Advertisement

ಪತ್ನಿಯನ್ನು ಕತ್ತಿಯಿಂದ ಕಡಿದು, ತನ್ನ ಕುತ್ತಿಗೆ ಸೀಳಿಕೊಂಡ ಪತಿ

05:53 AM Jan 15, 2019 | |

ಕಡಬ : ಸುಮಾರು 7 ವರ್ಷಗಳ ಹಿಂದೆ ಐತ್ತೂರು ಗ್ರಾಮದ ಮಂಡೆಕರ ತಮಿಳು ಕಾಲನಿಯನ್ನು ತಲ್ಲಣಗೊಳಿಸಿದ್ದ ಘಟನೆ. 2011 ಸೆ. 20 ರಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್‌ ತೋಟದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಟ್ಯಾಪಿಂಗ್‌ ಕೆಲಸ ಮಾಡುತ್ತಿದ್ದ ತಮಿಳು ಮೂಲದ 25ರ ಹರೆಯದ ಪರಮೇಶ್ವರಿಯನ್ನು ಆಕೆಯ ಗಂಡ ಸುಂದರಮೂರ್ತಿ ಕತ್ತಿಯಿಂದ ಕಡಿದು ಕೊಲೆಗೈದು ತಾನೂ ಚೂರಿಯಿಂದ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಂದಿದ್ದ ಪೊಲೀಸರು ಜೀವನ್ಮರಣ ಸ್ಥಿತಿಯಲ್ಲಿದ್ದ ಸುಂದರಮೂರ್ತಿಯನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದರು.

Advertisement

ಕತ್ತು ಸೀಳಿಕೊಂಡ ಪತಿ
ಪರಮೇಶ್ವರಿಯ ತಲೆಯ ಹಿಂಭಾಗ, ಕುತ್ತಿಗೆ ಹಾಗೂ ಭುಜದಲ್ಲಿ ಕತ್ತಿಯಿಂದ ಕಡಿದ ಗಾಯಗಳಾಗಿತ್ತು. ಸುಂದರಮೂರ್ತಿಯ ಮರ್ಮಾಂಗಕ್ಕೂ ಗಾಯವಾಗಿತ್ತು. ಕುತ್ತಿಗೆಯನ್ನು ತಾನೇ ಕುಯ್ದುಕೊಂಡಿದ್ದರೆ, ಘಟನೆಯ ಸಂದರ್ಭ ಪತಿಯ ಮರ್ಮಾಂಗಕ್ಕೆ ಪರಮೇಶ್ವರಿ ಚೂರಿಯಿಂದ ಇರಿದಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು, ಆತ ಗುಣಮುಖನಾದ ಬಳಿಕ ಬಂಧಿಸಿ ಜೈಲಿಗಟ್ಟಿದ್ದರು. 5 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಆತ ಬಿಡು ಗಡೆಗೊಂಡು ತಮಿಳುನಾಡಿಗೆ ತೆರಳಿದ್ದಾನೆ.

