Advertisement

ಕಡಬ, ಮರ್ದಾಳ ಪರಿಸರದಲ್ಲಿ ಮತ್ತೆ ವ್ಯಾಪಕ ಡೆಂಗ್ಯೂ ಜ್ವರ ಬಾಧೆ

02:42 PM Jun 01, 2017 | Team Udayavani |

ಕಡಬ : ಕಳೆದ ವರ್ಷ ಕಡಬ ಪರಿಸರದ ಜನರನ್ನು ಇನ್ನಿಲ್ಲದಂತೆ ಕಾಡಿದ್ದ  ಡೆಂಗ್ಯೂ ಜ್ವರ ಈ ಬಾರಿ ಮತ್ತೆ ವಕ್ಕರಿಸಿದೆ. ಇಲ್ಲಿಯ ಸರಕಾರಿ ಆಸ್ಪತ್ರೆ ಹಾಗೂ ಖಾಸಗಿ ಚಿಕಿತ್ಸಾಲಯಗಳ ಮುಂದೆ ಶಂಕಿತ ಡೆಂಗ್ಯೂ ಜ್ವರ ಪೀಡಿತರು ಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರದ ಬಹುತೇಕ ಎಲ್ಲ   ಮನೆಗಳಲ್ಲಿಯೂ ಜ್ವರ ಪೀಡಿತರಿದ್ದಾರೆ.

Advertisement

ಮರ್ದಾಳ ಪರಿಸರದಲ್ಲಿ  ಹೆಚ್ಚು
ಅವಧಿಗೂ ಮುನ್ನವೇ ಸುರಿಯಲಾರಂಭಿಸಿದ ಮಳೆಯಿಂದಾಗಿ ಕಾಣಿಸಿಕೊಂಡಿರುವ ಜ್ವರದ ಬಾಧೆ ಮರ್ದಾಳ ಗ್ರಾ.ಪಂ. ವ್ಯಾಪ್ತಿಯ ಬಂಟ್ರ ಹಾಗೂ 102ನೇ ನೆಕ್ಕಿಲಾಡಿ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ಹತ್ತಿರದ ಐತ್ತೂರು ಹಾಗೂ ಕೋಡಿಂಬಾಳ ಗ್ರಾಮಗಳಲ್ಲಿಯೂ ಜ್ವರ ಕಾಣಿಸಿಕೊಂಡಿದೆ. ಕಳೆದ 1 ತಿಂಗಳಿನಿಂದ ಮರ್ದಾಳ ಪರಿಸರದ ಕೋಳಂತ್ತಾಡಿ, ಮುಂಚಿಕಾಪು, ಕಂಪ, ಕೇನ್ಯ, ಪಾಲೆತ್ತಡ್ಕ, ನೀರಾಜೆ, ದೇವರಮಾರು, ಕೆದಿಲ, ಚಾಕೊಟೆಕೆರೆ, ಕೆಂಚಭಟ್ರೆ, ನೆಕ್ಕಿತ್ತಡ್ಕ, ಕುಡಾಲ ಪ್ರದೇಶದ ಪ್ರತಿ ಮನೆಯಲ್ಲಿಯೂ ಒಬ್ಬಿಬ್ಬರು ಜ್ವರ ಪೀಡಿತರು ಕಂಡುಬರುತ್ತಿದ್ದಾರೆ.  ಹೆಚ್ಚಿನವರು ಸ್ಥಳೀಯ ಚಿಕಿತ್ಸಾಲಯಗಳಲ್ಲಿ ಹಾಗೂ ಕಡಬದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಜ್ವರ ಉಲ್ಬಣಿಸಿದ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹೆಚ್ಚಿನ ಜ್ವರ ಪೀಡಿತರು ಸ್ಥಳೀಯವಾಗಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಕಡಬದ ಹಿರಿಯ ಖಾಸಗಿ ವೈದ್ಯ ಡಾ| ಸಿ.ಕೆ. ಶಾಸ್ತಿ ಅವರು ತಿಳಿಸಿದ್ದಾರೆ. 

