಳನ್ನು ಅಡವಿಟ್ಟು ವಂಚಿಸಿರುವ ಸಾಧ್ಯತೆಗಳಿದ್ದು ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಇದೀಗ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಕಡಬದ ಎರಡು ಸಹಕಾರಿ ಸಂಘಗಳಿಗೆ ವಂಚನೆ ಮಾಡಿರುವುದು ತಿಳಿದು ಬಂದಿದ್ದು, ಆ ಕುರಿತು ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.