ಪಶ್ಚಿಮ ಬಂಗಾಳ: ʼಕಚ್ಚಾ ಬಾದಮ್ʼ ಈ ಹಾಡು ಎಲ್ಲರಿಗೂ ನೆನಪಿರಬಹುದು. ರಾತ್ರೋ ರಾತ್ರಿ ಸಾಮಾನ್ಯ, ಬಡ ಕಡಲೆಕಾಯಿ ವ್ಯಾಪಾರಿಯನ್ನು ಜನಪ್ರಿಯಗೊಳಿಸಿದ ಹಾಡು, ಇಂಟರ್ ನೆಟ್ ಯುಗದಲ್ಲಿರುವವರಿಗೆ ಖಂಡಿತ ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ.
ಭುವನ್ ಬಡ್ಯಾಕರ್ ಎಂಬ ಕಡಲೆಕಾಯಿ ವ್ಯಾಪಾರಿ, ಕಡಲೆಯನ್ನು ಮಾರುವಾಗ ಹಾಡಿದ ಹಾಡನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಿಡಲಾಗಿತ್ತು. ಕೆಲವೇ ಸೆಕೆಂಡ್ ಗಳ ಹಾಡು ಭುವನ್ ಬಡ್ಯಾಕರ್ ಎಂಬ ಸಾಮಾನ್ಯ ಕಡಲೆಕಾಯಿ ವ್ಯಾಪಾರಿಯನ್ನು ವೈರಲ್ ಮಾಡಿದ್ದು ಗೊತ್ತೇ ಇದೆ.
ಫೇಮ್ ಸಿಕ್ಕ ಬಳಿಕ ಕಾರು, ಮನೆ, ಐಷಾರಾಮಿ ಜೀವನವನ್ನು ಮಾಡುತ್ತಿದ್ದ ಭುವನ್ ಬಡ್ಯಾಕರ್ ಕೆಲ ತಿಂಗಳ ಹಿಂದೆ ಕಾರು ಅಪಘಾತದಿಂದ ಗಾಯಗೊಂಡು ಚೇತರಿಸಿಕೊಂಡಿದ್ದರು. ʼ ಹೋಬೆ ನಕಿ ಬೌʼ ಎಂಬ ಮತ್ತೊಂದು ಹಾಡಿನಲ್ಲೂ ಭುವನ್ ಕಾಣಿಸಿಕೊಂಡಿದ್ದರು.
ಇದೀಗ ಭುವನ್ ಇನ್ನೊಂದು ಹಾಡು ಮಾಡಿದ್ದು ಅದನ್ನು ರಿಲೀಸ್ ಮಾಡುವ ತಯಾರಿಯಲ್ಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ನಾನು ಕಡಲೆಕಾಯಿ ಮಾರಲು ಇಷ್ಟಪಡುವುದಿಲ್ಲ ಅಂಥೇನಿಲ್ಲ. ಆದರೆ ಈಗ ನನಗೆ ಅದಕ್ಕೆ ಸಮಯ ಸಿಗುವುದಿಲ್ಲ. ನನ್ನ ಹಾಡುಗಳೇ ನನ್ನ ಜೀವನದ ಪ್ರತಿಬಿಂಬವಾಗಿದೆ. ನನ್ನ ಬಳಿ ಮನೆಯಿದೆ. ಕಾರು ಇದೆ. ಸುಂದರವಾದ ಮಹಿಳೆಯೂ (ಹೆಂಡತಿ) ಇದ್ದಾರೆ ಎಂದು ತಮ್ಮ ಬದುಕಿನ ಬಗ್ಗೆ ಹೇಳಿಕೊಂಡರು.
ಈ ಮೇಲಿನ ವಿಷಯಗಳನ್ನೇ ನಾನು ನನ್ನ ಮುಂದಿನ ಹಾಡಿನಲ್ಲಿ ತೋರಿಸಲಿದ್ದೇನೆ ಎಂದರು. ಹೊಸ ಹಾಡಿನ ರೆಕಾರ್ಡಿಂಗ್ ಕೂಡ ಮುಗಿದದೆ. ‘Ekhon ami bechi na badamʼ (ಈಗ ನಾನು ಕಡಲೆಕಾಯಿ ಮಾರುವುದಿಲ್ಲ) ಎನ್ನುವುದು ಇವರ ಮುಂದಿನ ಆಲ್ಬಂ ಹೆಸರು ಎಂದು ವರದಿ ತಿಳಿಸಿದೆ.