Advertisement

ಕಡಬ: ಕೆಥೋಲಿಕ್‌ ಯುವ ಸಮ್ಮೇಳನಕ್ಕೆ ತೆರೆ

03:02 PM Nov 09, 2018 | |

ಕಡಬ : ಇಲ್ಲಿನ ಜೋಕಿಮ್ಸ್‌ ಚರ್ಚ್‌ ಮೈದಾನದಲ್ಲಿ 4 ದಿನಗಳಿಂದ ನಡೆಯುತ್ತಿರುವ 9ನೇ ಜಿಲ್ಲಾ ಯುವ ಸಮಾವೇಶವು ಗುರುವಾರ ಮಧ್ಯಾಹ್ನ ವರ್ಣರಂಜಿತ ತೆರೆಕಂಡಿತು. ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ 124 ಚರ್ಚ್‌ ಘಟಕಗಳ ಯುವಕ, ಯುವತಿಯರು ಭಾಗವಹಿಸಿದ್ದರು.

Advertisement

ಮನಮುಟ್ಟಿದ ತರಬೇತಿಗಳು
ಸಮಾವೇಶದಲ್ಲಿ ಯುವ ಸಮುದಾಯದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಹಲವು ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೌಲ್ಯಾಧಾರಿತ ಕುಟುಂಬ ಜೀವನ, ಸಮಾಜದ ಅಗತ್ಯಗಳಿಗೆ ಯುವಕರು ಸ್ಪಂದಿಸಬೇಕಾದ ಅನಿವಾರ್ಯತೆ, ಸಾಮರಸ್ಯ ಮತ್ತು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಯುವ ಸಮುದಾಯದ ಪಾತ್ರ, ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಕುರಿತು ತರಬೇತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ| ಸ್ಟೀವನ್‌ ಕ್ವಾಡ್ರಸ್‌ ಹಾಗೂ ಪ್ರೊ| ಅಲ್ಲಿನ್‌ ಡೇಸಾ ತಂಡದವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನಡೆಸಿಕೊಟ್ಟರು. ವಂ| ಅನಿಲ್‌ ಡಿ’ಸೋಜಾ ಮತ್ತು ತಂಡದವರು ಕುಟುಂಬ ಜೀವನದ ಮಹತ್ವದ ಕುರಿತು ಯುವ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.

ಪರಿಸರ ಸಂರಕ್ಷಣೆಗೆ ಆದ್ಯತೆ
‘ಗೋ ಗ್ರೀನ್‌’ ಹೆಸರಿನಲ್ಲಿ ಭಾರತೀಯ ಯುವ ಸಂಚಲನದ ನೇತೃತ್ವದಲ್ಲಿ ಆರಂಭಿಸಲಾಗಿರುವ ಪರಿಸರ ಸಂರಕ್ಷಣೆ ಅಭಿಯಾನದ ಮಹತ್ವವನ್ನು ಸಮಾವೇಶದಲ್ಲಿ ವಿಶೇಷವಾಗಿ ಕೈಗೆತ್ತಿಕೊಳ್ಳಲಾಗಿತ್ತು. ಯುವ ಸಮುದಾಯ ದಲ್ಲಿ ಪರಿಸರದ ಕುರಿತು ಅರಿವು ಮೂಡಿಸಿ, ಪರಿಸರ ಸಂರಕ್ಷಣೆಯ ವಿಚಾರವನ್ನು ಜಾಗೃತಗೊಳಿಸುವ ತರಗತಿಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರಾರ್ಥಿಗಳಿಗೆ ಕೇರಳದಿಂತ ತರಿಸಲಾಗಿದ್ದ ಕಾಗದದಿಂದ ತಯಾರಿಸಿದ ವಿಶೇಷ ಪರಿಸರ ಸ್ನೇಹಿ ಪೆನ್‌ಗಳನ್ನು ವಿತರಿಸಲಾಗಿತ್ತು. ಕಾಗದದ ಈ ಪೆನ್‌ ಒಳಗೆ ಮೊಳಕೆಯೊಡೆದು ಗಿಡವಾಗುವ ರೀತಿಯ ಬೀಜವನ್ನು ಹುದುಗಿಸಿಡಲಾಗಿದ್ದು, ಪೆನ್ನನ್ನು ಬಳಸಿ ಬಿಸಾಡಿದಾಗ ಆ ಬೀಜ ಮಣ್ಣಿಗೆ ಸೇರಿ ಮೊಳಕೆಯೊಡೆದು ಸಸಿಯಾಗುವ ಮೂಲಕ ಪ್ರಕೃತಿಗೆ ಕೊಡುಗೆ ನೀಡುವಂತೆ ತಯಾರಿಸಲಾಗಿತ್ತು.

ದೇಸೀ ಉಡುಪುಗಳ ಮೆರುಗು
ಬಹುತೇಕ ಶಿಬಿರಾರ್ಥಿಗಳು ಶಿಬಿರದ ಸಮಾರೋಪ ಸಮಾರಂಭದಲ್ಲಿ ದೇಸೀ ಉಡುಪುಗಳನ್ನು ಧರಿಸಿದ್ದರು. ಯುವಕರು ಬಿಳಿ ಪಂಚೆ, ಧೋತಿ ಉಟ್ಟು, ಅಂಗಿ ಧರಿಸಿದ್ದರೆ ಯುವತಿಯರು ಸೀರೆಯುಟ್ಟು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಮೈದಾನದಲ್ಲಿ ರಚಿಸಲಾಗಿದ್ದ ಭಾರತ ದೇಶದ ಬೃಹತ್‌ ನಕಾಶೆಯೊಳಗೆ ರಾತ್ರಿ ವೇಳೆ ಮೊಂಬತ್ತಿಗಳನ್ನು ಹಚ್ಚಿ ‘ದೇಶವನ್ನು ಬೆಳಗಿಸೋಣ’ ಎನ್ನುವ ಸಂದೇಶದೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಶಿಬಿರವನ್ನು ಯಶಸ್ವಿಯಾಗಿ ಸಂಘಟಿಸಿದ ಭಾರತೀಯ ಕೆಥೋಲಿಕ್‌ ಯುವ ಸಂಚಲನದ ಪುತ್ತೂರು ವಲಯ ಹಾಗೂ ಕಡಬ ಘಟಕದ ಸದಸ್ಯರ ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next