Advertisement
ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ತಪ್ಪು ಮಾಡದೆ ರಿಯಾದ್‌ನಲ್ಲಿ ಜೈಲಲ್ಲಿರುವವರು. ಅವರ ಕುಟುಂಬದ ಪರವಾಗಿ ನಿಕಟ ವರ್ತಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಮಂಗಳೂರಿನ ಎನ್‌ಇಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರು ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರಿಗೆ ಈ ಕುರಿತ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಪದೋನ್ನತಿ ಮೂಲಕ ಸೌದಿ ಅರೇಬಿಯಾಕ್ಕೆ 2022ರಲ್ಲಿ ಕಂಪೆನಿ ಕೆಲಸಕ್ಕೆ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪೆನಿಯಲ್ಲಿದ್ದರು. ನವೆಂಬರ್‌ನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿ ದ್ದರು. ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು (ತಂಬ್) ಸಹಿ ನೀಡಿದ್ದರು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳ ಲಾಗಿತ್ತು. ಒಟಿಪಿ ಸಂಖ್ಯೆ ತಿಳಿಸುವಂತೆ ಸೂಚಿಸಿದಾಗ ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಇವರನ್ನು ಬಂಧಿಸಿದ್ದರು. ಯಾಕೆ ಜೈಲು ವಾಸ?
ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದಿದ್ದರು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್ ಖಾತೆಗೆ 22 ಸಾವಿರ ರಿಯಲ್ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ಈ ಹಣ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ಅವರ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದು, ಬಂಧಿಸಲಾಗಿದೆ ಎಂದು ಚಂದ್ರಶೇಖರ್ ಅವರ ಗೆಳೆಯರು ಮಾಹಿತಿ ಪಡೆದು ಮನೆಮಂದಿಗೆ ತಿಳಿಸಿದ್ದಾರೆ.
Related Articles
ಚಂದ್ರಶೇಖರ್‌ಗೆ ಜನವರಿಯಲ್ಲಿ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಮದುವೆಯ ದಿನಾಂಕವೂ ಅಂತಿಮವಾಗಿತ್ತು. ಸಿದ್ಧತೆಯಲ್ಲಿ ಇರುವಾಗಲೇ ಅವರ ಬಂಧನವಾಗಿದೆ. ಹ್ಯಾಕರ್‌ಗಳ ಕಿರುಕುಳದಿಂದ ಚಂದ್ರಶೇಖರ್‌ಗೆ ಅನ್ಯಾಯವಾಗಿದೆ. ಕಳೆದ 8 ತಿಂಗಳಿಂದ ಅವರ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದೆ. ತಪ್ಪು ಮಾಡದೆ ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ ಶ್ರೀಧರ ಗೌಡ ಅವರು, ಆತನ ಸ್ನೇಹಿತರು 10 ಲಕ್ಷ ರೂ.. ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದಾರೆ. ಆದರೂ ಬಿಡುಗಡೆ ಸಾಧ್ಯವಾಗಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಜಿಲ್ಲೆಯ ಇತರ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ನಾಗರಿಕರು ಸೇರಿ ಕೇಂದ್ರ ಸರಕಾರಕ್ಕೆ ಒತ್ತಡ ಹಾಕುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Advertisement