Advertisement

ಕಡಬ: ಬೆಳೆಯುತ್ತಿರುವ ಪೇಟೆಗೆ ವ್ಯವಸ್ಥಿತ ವಾಹನ ವ್ಯವಸ್ಥೆ ಬೇಕು

04:10 PM Mar 21, 2017 | Team Udayavani |

ಕಡಬ: ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬ ಬೆಳೆಯುತ್ತಿರುವ ಪಟ್ಟಣ. ಆದರೆ ಇಲ್ಲಿ ಸಮರ್ಪಕ ವಾಹನ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವುದು ಅಭಿವೃದ್ಧಿಗೆ ತೊಡಕಾಗಿದೆ.

Advertisement

ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಜನರು ಕಿರಿ ಕಿರಿ ಅನುಭವಿಸುವಂತಾಗಿದೆ. ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕಡಬ ಪೇಟೆಯ ಮೂಲಕವೇ ಹಾದುಹೋಗುತ್ತಿದೆ. ಪೇಟೆಯಲ್ಲಿ ವಾಹನಗಳು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಯಾಗಿ ನಿಲ್ಲುತ್ತಿವೆ. ಆಟೋಗಳು, ಬಾಡಿಗೆ ಜೀಪು, ಪಿಕಪ್‌, ಮಿನಿಬಸ್‌ಗಳು, ಟೆಂಪೋ ಟ್ರಾಕ್ಸ್‌ಗಳನ್ನು ರಸ್ತೆಯ ಪಕ್ಕದಲ್ಲೇ ನಿಲ್ಲಿಸುವುದರಿಂದ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. 

ವ್ಯಾಪಾರ ವ್ಯವಹಾರಗಳಿಗಾಗಿ ಪೇಟೆಗೆ ಬರುವ ಜನರಿಗೂ ಇಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲದಾಗಿದೆ. ಪಂಚಾಯತ್‌ನವರು ಪೇಟೆಯಲ್ಲಿ ಪಾರ್ಕಿಂಗ್‌ಗಾಗಿ ರಸ್ತೆಯ ಪಕ್ಕದ ಗುಡ್ಡ ಅಗೆದು ಮಣ್ಣು ತೆಗೆದರೂ ಪ್ರಯೋಜನವಾಗಿಲ್ಲ. ಪಂಚಾಯತ್‌, ಕಂದಾಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಯೋಜನೆ ರೂಪಿಸಿ ಕಡಬದ ಪಾರ್ಕಿಂಗ್‌ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎನ್ನುತ್ತಾರೆ ನಾಗರಿಕರು.

ಸುಸಜ್ಜಿತ ಪಾರ್ಕಿಂಗ್‌ ಇನ್ನೂ ಕನಸು
ಗ್ರಾ.ಪಂ. ವತಿಯಿಂದ ಕಡಬದಲ್ಲಿ ಶುಲ್ಕ ಸಹಿತ ಸುಸಜ್ಜಿತ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಮುಂದಾಗಿ 3 ವರ್ಷಗಳಾದವು. ಅದಕ್ಕಾಗಿ ಸೈಂಟ್‌ ಜೋಕಿಮ್ಸ್‌ ಚರ್ಚ್‌ ಮುಂಭಾಗದಲ್ಲಿ ರಸ್ತೆಯ ಪಕ್ಕ 2 ಕಡೆ ಹಾಗೂ ದೈವಗಳ ಮಾಡದ ಬಳಿ ರಸ್ತೆಯ ಪಕ್ಕದ ಮಣ್ಣಿನ ದಿಣ್ಣೆಯನ್ನು ಸಮತಟ್ಟುಗೊಳಿಸಲಾಗಿತ್ತು. ಸುಸಜ್ಜಿತ ಪಾರ್ಕಿಂಗ್‌, ಶೌಚಾಲಯ, ಕುಡಿಯುವ ನೀರು, ಸಣ್ಣ ಕೈತೋಟ ಹೀಗೆ ಯೋಜನೆ ರೂಪಿಸಲಾಗಿತ್ತು.

ಶೀಘ್ರವೇ ಅನುಷ್ಠಾನ 
ಪೇಟೆಯಲ್ಲಿ ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದು ತಲೆನೋವಾಗಿ ಪರಿಣಮಿಸಿದ್ದು, ಸರಿಯಾದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾ.ಪಂ.ನಿಂದ ವಾಹನ ಪಾರ್ಕಿಂಗ್‌ಗಾಗಿ ಗುರುತಿಸಲ್ಪಟ್ಟ ಜಾಗಕ್ಕೆ ಜಿಲ್ಲಾಧಿಕಾರಿಯವರು ವರದಿ ಕೇಳಿದ್ದ ಹಿನ್ನೆಲೆಯಲ್ಲಿ ಆಗಿನ ಉಪ ನಿರೀಕ್ಷಕರು ಪ್ರತಿಕ್ರಿಯಿಸಿದ್ದರು. ಉದ್ದೇಶಿತ ಪಾರ್ಕಿಂಗ್‌ ವ್ಯವಸ್ಥೆ ಶೀಘ್ರವೇ ಅನುಷ್ಠಾನಗೊಂಡರೆ ಸೂಕ್ತ.
-ಪ್ರಕಾಶ್‌ ದೇವಾಡಿಗ, ಕಡಬ ಆರಕ್ಷಕ ಉಪನಿರೀಕ್ಷಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next