ಕಳೆದ ವರ್ಷ ಇದೇ ಸಮಯದಲ್ಲಿ  ಆರೋಗ್ಯ ಇಲಾಖೆಯ ಜಿಲ್ಲಾ ಪ್ರಯೋಗಾಲಯ ಸುಮಾರು ಇಡೀ ಜಿಲ್ಲೆಯ ವ್ಯಾಪ್ತಿಯಲ್ಲಿ  53 ಡೆಂಗ್ಯೂ ಪ್ರಕರಣಗಳನ್ನು ದೃಢಪಡಿಸಿತ್ತು. ಆದರೆ ಈ ಬಾರಿ ಜಿಲ್ಲಾ ಪ್ರಯೋಗಾಲಯದಲ್ಲಿ  ಕೇವಲ 17 ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಆದರೆ ಖಾಸಗಿ ಪ್ರಯೋಗಾಲಯಗಳ ವರದಿಯ ಪ್ರಕಾರ ಕಡಬ ಪರಿಸರದಲ್ಲಿಯೇ ಕಳೆದ 20 ದಿನಗಳ ಅವಧಿಯಲ್ಲಿ ಸುಮಾರು 45ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.

ಭೀತಿಗೆ ಕಾರಣವಾದ ಮರಣ
ಮರ್ದಾಳದ ಕಂಪ ನಿವಾಸಿ ಜನಾರ್ದನ ಅವರ ಪತ್ನಿ ಪುಷ್ಪಲತಾ (37) ಅವರು  ಜ್ವರದಿಂದ ತೀವ್ರ ಅಸ್ವಸ್ಥರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ 5 ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪರಿಸರದ ಜನರಲ್ಲಿ ಭೀತಿಗೆ ಕಾರಣವಾಗಿದೆ. ಆದರೆ ಆಕೆ ಡೆಂಗ್ಯೂ ಜ್ವರ ಪೀಡಿತರಾಗಿದ್ದರು ಎನ್ನುವುದನ್ನು  ಆರೋಗ್ಯ ಇಲಾಖೆ ದೃಢಪಡಿಸಿಲ್ಲ. ಪುಷ್ಪಾವತಿ ಅವರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ವರದಿ ಬಂದ ಬಳಿಕವಷ್ಟೇ ಈ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಆರೋಗ್ಯ ಇಲಾಖಾ ಮೂಲಗಳು ತಿಳಿಸಿವೆ. ಪುಷ್ಪಾವತಿ ಅವರ ಮನೆಯ ಎಲ್ಲ  ಸದಸ್ಯರಿಗೂ ಜ್ವರ ಬಾಧಿಸಿದೆ. ಅವರ ಮನೆ ಇರುವ ಕಂಪ ಪರಿಸರದಲ್ಲಿ  ಜ್ವರ ವ್ಯಾಪಕವಾಗಿ ಹರಡಿದೆ.

ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿದ ಪಂಚಾಯತ್‌ 
ಮರ್ದಾಳ ಭಾಗದಲ್ಲಿ ಡೆಂಗ್ಯೂ ಜ್ವರ ನಿಯಂತ್ರಣದ ಕಾರ್ಯದಲ್ಲಿ ಆರೋಗ್ಯ ಇಲಾಖೆಗೆ ಗ್ರಾ.ಪಂ. ಆಡಳಿತವೂ ಸಂಪೂರ್ಣ ನೆರವು ನೀಡುತ್ತಿದೆ. ಜ್ವರ ಪೀಡಿತ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಸ್ಥಳೀಯ ಸಂಘ-ಸಂಸ್ಥೆಗಳು ಕೂಡ ಸಹಕಾರ ನೀಡುತ್ತಿದೆ. ಆರೋಗ್ಯ ಇಲಾಖಾ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಸಿಬಂದಿ ಹಾಗೂ ಆಶಾ ಕಾರ್ಯಕರ್ತೆಯರು  ಮನೆ ಮನೆ ಭೇಟಿ ನಡೆಸಿ ಜಾಗೃತಿ ಮೂಡಿಸುತ್ತಿದ್ದಾರೆ. ಫಾಗಿಂಗ್‌ನೊಂದಿಗೆ ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ ಸೊಳ್ಳೆ ಮರಿಗಳು  ಬೆಳೆಯದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಮರ್ದಾಳ ಗ್ರಾ.ಪಂ. ವತಿಯಿಂದ ಫಾಗಿಂಗ್‌ಗೆ ಇಂಧನ, ಕಾರ್ಮಿಕರಿಗೆ ಕೂಲಿ, ಮನೆ ಮನೆ ಭೇಟಿಗೆ ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಜನರಿಗೆ ವಿತರಿಸಲು ಜಾಗೃತಿ ಕರಪತ್ರ ಮುದ್ರಿಸಿ ನೀಡಲಾಗಿದೆ.

Advertisement

– ನಾಗರಾಜ್‌ ಎನ್‌.ಕೆ. ಕಡಬ

Advertisement

Udayavani is now on Telegram. Click here to join our channel and stay updated with the latest news.

Next