ಕಾಬೂಲ್ : ಭಾರತೀಯ ದೂತಾವಾಸವೂ ಸೇರಿದಂತೆ ಹಲವಾರು ದೂತಾವಾಸಗಳು ಇರುವ ಕಾಬೂಲಿನ ಅತ್ಯಂತ ಗರಿಷ್ಠ ಭದ್ರತೆಯ ರಾಜತಾಂತ್ರಿಕ ಪ್ರದೇಶದಲ್ಲಿ ಇಂದು ಬುಧವಾರ ಪ್ರಬಲ ಕಾರ್ ಬಾಂಬ್ ನ್ಪೋಟ ಸಂಭವಿಸಿದ್ದು ಕನಿಷ್ಠ 80ಕ್ಕೂ ಅಧಿಕ ಜನರು ಮಡಿದಿರುವ ಅಥವಾ ಗಾಯಗೊಂಡಿರುವ ಶಂಕೆ ಇದೆ.
ಭಾರತೀಯ ದೂತಾವಾಸದ ಸಿಬಂದಿಗಳೆಲ್ಲರೂ ಸುರಕ್ಷಿತರಾಗಿರುವರೆಂದು ತಿಳಿದುಬಂದಿದೆ.
ಪ್ರಬಲ ಕಾರ್ ಬಾಂಬ್ ಸ್ಫೋಟ ಸಂಭವಿಸಿದೊಡನೆಯೇ ಭಾರೀ ಪ್ರಮಾಣದ ದಟ್ಟನೆಯ ಕಪ್ಪು ಹೊಗೆ ರಾಜತಾಂತ್ರಿಕ ಪ್ರದೇಶವನ್ನು ಆವರಿಸಿಕೊಂಡು ಗಗನದಲ್ಲಿ ಅತೀ ಎತ್ತರದ ವರೆಗೂ ಅದು ಚಾಚಿಕೊಂಡಿತ್ತು; ಸ್ಫೋಟದಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ ಇಲ್ಲವೇ ಮಡಿದಿದ್ದಾರೆ ಎಂದು ಒಳಾಡಳಿತ ಸಚಿವಾಲಯ ತಿಳಿಸಿದೆ.
ಸ್ಫೋಟದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಮತ್ತು ಇವರಲ್ಲಿ ಹೆಚ್ಚಿನವರು ಪೌರರೇ ಆಗಿದ್ದಾರೆ; ಗಾಯಾಳುಗಳನ್ನು ಕಾಬೂಲಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ; ಮಡಿದವರು ಎಷ್ಟು ಎಂಬ ಬಗ್ಗೆ ನಮಗೆ ನಿಖರವಾಗಿ ತಿಳಿದಿಲ್ಲ ಎಂದು ಆರೋಗ್ಯ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಆರು ದಿನಗಳ ಯುರೋಪ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವಿಷಯದ ಬಗ್ಗೆ ತಾಜಾ ಮಾಹಿತಿಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಬೂಲ್ ಪೊಲೀಸ್ ವಕ್ತಾರ ಬಶೀರ್ ಮುಜಾಹಿದ್ ಅವರ ಪ್ರಕಾರ ಹಲವಾರು ಮಂದಿ ಸ್ಫೋಟದಲ್ಲಿ ಗಾಯಗೊಂಡಿದ್ದು ಅನೇಕರು ಗಾಯಗೊಂಡಿದ್ದಾರೆ.