ಚೆನ್ನೈನಲ್ಲಿ ಕೆಲಸ ಮಾಡಿದ್ದ
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ನಿವಾಸಿ ಸುಂದರಮೂರ್ತಿ ಮತ್ತು ಪರಮೇಶ್ವರಿಯ ವಿವಾಹ ನಡೆದು ಅದಾಗಲೇ 5 ವರ್ಷಗಳಾಗಿದ್ದವು. ಮದುವೆಯಾದ ಹೊಸದರಲ್ಲಿ ಚೆನ್ನೈ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಂದರಮೂರ್ತಿ ಪತ್ನಿಯನ್ನೂ ಚೆನ್ನೈಗೆ ಕರೆದೊಯ್ದಿದ್ದ. 2 ವರ್ಷ ಅಲ್ಲಿ ಕೆಲಸ ಮಾಡಿ ಬಳಿಕ ಪತ್ನಿಯೊಂದಿಗೆ ಮಾವನ ಮನೆ ಸೇರಿಕೊಂಡ ಆತ ಮತ್ತೆ ಕೆಲಸಕ್ಕೆ ಹೋಗಲೇ ಇಲ್ಲ. ಅತ್ತೆ, ಮಾವ ಹಾಗೂ ಪತ್ನಿ ಕೆಲಸಕ್ಕೆ ಹೋಗುತ್ತಿದ್ದರೂ ತಾನು ಮಾತ್ರ ಮನೆಯಲ್ಲೇ ಇರುತ್ತಿದ್ದ. ಕುಡಿದು ಬಂದು ಪತ್ನಿಯೊಂದಿಗೆ ಪದೇ ಪದೇ ಜಗಳ ಕಾಯುತ್ತಿದ್ದ. ಕೆಲಸಕ್ಕೆ ಹೋಗದಿದ್ದರೂ ತೊಂದರೆ ಇಲ್ಲ. ಪತ್ನಿಯೊಂದಿಗೆ ಅನ್ಯೋನ್ಯತೆಯಿಂದ ಇರುವಂತೆ ಬುದ್ಧಿವಾದ ಹೇಳುತ್ತಿದ್ದ ಮಾವ ಗೋವಿಂದಸ್ವಾಮಿ ಮತ್ತು ದೇವಕಿ ದಂಪತಿ, ತಮಗೆ ಗಂಡು ಮಕ್ಕಳು ಇಲ್ಲದ ಕಾರಣ ಮಗಳು ಮತ್ತು ಅಳಿಯನನ್ನು ಮನೆಯಲ್ಲೇ ಇರಿಸಿಕೊಂಡಿದ್ದರು. ಆದರೆ ಮಗನಂತೆ ಮನೆ ನಡೆಸಬೇಕಾಗಿದ್ದ ಅಳಿಯ ಸುಂದರ ಮೂರ್ತಿ ಮಾತ್ರ ಮನೆಯನ್ನೇ ಮಸಣವಾಗಿಸಿ ಹೋಗಿದ್ದ.

ಘಟನ ಸ್ಥಳಕ್ಕೆ ಎಸ್ಪಿ ಭೇಟಿ
ಘಟನೆಯ ಸುದ್ದಿ ತಿಳಿದು ಅಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಲಾಬುರಾಮ್‌, ಅಡಿಷನಲ್‌ ಎಸ್ಪಿ ಪ್ರಭಾಕರ್‌ ಹಾಗೂ ಪುತ್ತೂರು ಗ್ರಾಮಾಂತರ ವೃತ್ತನಿರೀಕ್ಷಕ ಎಚ್.ವೈ. ಜಗದೀಶ್‌ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದರು. ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಗಳ ಕೊಲೆಯಲ್ಲಿ ಅಂತ್ಯ
ಮಂಡೆಕರ ನಿವಾಸಿಗಳಾದ ಗೋವಿಂದ ಸ್ವಾಮಿ ಮತ್ತು ದೇವಕಿ ದಂಪತಿಯ ಮೂವರು ಪುತ್ರಿಯರ ಪೈಕಿ ಪರಮೇಶ್ವರಿ ಎರಡನೆಯವರಾಗಿದ್ದರು. ಮಂಡೆಕರದಲ್ಲಿ ನಿಗಮದ ಖಾಯಂ ಕಾರ್ಮಿಕೆಯಾಗಿರುವ ತನ್ನ ತಾಯಿ ದೇವಕಿ ಅವರ ಹೆಸರಿನಲ್ಲಿರುವ ವಸತಿಗೃಹದಲ್ಲಿ ಹೆತ್ತವರೊಂದಿಗೆ ಗಂಡ ಸುಂದರಮೂರ್ತಿ ಹಾಗೂ ಮೂರೂವರೆ ವರ್ಷದ ಪುತ್ರನ ಜತೆ ವಾಸವಾಗಿದ್ದರು. ತಂದೆ ಗೋವಿಂದ ಸ್ವಾಮಿ ಬಂಟ್ವಾಳದ ಬಿ.ಸಿ. ರೋಡ್‌ ಬಳಿ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಕೆಲಸ, ಗಂಡ ಸುಂದರಮೂರ್ತಿ ಮಾತ್ರ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ.

Advertisement

ಘಟನೆ ನಡೆದ ದಿನ ಬೆಳಗ್ಗೆ ಎಂದಿನಂತೆ ಟ್ಯಾಪಿಂಗ್‌ ಕೆಲಸಕ್ಕೆ ಹೋಗಿದ್ದ ಪರಮೇಶ್ವರಿ ಉಪಾಹಾರ ಸೇವಿಸುವುದಕ್ಕಾಗಿ ಮನೆಗೆ ಬಂದಾಗ ಅವರಿಬ್ಬರ ಮಧ್ಯೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಕಲಹ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

••ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next