ಜೀವನದಲ್ಲಿ ಸಾಧಿಸುವ ಗುರಿಯೊಂದಿದ್ದರೆ ಸಾಲದು, ಗುರಿಯನ್ನು ಈಡೇರಿಸಲು ಸತತ ಪ್ರಯತ್ನ ಹಾಗೂ ಪರಿಶ್ರಮ ಕೂಡ ಅಗತ್ಯ. ಅಂತೆಯೇ ಇಲ್ಲೊಬ್ಬ ಕ್ರೀಡಾಪಟು ಎಳವೆಯಿಂದಲೇ ಕ್ರೀಡಾ ಜಗತ್ತಿಗೆ ಮಾದರಿಯಾಗುವ ಹಂಬಲದಿಂದ ಮುನ್ನುಗ್ಗುತ್ತಿದ್ದಾರೆ, ಅವರೇ ತೃಪ್ತಿ ಪಿ.ಜಿ. ಬಾಲ್ಯದಿಂದಲೇ ಕಬಡ್ಡಿಯಲ್ಲಿ ಗುರುತಿಸಿಕೊಂಡಿರುವ ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಿದ್ದಾರೆ.
ತೃಪ್ತಿ ಪಿ.ಜಿ. ಅವರು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಪೆರಾಜೆಯ ಶ್ರೀಮತಿ ಮತ್ತು ಗಂಗಾಧರ ಪಿ.ಜಿ. ದಂಪತಿಯ ಪುತ್ರಿ. ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿರುವ ಇವರು, ಪ್ರಸ್ತುತ ಮಂಗಳೂರು ವಿವಿಯಲ್ಲಿ ದೈಹಿಕ ಶಿಕ್ಷಕ ಶಿಕ್ಷಣ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಬಡ್ಡಿಯಲ್ಲೇ ತನ್ನ ಭವಿಷ್ಯವನ್ನು ರೂಪಿಸಬೇಕೆಂದು ಹಠದಿಂದ ಮುನ್ನುಗ್ಗುತ್ತಿರುವ ಇವರಿಗೆ ಮನೆಯವರು ಮತ್ತು ಗುರುಗಳು ಸದಾ ಬೆನ್ನೆಲುಬಾಗಿದ್ದಾರೆ.
ಪ್ರೌಢಶಾಲಾ ಮತ್ತು ಪದವಿ ಪೂರ್ವ ಹಂತದಲ್ಲೇ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ದೊಡ್ಡಣ್ಣ ಬರಮೇಲು ಮತ್ತು ಕೃಷ್ಣಾನಂದ ಪೂರಕ ತರಬೇತಿ ನೀಡಿದರು. ಅದರ ಫಲವಾಗಿಯೇ ಇಂದು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿಯಾಗಿದ್ದಾರೆ.
ಇವರ ಅಪ್ರತಿಮ ಸಾಧನೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ತಮಿಳುನಾಡಿನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾಟದಲ್ಲಿ ಚಿನ್ನದ ಪದಕ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾಟದಲ್ಲಿ ಬೆಳ್ಳಿಯ ಪದಕ ಮತ್ತು ವೆಲ್‌ಟೆಕ್ ವಿಶ್ವವಿದ್ಯಾನಿಲದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ನಾಯಕಿಯಾಗಿ ಬೆಳ್ಳಿಯ ಪದಕ ಹೀಗೆ ಮುಂತಾದ ಬಹುಮಾನಗಳನ್ನು ಪಡೆದಿದ್ದಾರೆ. ಸತತ ನಾಲ್ಕು ಬಾರಿ ಅಖೀಲ ಭಾರತ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ, ಈ ವರ್ಷ ಒರಿಸ್ಸಾದಲ್ಲಿ ನಡೆಯುವ ಖೇಲೋ ಇಂಡಿಯಾದಲ್ಲಿ ಆಡಲು ಅವಕಾಶ ಪಡೆದುಕೊಂಡ ಕೀರ್ತಿ ತೃಪ್ತಿಗೆ ಸಲ್ಲುತ್ತದೆ.
ತೃಪ್ತಿ ಅವರು ಕೇವಲ ಕಬಡ್ಡಿ ಮಾತ್ರವಲ್ಲ, ಹ್ಯಾಂಡ್‌ಬಾಲ್, ಕ್ರಿಕೆಟ್ ಮತ್ತು ಬಾಸ್ಕೆಟ್‌ಬಾಲ್ ಮುಂತಾದ ಆಟಗಳನ್ನೂ ಆಡುತ್ತಾರೆ. ಭವಿಷ್ಯದಲ್ಲಿ ಇವರಿಗೆ ಭಾರತೀಯ ಕಬಡ್ಡಿ ತಂಡವನ್ನು ಪ್ರತಿನಿಧಿಸುವ ಆಸೆಯಿದೆ. ಸಮಾಜದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಾತೊರೆಯುವ ವಿದ್ಯಾರ್ಥಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಕೊಡುವ ಆಕಾಂಕ್ಷೆ ಇವರದು. ಮುಂದಿನ ದಿನಗಳಲ್ಲಿ ಇವರ ಎಲ್ಲ ಇಚ್ಛೆಗಳೂ ಈಡೇರಿ ಒಬ್ಬ ಮಾದರಿ ಕ್ರೀಡಾಪಟುವಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
ನಿಧಿ ಪ್ರಸನ್ನ, ಉಡುಪಿ , ಮಂಗಳೂರು ವಿವಿ